ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲೆಕ್ಸ್‌, ಬ್ಯಾನರ್‌ ತೆರವು ಕಾರ್ಯಾಚರಣೆ

Last Updated 27 ಮಾರ್ಚ್ 2018, 19:43 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿಗೊಂಡಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಹಾಗೂ ಬೆಂಬಲಿಗರು ಅಳವಡಿಸಿರುವ ಫ್ಲೆಕ್ಸ್‌, ಹೋರ್ಡಿಂಗ್‌, ಬ್ಯಾನರ್‌ಗಳ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ಕೈಗೊಂಡಿದೆ.

ಶೇ 70ರಷ್ಟು ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್‌ ಹಾಗೂ ಪೋಸ್ಟರ್‌ಗಳನ್ನು ಮಂಗಳವಾರ ತೆರವುಗೊಳಿಸಲಾಗಿದೆ. ಇದು ಬುಧವಾರ ಮಧ್ಯಾಹ್ನದವರೆಗೂ ಮುಂದುವರಿಯಲಿದೆ. ಈ ಕಾರ್ಯಾಚರಣೆಯಲ್ಲಿ ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ವಿಶೇಷ ಆಯುಕ್ತ (ಹಣಕಾಸು) ಮನೋಜ್‌ ರಾಜನ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಚುನಾವಣಾ ಸಿದ್ಧತೆ ಕುರಿತು ವಿವರಿಸಿದ ಪಾಲಿಕೆ ಆಯುಕ್ತರು, ‘ನಗರದಲ್ಲಿರುವ ಪ್ರಚಾರ ಸಾಮಗ್ರಿಗಳನ್ನು 24 ಗಂಟೆಗಳೊಳಗೆ ತೆರವುಗೊಳಿಸಲು ಚುನಾವಣಾ ಆಯೋಗದ ಸೂಚನೆ ಇದೆ. ನಾವು 12 ಗಂಟೆಗಳ ಒಳಗೆ ಅವುಗಳನ್ನು ತೆರವುಗೊಳಿಸಲು ನಿರ್ಧರಿಸಿದ್ದೇವೆ. ಪಾಲಿಕೆ ಸಿಬ್ಬಂದಿ ಈಗಾಗಲೇ ಕಾರ್ಯಾಚರಣೆ ಕೈಗೊಂಡಿದ್ದಾರೆ’ ಎಂದರು.

‘ಬಸ್‌ ತಂಗುದಾಣಗಳಲ್ಲಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರಚಾರ ಸಾಮಗ್ರಿಗಳನ್ನು ತೆಗೆಸಿದ್ದೇವೆ. ಬಿಎಂಟಿಸಿ ಬಸ್‌ಗಳ ಹಿಂಭಾಗದಲ್ಲಿರುವ ಸರ್ಕಾರಿ ಜಾಹೀರಾತುಗಳನ್ನು ತೆಗೆಸುವಂತೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದೇನೆ. ರೇಡಿಯೊ, ಎಫ್‌ಎಂಗಳಲ್ಲಿ ಪ್ರಸಾರವಾಗುವ ರಾಜಕೀಯ ಜಾಹೀರಾತುಗಳನ್ನು ನಿಲ್ಲಿಸುವಂತೆ ವಾರ್ತಾ ಇಲಾಖೆಯ ಕಾರ್ಯದರ್ಶಿ ಅವರಿಗೆ ನಿರ್ದೇಶನ ನೀಡಿದ್ದೇನೆ. ಸ್ಥಳೀಯ ಸಂಸ್ಥೆಗಳ ವೆಬ್‌ಸೈಟ್‌ಗಳಲ್ಲಿರುವ ಸರ್ಕಾರಿ ಜಾಹೀರಾತುಗಳನ್ನು ತೆಗೆಯಲು ಆದೇಶಿಸಿದ್ದೇನೆ’ ಎಂದು ಹೇಳಿದರು.

ಟಿ.ವಿ, ರೇಡಿಯೊಗಳಲ್ಲಿ ಜಾಹೀರಾತು ನೀಡಬೇಕಾದರೆ ಅದರ ಪ್ರತಿಯನ್ನು ಮಾಧ್ಯಮ ಪ್ರಮಾಣೀಕೃತ ಸಮಿತಿಗೆ ಸಲ್ಲಿಸಬೇಕು. ಅನುಮತಿ ಪಡೆದ ಬಳಿಕ ಅದನ್ನು ಪ್ರಸಾರ ಮಾಡಬಹುದು ಎಂದರು.

ಮತದಾನ ನಡೆಯುವ 7 ದಿನಗಳ ಮುನ್ನ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ತೆರಳಿ ಮತದಾರರ ವಿವರದ ಸಣ್ಣಚೀಟಿಗಳನ್ನು (ಫೋಟೊ ವೋಟರ್‌ ಸ್ಲಿಪ್‌) ನೀಡುತ್ತಾರೆ. ಅದರಲ್ಲಿ ಮತದಾರರ ಹೆಸರು, ಕ್ರಮಸಂಖ್ಯೆ, ಮತಗಟ್ಟೆಯ ಮಾಹಿತಿ ಇರುತ್ತದೆ. ಇದರ ಜತೆಗೆ ಮತದಾರರ ಗೈಡ್‌ ನೀಡಲಾಗುತ್ತದೆ. ಇದರಲ್ಲಿ, ಮತದಾನದ ದಿನಾಂಕ, ಸಮಯ ಹಾಗೂ ಮತಗಟ್ಟೆ ಅಧಿಕಾರಿಗಳ ದೂರವಾಣಿ ಸಂಖ್ಯೆ, ಸಹಾಯವಾಣಿ ಸಂಖ್ಯೆಗಳನ್ನು ನೀಡಲಾಗಿರುತ್ತದೆ ಎಂದು ವಿವರಿಸಿದರು.

28 ವಿಧಾನಸಭಾ ಕ್ಷೇತ್ರಗಳ ಚುನಾವಣಾ ಕರ್ತವ್ಯಕ್ಕಾಗಿ 55 ಸಾವಿರ ಮಂದಿ ಬೇಕಾಗಿದ್ದಾರೆ. ಈಗಾಗಲೇ 35 ಸಾವಿರ ಜನರ ಡೇಟಾ ಎಂಟ್ರಿ ಆಗಿದೆ. ಕೇಂದ್ರ ಸ್ವಾಮ್ಯದ ಸಂಸ್ಥೆಗಳ ನೌಕರರನ್ನು ಒದಗಿಸುವಂತೆ ಆಯೋಗವನ್ನು ಕೋರಲಾಗಿದೆ. ಆದರೂ, ಇನ್ನೂ 8 ಸಾವಿರ ಮಂದಿಯ ಕೊರತೆ ಉಂಟಾಗುತ್ತದೆ. ಹೀಗಾಗಿ, ಶಾಲಾ –ಕಾಲೇಜುಗಳ ಸಿಬ್ಬಂದಿಯನ್ನು ಬಳಸಿಕೊಳ್ಳಲು ಅವಕಾಶ ನೀಡುವಂತೆ ಆಯೋಗಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಚುನಾವಣಾ ಮಾದರಿ ನೀತಿಸಂಹಿತೆ ಪಾಲನಾ ತಂಡಗಳನ್ನು ರಚಿಸಲಾಗಿದೆ. 28 ನೋಡಲ್‌ ಅಧಿಕಾರಿಗಳು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಆರು ಸಂಚಾರ ದಳಗಳು (ಫ್ಲೈಯಿಂಗ್‌ ಸ್ಕ್ವಾಡ್‌) ಹಾಗೂ ಮೂರು ಕಾಯಂ ದಳಗಳು (ಸ್ಟ್ಯಾಟಿಕ್‌ ಸ್ಕ್ವಾಡ್‌), ಒಂದು ವಿಡಿಯೊ ವೀಕ್ಷಣೆ ತಂಡ, ಒಂದು ಅಕೌಂಟಿಂಗ್‌ ತಂಡಗಳಿವೆ ಎಂದರು.

ಕ್ಯಾಂಟೀನ್‌ನಲ್ಲಿ ‘ಇಂದಿರಾ’ ಇರುತ್ತಾರೆ

ನಗರದಲ್ಲಿ ತೆರೆದಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿರುವ ಇಂದಿರಾ ಭಾವಚಿತ್ರವನ್ನು ತೆರವುಗೊಳಿಸುವುದಿಲ್ಲ ಎಂದು ಪಾಲಿಕೆ ಆಯುಕ್ತರು ಸ್ಪಷ್ಟಪಡಿಸಿದರು.

ಚುನಾವಣಾ ಆಯೋಗದ ನಿಯಮಗಳ ಪ್ರಕಾರ, ರಾಷ್ಟ್ರೀಯ ನಾಯಕರು ಸತ್ತು ಹಲವಾರು ವರ್ಷಗಳು ಕಳೆದಿದ್ದರೆ, ಅವರ ಭಾವಚಿತ್ರವನ್ನು ತೆಗೆಯುವ ಅಗತ್ಯವಿಲ್ಲ. ಆದರೆ, ಮುಖ್ಯಮಂತ್ರಿ ಅವರ ಭಾವಚಿತ್ರ, ಇಷ್ಟು ಮಂದಿಗೆ ಇಷ್ಟು ತಿಂಡಿ–ಊಟ ವಿತರಿಸಲಾಗಿದೆ ಎಂಬ ಬರಹಗಳಿರುವ ಫಲಕಗಳನ್ನು ತೆರವುಗೊಳಿಸಲಾಗುತ್ತದೆ. ಸಂಚಾರಿ ಇಂದಿರಾ ಕ್ಯಾಂಟೀನ್‌ಗಳಲ್ಲಿ ಮುಖ್ಯಮಂತ್ರಿ ಭಾವಚಿತ್ರಗಳಿದ್ದು, ಅವುಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

1.20 ಲಕ್ಷ ಮತದಾರರ ಗುರುತಿನ ಚೀಟಿ
ಮತದಾರರ ಪಟ್ಟಿಗೆ ಹೊಸದಾಗಿ 3.20 ಲಕ್ಷ ಮಂದಿ ಸೇರ್ಪಡೆಯಾಗಿದ್ದಾರೆ. ಇದರಲ್ಲಿ 1.20 ಲಕ್ಷ ಮಂದಿಗೆ ಮತದಾರರ ಗುರುತಿನ ಚೀಟಿಗಳನ್ನು ವಿತರಿಸಲಾಗಿದೆ. ಉಳಿದವರಿಗೆ ಚೀಟಿಗಳ ವಿತರಣೆ ಬಾಕಿ ಇದೆ. ಚುನಾವಣಾ ಆಯೋಗವು 60 ಸಾವಿರ ಹಾಲೋಗ್ರಾಂಗಳನ್ನು ನೀಡಿದ್ದು, ಉಳಿದ 1.40 ಲಕ್ಷ ಹಾಲೋಗ್ರಾಂಗಳನ್ನು ಮುಂದಿನ ವಾರದಲ್ಲಿ ನೀಡಲಿದೆ. 10 ದಿನಗಳ ಒಳಗೆ ಎಲ್ಲರಿಗೂ ಮತದಾರರ ಗುರುತಿನ ಚೀಟಿಗಳನ್ನು ವಿತರಿಸಲಾಗುತ್ತದೆ ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು.

ಹೆಸರು ಸೇರ್ಪಡೆಗೆ ಕಾಲಾವಕಾಶ
ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಏಪ್ರಿಲ್‌ 14ರವರೆಗೂ ಕಾಲಾವಕಾಶವಿದೆ. ಆನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪಾಲಿಕೆ ಆಯುಕ್ತರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT