ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮಕಿಗೆ ಒಲಿದ ಸಮ್ಮೇಳನ ಅಧ್ಯಕ್ಷ ಪಟ್ಟ

Last Updated 19 ಜುಲೈ 2019, 19:30 IST
ಅಕ್ಷರ ಗಾತ್ರ

ಹೊಸಪೇಟೆ: ಗಮಕಗಳ ಮೂಲಕ ಹೆಸರು ಮಾಡಿರುವ ರಂಗೋಪಂತ ನಾಗರಾಜರಾಯ ಅವರಿಗೆ ಮೂರನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಪಟ್ಟ ಒಲಿದು ಬಂದಿದೆ.

86 ವರ್ಷ ವಯಸ್ಸಿನ ನಾಗರಾಜರಾಯ ಅವರು 50ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ನೂರಾರು ಗಮಕಗಳನ್ನು ರಚಿಸಿ, ಅದರ ಮಹತ್ವ ಎಲ್ಲೆಡೆ ಸಾರಿದ್ದಾರೆ. ಎಲೆಮರೆಕಾಯಿಯಂತೆ ಕೆಲಸ ಮಾಡಿಕೊಂಡು ಬಂದಿದ್ದ ಅವರನ್ನು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಇಳಿವಯಸ್ಸಿನಲ್ಲಿ ಗುರುತಿಸಿ ಅವರಿಗೆ ಗೌರವ ತಂದುಕೊಂಡುವ ಕೆಲಸ ಮಾಡಿದೆ.

ಮೊದಲು ಎಂ.ಜೆ. ನಗರದಲ್ಲಿ ನೆಲೆಸಿದ್ದ ನಾಗರಾಜರಾಯರು, ಸದ್ಯ ದೇವಾಂಗಪೇಟೆಯಲ್ಲಿ ಉಳಿದುಕೊಂಡಿದ್ದಾರೆ. ಸುಮಾರು 40 ವರ್ಷ ವಾಸವಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಶಿಕ್ಷಕನ ಕೆಲಸ ಪ್ರವೃತ್ತಿಯಾದರೆ, ಸಾಹಿತ್ಯದ ಗೀಳು ಪ್ರವೃತ್ತಿ ಆಗಿ ಬೆಳೆಸಿಕೊಂಡಿದ್ದರು.

ಅವರ 28 ಪುಸ್ತಕಗಳು ಪ್ರಕಟಗೊಂಡಿವೆ. 22 ಅಪ್ರಕಟಿತ ಪುಸ್ತಕಗಳಿವೆ. 16 ಸಾವಿರ ಭಾಮಿನಿ ಷಟ್ಪದಿಗಳ ‘ಶ್ರೀಕೃಷ್ಣ ಲೀಲಾಮೃತಂ’ ಮಹಾಕಾವ್ಯ ರಚಿಸಿದ್ದಾರೆ. ಆದರೆ, ಆರ್ಥಿಕ ಸಮಸ್ಯೆಯ ಕಾರಣಕ್ಕಾಗಿ ಆ ಪುಸ್ತಕವನ್ನು ಪ್ರಕಟಿಸಲು ಅವರಿಗೆ ಸಾಧ್ಯವಾಗಿಲ್ಲ. ಅತ್ಯಂತ ಮೌಲಿಕ, ಉತ್ಕೃಷ್ಟವಾದ ಮಹಾಕಾವ್ಯವನ್ನು ಪ್ರಕಟಿಸಲು ಕೆಲ ಸಾಹಿತಿಗಳು ಹಂಪಿ ಕನ್ನಡ ವಿಶ್ವವಿದ್ಯಾಲಯದ ಮೊರೆ ಹೋಗಿದ್ದರು. ಆದರೆ, ವಿಶ್ವವಿದ್ಯಾಲಯ ಭರವಸೆ ಬಿಟ್ಟರೆ ಬೇರೇನೂ ಮಾಡಲಿಲ್ಲ ಎಂಬ ಕೊರಗು ಅವರಲ್ಲಿದೆ. ಈಗಲಾದರೂ ಆ ಕೆಲಸ ನೆರವೇರಬೇಕು ಎಂಬುದು ಸಾಹಿತಿಗಳ ಒಕ್ಕೊರಲ ಬೇಡಿಕೆಯಾಗಿದೆ.

‘ಭಜಗೋವಿಂದಂ’, ‘ಕರ್ನಾಟಕ ವೈಭವ ಪ್ರಜ್ಞೆ’, ‘ಕಬೀರ ವಚನಾಮೃತ’, ‘ಶ್ರೀ ಮಾರ್ಕಂಡೇಯ ಸುಪ್ರಭಾತ’, ‘ಮಹಾಕವಿ ಕುಮಾರವ್ಯಾಸ’, ‘ಪುರಂದರ ನವರತ್ನ ಮಾಲಿಕೆ’, ‘ಶ್ರೀ ಕನಕಸ್ತುತಿ ನವರತ್ನ ಮಾಲಿಕೆ’, ‘ಊರಮ್ಮ ಮಹಿಮೆ’, ‘ ಕಬೀರ ವಚನಾಮೃತ’, ‘ಕರ್ನಾಟಕ ವೈಭವ ಪ್ರಜ್ಞೆ’, ‘ಕನ್ನಡಗುಡಿ‘, ‘ಶ್ರೀ ಹುಲಿಗಾಂಬಾ ಸುಪ್ರಭಾತಂ‘,‘ಮಹಾಕವಿ ಕುಮಾರವ್ಯಾಸ’ ನಾಗರಾಜರಾಯರ ರಚನೆಯ ಪ್ರಮುಖ ಕೃತಿಗಳು.

ಭಾರತ–ಚೀನಾ ಯುದ್ಧಕ್ಕೆ ಸಂಬಂಧಿಸಿದ ಗೀತ ನಾಟಕ, ಪಾಂಚರಾತ್ರ ನಾಟಕಗಳು ಪ್ರಮುಖವಾದವುಗಳು. ಪ್ರಾಚೀನ ಹಾಗೂ ಹೊಸಗನ್ನಡ ಕಾವ್ಯಗಳನ್ನು ಸೊಗಸಾಗಿ ಗಮಕ ಕಲೆಯಲ್ಲಿ ವಾಚಿಸಿ, ಹೇಳಬಲ್ಲ ಚಾಕಚಕ್ಯತೆ ಅವರದು. ಅವರಿಗೆ ‘ಕರ್ನಾಟಕ ಕವಿ ಕೇಸರಿ’, ‘ಗಮಕ ಕಲಾನಿಧಿ, ‘ಶ್ರೀಕೃಷ್ಣ ಕವಿ’ ಹಾಗೂ ‘ಕಾವ್ಯ ರತ್ನಾಕರ’ ಪ್ರಶಸ್ತಿಗಳು ಸಂದಿವೆ.

ಜು. 27ರಂದು ನಗರದಲ್ಲಿ ನಡೆಯಲಿರುವ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ ಸಂದಿದೆ. ‘ನಾನು ಯಾವುದೇ ಫಲಾಪೇಕ್ಷೆಯಿಲ್ಲದೆ ನನಗೆ ಇಷ್ಟವಾದ ವಿಷಯಗಳನ್ನು ಕೈಗೆತ್ತಿಕೊಂಡು ಪುಸ್ತಕಗಳನ್ನು ರಚಿಸಿದ್ದೇನೆ. ನಾನು ಸಂತೃಪ್ತಿಯಿಂದ ಜೀವನ ನಡೆಸುತ್ತಿದ್ದೇನೆ. ಇಳಿವಯಸ್ಸಿನಲ್ಲಿ ನನ್ನನ್ನು ಗುರುತಿಸಿ, ಸರ್ವಾಧ್ಯಕ್ಷನಾಗಿ ಆಯ್ಕೆ ಮಾಡಿರುವುದಕ್ಕೆ ಸಂತಸವಾಗಿದೆ’ ಎಂದು ರಂಗೋಪಂತ ನಾಗರಾಜರಾಯರು ಹೇಳಿದಾಗ ಅವರ ಕಣ್ಣಾಲಿಗಳು ಒದ್ದೆಯಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT