ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆಯ ದಂಡ ಪ್ರಕರಣ ದಾಖಲು

ಹೆಲ್ಮೆಟ್‌ ಇಲ್ಲದವರಿಗೆ ಬಿಸಿ; ಸಂಚಾರ ಪೊಲೀಸರಿಗೆ ಸಿವಿಲ್‌ ಪೊಲೀಸರು ಸಾಥ್‌
Last Updated 12 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಹೊಸಪೇಟೆ: ಹಲವು ಸಲ ಗಡುವು ನೀಡುತ್ತ ಬಂದಿದ್ದರೂ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ, ಹೆಲ್ಮೆಟ್‌ ಧರಿಸದೆ ಓಡಾಡುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ಸ್ಥಳೀಯ ಪೊಲೀಸರು ಬಿಸಿ ಮುಟ್ಟಿಸಿದ್ದು, ಬಹಳ ಕಡಿಮೆ ಅವಧಿಯಲ್ಲಿ ದಾಖಲೆಯ ದಂಡ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಹೆಲ್ಮೆಟ್‌ ಇಲ್ಲದೆ ಸಂಚರಿಸುತ್ತಿರುವವರನ್ನು ತಡೆದು ದಂಡ ಹಾಕಲು ಸಂಚಾರ ಪೊಲೀಸರಿಗೆ ಸಿವಿಲ್‌ ಪೊಲೀಸರು ಸಹ ಸಾಥ್‌ ಕೊಡುತ್ತಿರುವುದು ವಿಶೇಷ. ನಗರದ ಪ್ರಮುಖ ವೃತ್ತಗಳು, ಸಂಪರ್ಕ ಕಲ್ಪಿಸುವ ರಸ್ತೆಗಳು, ತಿರುವುಗಳಲ್ಲಿ ನಾಲ್ಕೈದು ಪೊಲೀಸರು ನಿಲ್ಲುತ್ತಿದ್ದು, ಹೆಲ್ಮೆಟ್‌ ಹಾಕಿಕೊಳ್ಳದೆ ವಾಹನ ಓಡಿಸುತ್ತಿರುವವರನ್ನು ತಡೆದು ದಂಡ ಹಾಕುತ್ತಿದ್ದಾರೆ. ಅದರ ಜತೆಯಲ್ಲಿ ಮಾಲಿನ್ಯ ತಪಾಸಣಾ ಪ್ರಮಾಣ ಪತ್ರ, ಡಿ.ಎಲ್‌. ಕೂಡ ಪರಿಶೀಲನೆ ನಡೆಸುತ್ತಿದ್ದಾರೆ.

ನ. 1ರಿಂದ 12ರ ವರೆಗೆ ಒಟ್ಟು 1,222 ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಿದ್ದು, ಅವರಿಂದ ₹6,11,000 ದಂಡ ವಸೂಲಿ ಮಾಡಿದ್ದಾರೆ. ನ. 1ಕ್ಕೆ 252, ನ. 2ರಂದು 340 ಹಾಗೂ ನ. 5ರಂದು 225 ಪ್ರಕರಣ ದಾಖಲಾಗಿದ್ದು, ಈ ಅವಧಿಯಲ್ಲಿ ಅತಿ ಹೆಚ್ಚು ಕೇಸ್‌ ಹಾಕಿದ್ದಾರೆ.

ನ. 1 ಮತ್ತು 2ರಂದು ಇಡೀ ಬಳ್ಳಾರಿ ಜಿಲ್ಲೆಯಲ್ಲೇ ಹೊಸಪೇಟೆಯಲ್ಲಿ ಅತಿ ಹೆಚ್ಚು ಕೇಸ್‌ಗಳನ್ನು ಹಾಕಿ, ಪೊಲೀಸರು ದಂಡ ವಸೂಲಿ ಮಾಡಿದ್ದಾರೆ. ನ. 1 ಮತ್ತು 2ರಂದು ಹೊಸಪೇಟೆ ಉಪವಿಭಾಗದಲ್ಲಿ ಕ್ರಮವಾಗಿ 425, 309 ಪ್ರಕರಣ ದಾಖಲಿಸಲಾಗಿದೆ. ಇನ್ನುಳಿದ ಐದು ಉಪವಿಭಾಗಗಳಾದ ಬಳ್ಳಾರಿ ನಗರ, ಬಳ್ಳಾರಿ ಗ್ರಾಮೀಣ, ಹಂಪಿ, ಕೂಡ್ಲಿಗಿ ಮತ್ತು ಹೂವಿನಹಡಗಲಿ ನೂರರ ಗಡಿ ಕೂಡ ದಾಟಿಲ್ಲ.

ಹೊಸಪೇಟೆ ಡಿ.ವೈ.ಎಸ್ಪಿ. ವಿ. ರಘುಕುಮಾರ ಅವರು ವಿಶೇಷ ಮುತುವರ್ಜಿ ವಹಿಸಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಸ್ವತಃ ಅವರೇ ನಗರದ ಪ್ರಮುಖ ವೃತ್ತಗಳಲ್ಲಿ ನಿಂತು ಕೆಲಸ ನಿರ್ವಹಿಸುತ್ತಿದ್ದಾರೆ. ಯಾವ ಮುಲಾಜಿಗೂ ಒಳಗಾಗದೆ ದಂಡ ಹಾಕುತ್ತಿದ್ದಾರೆ.

‘ಈಗಾಗಲೇ ಯಾರ ವಿರುದ್ಧ ಪ್ರಕರಣಗಳು ದಾಖಲಾಗಿವೆಯೋ ಅಂಥವರು ಪುನಃ ತಪ್ಪು ಮಾಡಿ ಸಿಕ್ಕಿಕೊಂಡರೆ ಅವರ ಡಿ.ಎಲ್‌. ರದ್ದುಗೊಳಿಸಲು ಚಿಂತನೆ ನಡೆಸಲಾಗುತ್ತಿದೆ. ಹೆಲ್ಮೆಟ್‌ ಧರಿಸಬೇಕೆಂದು ಸತತ ಒಂದು ತಿಂಗಳು ನಗರದಾದ್ಯಂತ ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆ. ಹೀಗಿದ್ದರೂ ಕೆಲವರು ನಿಯಮ ಉಲ್ಲಂಘಿಸುತ್ತಿದ್ದಾರೆ. ಅಂಥವರಿಗೆ ದಂಡ ಹಾಕಲಾಗಿದೆ’ ಎಂದು ರಘುಕುಮಾರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಹೆಲ್ಮೆಟ್‌ ಹಾಕಿಕೊಂಡರೆ ಅಪಘಾತ ಸಂಭವಿಸಿದಾಗ ಸಾವನ್ನಪುವ ಸಾಧ್ಯತೆ ಕಡಿಮೆಯಿರುತ್ತದೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಕ್ರಮ ಕೈಗೊಳ್ಳಲಾಗಿದೆ. ಆದರೆ, ಕೆಲವರು ಅದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಇಲಾಖೆಯಿಂದ ಕ್ರಮ ಕೈಗೊಂಡ ನಂತರ ನಗರದಲ್ಲಿ ಶೇ 70ರಿಂದ 80ರಷ್ಟು ಜನ ಹೆಲ್ಮೆಟ್‌ ಧರಿಸಿಕೊಂಡು ಓಡಾಡುತ್ತಿದ್ದಾರೆ. ಇದು ನೂರಕ್ಕೆ ನೂರು ಆಗುವ ತನಕ ಸುಮ್ಮನಿರುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ವಿವಿಧ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸರ್ಕಾರ ನೌಕರರ ಸಭೆ ಕರೆದು, ಸುರಕ್ಷತಾ ನಿಯಮಗಳ ಕುರಿತು ತಿಳಿವಳಿಕೆ ಮೂಡಿಸಲಾಗಿದೆ. ಒಂದುವೇಳೆ ಅವರು ನಿಯಮ ಉಲ್ಲಂಘಿಸಿರುವುದು ಕಂಡು ಬಂದರೆ ಅವರ ಇಲಾಖೆಯ ಮೇಲಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT