ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ವಿಷ್ಣು ದೇಗುಲಕ್ಕೆ ಮೆರುಗು

ಮೂಲ ಸ್ವರೂಪದಲ್ಲಿ ಕಲ್ಲು ಕಂಬಗಳ ಮರು ಜೋಡಣೆ
Last Updated 21 ಫೆಬ್ರುವರಿ 2019, 12:02 IST
ಅಕ್ಷರ ಗಾತ್ರ

ಹೊಸಪೇಟೆ: ಇಲ್ಲಿನ ಹಂಪಿ ವಿಷ್ಣು ದೇವಾಲಯದ ಪರಿಸರದಲ್ಲಿ ಬೀಳಿಸಿದ್ದ ಕಲ್ಲು ಕಂಬಗಳನ್ನು ಸಾಲಾಗಿ ಮರು ಜೋಡಿಸಲಾಗಿದ್ದು, ಮೊದಲಿನಂತೆ ಕಂಗೊಳಿಸುತ್ತಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ (ಎ.ಎಸ್‌.ಐ.) ಡೆಪ್ಯುಟಿ ಸೂಪರಿಟೆಂಡೆಂಟ್‌ ಪಿ. ಕಾಳಿಮುತ್ತು ಅವರ ಮಾರ್ಗದರ್ಶನದಲ್ಲಿ ನುರಿತ ಸಿಬ್ಬಂದಿ ಈ ಕೆಲಸ ಪೂರ್ಣಗೊಳಿಸಿದ್ದಾರೆ.

ವಿಶೇಷವೆಂದರೆ, ಕಲ್ಲು ಕಂಬಗಳನ್ನು ಬೀಳಿಸಿದ್ದ ಬಿಹಾರದ ಆಯುಷ್‌ ಸಾಹು, ರಾಜು ಬಾಬು, ರಾಜ ಆರ್ಯನ್‌ ಹಾಗೂ ರಾಜೇಶ್‌ ಚೌಧರಿ ಅವರ ಸಮ್ಮುಖದಲ್ಲಿ ಕೆಲಸ ಕೈಗೊಳ್ಳಲಾಗಿದೆ. ಅವರನ್ನೂ ಕೆಲಸಕ್ಕೆ ಬಳಸಿಕೊಳ್ಳಲಾಗಿದೆ. ಎಲ್ಲ ಕಂಬಗಳ ಕೆಳಗೆ ಕಬ್ಬಿಣದ ರಾಡ್‌ ಅಳವಡಿಸಲಾಗಿದ್ದು, ಯಾರಾದರೂ ತಳ್ಳಿದರೂ ಕೂಡ ಸುಲಭವಾಗಿ ಬೀಳದಂತೆ ಎಚ್ಚರಿಕೆ ವಹಿಸಿರುವುದು ವಿಶೇಷ.

‘ಸ್ಮಾರಕಗಳ ಸಂರಕ್ಷಣೆ, ಅವುಗಳ ನಿರ್ವಹಣೆ ಹಾಗೂ ಹಂಪಿಯಲ್ಲಿ ಎಲ್ಲಾದರೂ ಕಲ್ಲು ಕಂಬಗಳು ಬಿದ್ದರೆ ಅವುಗಳನ್ನು ಎಷ್ಟು ಜತನದಿಂದ ಮೊದಲಿನಂತೆ ಜೋಡಿಸಲಾಗುತ್ತದೆ ಎನ್ನುವುದು ಬೀಳಿಸಿದವರಿಗೆ ಗೊತ್ತಾಗಲಿ ಎಂಬ ಉದ್ದೇಶದಿಂದ ಅವರ ಎದುರಿನಲ್ಲೇ ಕೆಲಸ ಪೂರ್ಣಗೊಳಿಸಲಾಗಿದೆ. ಅವರ ಸಹಾಯ ಕೂಡ ಪಡೆದುಕೊಳ್ಳಲಾಗಿದೆ. ಎಲ್ಲರಿಗೂ ಅವರ ತಪ್ಪಿನ ಅರಿವಾಗಿದೆ. ಸಾಕಷ್ಟು ಪಶ್ಚತ್ತಾಪ ಪಟ್ಟಿದ್ದಾರೆ’ ಎಂದು ಕಾಳಿಮುತ್ತು ತಿಳಿಸಿದರು.

‘ಮೊದಲ ದಿನ ಎಲ್ಲ ಕಲ್ಲು ಕಂಬಗಳನ್ನು ಸ್ವಚ್ಛಗೊಳಿಸಿ, ಸಾಲಾಗಿ ನಿಲ್ಲಿಸಿದ್ದೆವು. ನಂತರ ಅವುಗಳನ್ನು ಮೊದಲಿನಂತೆ ಕಟ್ಟೆಯ ಮೇಲೆ ನಿಲ್ಲಿಸಿದ್ದೇವೆ. ಗಾಳಿಗೆ ಅಲುಗಾಡಿ ಬೀಳದಿರಲೆಂದು ಕೆಳಗೆ ಲೋಹದ ರಾಡ್‌ಗಳನ್ನು ಅಳವಡಿಸಲಾಗಿದೆ. ಯಾರಾದರು ತಳ್ಳಿದರೂ ಕೂಡ ಬೀಳುವುದಿಲ್ಲ. ಹೀಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ ಕಲ್ಲು ಕಂಬಗಳನ್ನು ನಿಲ್ಲಿಸಲಾಗಿದೆ. ನಾಲ್ಕು ದಿನಗಳಲ್ಲಿ ಕೆಲಸ ಪೂರ್ಣಗೊಂಡಿದೆ’ ಎಂದು ಮಾಹಿತಿ ನೀಡಿದರು.

‘ವಿಷ್ಣು ದೇವಾಲಯ ಸ್ಮಾರಕಕ್ಕೆ ಹೆಚ್ಚಿನ ಪ್ರವಾಸಿಗರು ಭೇಟಿ ಕೊಡುವುದಿಲ್ಲ. ಆದರೆ, ಅಲ್ಲಿನ ಪರಿಸರದ ಕಲ್ಲು ಕಂಬ ಬೀಳಿಸಿದ ನಂತರ ಎಲ್ಲೆಡೆ ಸುರಕ್ಷತೆ ಹೆಚ್ಚಿಸಲಾಗಿದೆ. ಎಲ್ಲ ಸ್ಮಾರಕಗಳ ಬಳಿ ಭದ್ರತೆ ಬಿಗಿಗೊಳಿಸಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಿಸಲಾಗುತ್ತಿದೆ. ಎಲ್ಲ ಕಡೆ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸುವ ಸಂಬಂಧ ಕೇಂದ್ರ ಕಚೇರಿಗೆ ಪ್ರಸ್ತಾವ ಕಳುಹಿಸಿಕೊಡಲು ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ವಿವರಿಸಿದರು.

ಕಲ್ಲು ಕಂಬಗಳನ್ನು ಬೀಳಿಸಿ, ಅದರ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗಿತ್ತು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ಅನೇಕ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಿದ್ದವು. ಇದರಿಂದ ಎಚ್ಚೆತ್ತ ಪೊಲೀಸ್‌ ಇಲಾಖೆಯು ವಿಶೇಷ ತನಿಖಾ ತಂಡ ರಚಿಸಿ, ನಾಲ್ವರನ್ನು ಫೆ. 7ರಂದು ಬಂಧಿಸಿತ್ತು.

ನಗರದ ಜೆ.ಎಂ.ಎಫ್‌.ಸಿ. ನ್ಯಾಯಾಲಯವು ನಾಲ್ವರಿಗೆ ತಲಾ ₹70 ಸಾವಿರ ದಂಡ ವಿಧಿಸಿತು. ಕಂಬಗಳ ಮರು ಜೋಡಣೆಗೆ ನಾಲ್ವರನ್ನು ದುಡಿಸಿಕೊಳ್ಳಬೇಕೆಂದು ಸೂಚಿಸಿತ್ತು. ನ್ಯಾಯಾಲಯದ ಆದೇಶದಂತೆ ಎ.ಎಸ್‌.ಐ. ಕ್ರಮ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT