ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗಭದ್ರೆಗೆ ದಾಖಲೆಯ ಒಳಹರಿವು

ಹತ್ತು ವರ್ಷಗಳಲ್ಲಿ ಇದೇ ಮೊದಲು 415 ಟಿ.ಎಂ.ಸಿ. ನೀರು ಅಣೆಕಟ್ಟೆಗೆ
Last Updated 28 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯಕ್ಕೆ ಈ ವರ್ಷ ದಾಖಲೆ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಇದು ಕಳೆದ ಹತ್ತು ವರ್ಷಗಳಲ್ಲಿ ಇದೇ ಮೊದಲು.

ಜೂನ್‌ ಒಂದರಂದು ಆರಂಭವಾದ ಒಳಹರಿವು ಗುರುವಾರದ (ಡಿ.26) ವರೆಗೆ, ಅಂದರೆ 209 ದಿನಗಳ ಕಾಲ ಸತತವಾಗಿ ಇತ್ತು. ಅದರಲ್ಲೂ ನವೆಂಬರ್‌ ವರೆಗೆ ನಾಲ್ಕು ಅಂಕಿಗಳಲ್ಲಿ ಒಳಹರಿವು ಇತ್ತು. ಬಳಿಕ ಅದು ಮೂರಂಕಿಗೆ ತಗ್ಗಿತ್ತು.

ಅಂದಹಾಗೆ, ಅಣೆಕಟ್ಟೆಗೆ ಒಟ್ಟು 415 ಟಿ.ಎಂ.ಸಿ. ಅಡಿ ನೀರು ಹರಿದು ಬಂದಿದೆ. ಈ ಪೈಕಿ 244 ಟಿ.ಎಂ.ಸಿ. ನೀರು ನದಿಗೆ ಹರಿಸಲಾಗಿದೆ. 171 ಟಿ.ಎಂ.ಸಿ. ನೀರು ಕೃಷಿ, ಕೈಗಾರಿಕೆ ಹಾಗೂ ಕುಡಿಯುವುದಕ್ಕೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಈ ಪೈಕಿ ಈಗಾಗಲೇ 94 ಟಿ.ಎಂ.ಸಿ. ಅಡಿ ನೀರು ಹಂಚಿಕೆ ಮಾಡಲಾಗಿದೆ. ಇನ್ನೂ 77 ಟಿ.ಎಂ.ಸಿ. ಅಡಿ ನೀರಿನ ಸಂಗ್ರಹವಿದೆ.

ಹಿಂಗಾರು ಬೆಳೆಗೆ ಸುಮಾರು 70 ಟಿ.ಎಂ.ಸಿ. ಅಡಿ ನೀರು ಬೇಕು. ಬರುವ ಜೂನ್‌ ವರೆಗೆ ಕುಡಿಯುವುದಕ್ಕೆ ನೀರು ಪೂರೈಸಬೇಕಾಗಿದೆ. ಇತ್ತೀಚೆಗೆ ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಬರುವ ಮಾರ್ಚ್‌ ಅಂತ್ಯದ ವರೆಗೆ ನೀರು ಹರಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಹೀಗಾಗಿ ರೈತರು ಮಿತವಾಗಿ ನೀರು ಬಳಸಿದರಷ್ಟೇ ಜೂನ್‌ ವರೆಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎನ್ನುತ್ತಾರೆ ಜಲಾಶಯ ಆಡಳಿತ ಮಂಡಳಿ ಅಧಿಕಾರಿಗಳು.

ಆದರೆ, ರೈತರು ಹೇಳುವುದೇ ಬೇರೆ. ‘ಕುಡಿಯುವುದಕ್ಕೆ ಮೂರರಿಂದ ನಾಲ್ಕು ಟಿ.ಎಂ.ಸಿ. ಅಡಿ ನೀರು ಮೀಸಲಿಟ್ಟರೆ ಸಾಕು. ಮಿಕ್ಕುಳಿದದ್ದೆಲ್ಲ ಕೃಷಿಗೆ ಹರಿಸಬೇಕು. ಹಿಂದಿನ ವರ್ಷವೂ ಎರಡನೇ ಬೆಳೆಗೆ ಸಮರ್ಪಕವಾಗಿ ನೀರು ಹರಿಸಲಿಲ್ಲ. ಈ ಸಲ ಅಪಾರ ಪ್ರಮಾಣದಲ್ಲಿ ನೀರಿನ ಸಂಗ್ರಹವಿದೆ. ಹಾಗಾಗಿ ಹಿಂದು, ಮುಂದು ನೋಡದೆ ಕೃಷಿಗೆ ನೀರು ಹರಿಸಬೇಕು’ ಎಂದು ರೈತ ಬಸವರಾಜ ಆಗ್ರಹಿಸಿದರು.

‘ಅಣೆಕಟ್ಟೆಯಲ್ಲಿ ಸಂಗ್ರಹಿಸುವ ನೀರಿಗಿಂತ ಅಧಿಕವಾಗಿ ನದಿಗೆ ಹರಿದು ಹೋಗುತ್ತಿದೆ. ಆ ನೀರು ಸಮಪರ್ಕವಾಗಿ ಬಳಸಿಕೊಳ್ಳಲು ಯೋಜನೆ ರೂಪಿಸಬೇಕು. ಪ್ರತಿವರ್ಷ ಕೆರೆ, ಕಟ್ಟೆಗಳನ್ನು ತುಂಬಿಸುವ ಕುರಿತು ಜನಪ್ರತಿನಿಧಿಗಳು ಮಾತನಾಡುತ್ತಾರೆ ಹೊರತು ಯಾವುದೇ ಯೋಜನೆ ರೂಪಿಸುವುದಿಲ್ಲ. ಇಚ್ಛಾಶಕ್ತಿ ತೋರಿಸಿ, ರೈತರ ಹಿತ ಕಾಯಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT