ಭಾನುವಾರ, ನವೆಂಬರ್ 28, 2021
20 °C

ವರ್ಷದಿಂದ ವರ್ಷಕ್ಕೆ ಸರ್ಕಾರಿ ಪದವಿ ಕಾಲೇಜಿಗೆ ಸೇರುವವರ ಸಂಖ್ಯೆಯಲ್ಲಿ ಹೆಚ್ಚಳ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಇತ್ತೀಚಿನ ಕೆಲವು ವರ್ಷಗಳಿಂದ ಪೋಷಕರು, ವಿದ್ಯಾರ್ಥಿಗಳಲ್ಲಿ ಖಾಸಗಿ ಕಾಲೇಜುಗಳ ಬಗೆಗಿನ ಮೋಹ ಕಡಿಮೆಯಾಗುತ್ತಿದ್ದು, ಸರ್ಕಾರಿ ಕಾಲೇಜುಗಳತ್ತ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ.

ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಇರುವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಪಡೆದ ಅಂಕಿ ಅಂಶಗಳು ಇದನ್ನು ನಿರೂಪಿಸುತ್ತವೆ.

ಎಲ್ಲ ಸರ್ಕಾರಿ ಕಾಲೇಜುಗಳಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ, ಗ್ರಂಥಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗಿದೆ. ಗುಣಮಟ್ಟದ ಬೋಧನೆಗೆ ಹೆಚ್ಚಿನ ಒತ್ತು ಕೊಡುತ್ತಿರುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ.

ಖಾಸಗಿ ಕಾಲೇಜುಗಳಿಗೆ ಹೋಲಿಸಿದರೆ ಸರ್ಕಾರಿ ಕಾಲೇಜುಗಳಲ್ಲಿ ಶುಲ್ಕ ಬಹಳ ಕಡಿಮೆ. ಖಾಸಗಿ ಕಾಲೇಜುಗಳಿಗೆ ಯಾವುದೇ ರೀತಿಯಲ್ಲೂ ಕಡಿಮೆಯಿಲ್ಲದಂತೆ ಪರಿಣಾಮಕಾರಿ ಬೋಧನೆ ಮಾಡುತ್ತಿರುವುದರಿಂದ ಸರ್ಕಾರಿ ಕಾಲೇಜುಗಳಿಗೆ ಸೇರಲು ಇನ್ನೊಂದು ಮುಖ್ಯ ಕಾರಣ ಎಂದು ಗೊತ್ತಾಗಿದೆ.

ನಗರದ ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಅದರಲ್ಲೂ ಈ ವರ್ಷ ಹೋದ ವರ್ಷಕ್ಕಿಂತ ಸಾವಿರಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ.

ಪ್ರಯೋಗಾಲಯ, ಸುಸಜ್ಜಿತ ಗ್ರಂಥಾಲಯ, ಗುಣಮಟ್ಟದ ಬೋಧನೆ, ಇಡೀ ಜಿಲ್ಲೆಯಲ್ಲಿ ಎಲ್ಲೂ ಇರದ ಕೆಲವು ಕೋರ್ಸ್‌ಗಳನ್ನು ಇಲ್ಲಿ ಆರಂಭಿಸಿರುವುದರಿಂದ ಜಿಲ್ಲೆಯ ನಾನಾ ಭಾಗಗಳ ವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಪಡೆಯಲು ಮುಖ್ಯ ಕಾರಣ. ಪತ್ರಿಕೋದ್ಯಮ, ಐಚ್ಛಿಕ ಇಂಗ್ಲಿಷ್‌, ಬಿಎಸ್ಸಿಯಲ್ಲಿ ಸಿಬಿಝಡ್‌ ವಿಭಾಗ ಆರಂಭಿಸಿದ್ದು, ಅವುಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ.

ಕಾಲೇಜಿನಲ್ಲಿ ಸದ್ಯ 15 ಕೊಠಡಿಗಳಿವೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ 9 ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಇನ್ನೊಂದು ತಿಂಗಳಲ್ಲಿ ಅವುಗಳ ಕೆಲಸ ಪೂರ್ಣಗೊಳ್ಳಲಿದೆ. ಅದೇ ರೀತಿ ಎಂಟು ಪ್ರಯೋಗಾಲಯ, ಗ್ರಂಥಾಲಯ, ಸುಸಜ್ಜಿತ ಸಭಾಂಗಣ, 15 ಕಾಯಂ ಬೋಧಕರು, 87 ಜನ ಅತಿಥಿ ಉಪನ್ಯಾಸಕರಿದ್ದಾರೆ. ಈ ವರ್ಷ ಅತಿಥಿ ಉಪನ್ಯಾಸಕರ ಸಂಖ್ಯೆಯೂ ಹೆಚ್ಚಾಗಲಿದೆ.

ಇನ್ನುಳಿದಂತೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ 400ರಿಂದ 500 ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದರೆ, ಮರಿಯಮ್ಮನಹಳ್ಳಿ, ಕೂಡ್ಲಿಗಿ, ಹೂವಿನಹಡಗಲಿಯ ಕಾಲೇಜುಗಳಲ್ಲಿ ಅಲ್ಪ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿದೆ. ಇದು ಸರ್ಕಾರಿ ಕಾಲೇಜುಗಳ ಬಗೆಗಿನ ಜನರ ಬದಲಾಗುತ್ತಿರುವ ಧೋರಣೆ ತೋರಿಸುತ್ತದೆ.

‘ಸರ್ಕಾರಿ ಕಾಲೇಜುಗಳಲ್ಲಿ ಇತ್ತೀಚಿನ ಕೆಲವು ವರ್ಷಗಳಿಂದ ಎಲ್ಲ ರೀತಿಯ ಸೌಕರ್ಯ ಕಲ್ಪಿಸಲಾಗಿದೆ. ಕಲಿಕೆಗೂ ಒತ್ತು ಕೊಡಲಾಗುತ್ತಿದೆ. ಸರ್ಕಾರದಿಂದ ಪ್ರತಿ ವರ್ಷ ಟ್ಯಾಬ್‌, ಲ್ಯಾಪ್‌ಟಾಪ್‌ ವಿತರಿಸಲಾಗುತ್ತಿದೆ. ಡಿಜಿಟಲ್‌ ಕಲಿಕೆಗೂ ಮಹತ್ವ ನೀಡಲಾಗುತ್ತಿದೆ. ಖಾಸಗಿ ಶಾಲೆಗಳಿಗಿಂತ ಶುಲ್ಕ ಬಹಳ ಕಡಿಮೆ. ಹೀಗಾಗಿ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳತ್ತ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ’ ಎನ್ನುತ್ತಾರೆ ಶಿಕ್ಷಣ ತಜ್ಞರು.

 

ವಿಜಯನಗರ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಮೂರು ವರ್ಷಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಸಂಖ್ಯೆ

ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸಪೇಟೆ
ವರ್ಷ;ವಿದ್ಯಾರ್ಥಿಗಳ ಸಂಖ್ಯೆ
2021;3,627
2020;2,585
2019;2,304

ಎಸ್.ಆರ್.ಎಂ.ಪಿ.ಪಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೂವಿನಹಡಗಲಿ
ವರ್ಷ; ವಿದ್ಯಾರ್ಥಿಗಳ ಸಂಖ್ಯೆ
2021 ;2198
2020; 2107
2019;1740

ಜಿವಿಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಗರಿಬೊಮ್ಮನಹಳ್ಳಿ

2021;3220

2020;2875

2019;2485
ಶ್ರೀಮತಿ ಅಂಗಡಿ ವೀರಮ್ಮ ತಿರುಕಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೂಡ್ಲಿಗಿ
2021;1163
2020;1021
2019;947

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮರಿಯಮ್ಮನಹಳ್ಳಿ
2021;280
2020;248
2019;283

ಸರ್ಕಾರಿ ಪ್ರಥಮ‌ದರ್ಜೆ ಕಾಲೇಜು, ಹರಪನಹಳ್ಳಿ
2021;2401
2020;2037
2019;1595

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು