ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಕಟ್ಟಿಕೊಟ್ಟ ಖಡಕ್‌ ರೊಟ್ಟಿ!

Last Updated 3 ಅಕ್ಟೋಬರ್ 2018, 9:56 IST
ಅಕ್ಷರ ಗಾತ್ರ

ಕಂಪ್ಲಿ: ಹೊಟ್ಟೆ ತುಂಬಿಸಿಕೊಳ್ಳಲು ನಿತ್ಯ ಮನೆಯಲ್ಲಿ ರೊಟ್ಟಿ ಮಾಡುವುದು ಸಾಮಾನ್ಯ ಸಂಗತಿ. ಆದರೆ, ರೊಟ್ಟಿ ಮೂಲಕ ಪಟ್ಟಣದ ಆಟೊ ಓಣಿ ನಿವಾಸಿ ಕೆ. ಚನ್ನಮ್ಮ ಬದುಕು ಕಟ್ಟಿಕೊಂಡಿದ್ದಾರೆ.

ಮನೆಯಲ್ಲಿಯೇ ರೊಟ್ಟಿ ತಯಾರಿಸಿ, ಅವುಗಳನ್ನು ಖಾನಾವಳಿ, ಹೋಟೆಲ್‌ಗಳಿಗೆ ಪೂರೈಸಿ ಆರ್ಥಿಕ ಸ್ವಾವಲಂಬನೆ ಸಾಧಿಸಿದ್ದಾರೆ. ಜತೆಗೆ ಹಲವು ಮಹಿಳೆಯರಿಗೆ ಕೆಲಸ ನೀಡಿದ್ದಾರೆ. ಅವರು ಆರಂಭಿಸಿದ ಕೆಲಸವೀಗ ಸಣ್ಣ ಉದ್ಯಮವಾಗಿ ಬದಲಾಗಿದೆ. ಅವರು ಇಡೀ ತಾಲ್ಲೂಕಿನಲ್ಲಿ ಮನೆ ಮಾತಾಗಿದ್ದಾರೆ.

ಪತಿ ಕೆ. ಶರಣಬಸಪ್ಪ ಅವರು ಆರಂಭದಲ್ಲಿ ನೀಡಿದ್ದ ಅಲ್ಪ ಹಣಕಾಸಿನ ನೆರವಿನೊಂದಿಗೆ ಚನ್ನಮ್ಮನವರು ಈ ಕೆಲಸ ಶುರು ಮಾಡಿದ್ದರು. ಮನೆಯ ಹಿಂಭಾಗದಲ್ಲಿಯೇ ಸಣ್ಣ ಶೆಡ್‌ ಹಾಕಿ, ಏಳೆಂಟು ಕಟ್ಟಿಗೆ ಒಲೆ ಮಾಡಿಸಿದ್ದಾರೆ. ಸುಧಾ ಬಗನಾಳ್‌, ಉಪ್ಪಾರ ತಿಪ್ಪಮ್ಮ, ಕೆ. ಪಾರ್ವತಿ, ಎಂ. ಸುಜಾತ, ಖಾಸಿಂಬೀ, ಉಪ್ಪಾರ ಸರೋಜಾ ಅವರು ನಿತ್ಯ ಬಂದು ರೊಟ್ಟಿ ತಟ್ಟುತ್ತಾರೆ. 100 ರೊಟ್ಟಿ ಮಾಡಿದರೆ ₨130 ಕೂಲಿ, 300 ಮಾಡಿದರೆ ₨400ರ ವರೆಗೆ ಕೂಲಿ ಕೊಡುತ್ತಾರೆ. ದೀಪಾವಳಿ ಸಂದರ್ಭದಲ್ಲಿ ಎಲ್ಲರಿಗೂ ₨500 ಬೋನಸ್‌ ಕೊಡುತ್ತಾರೆ.

ತಾಲ್ಲೂಕಿನ ವಿವಿಧ ಕಡೆ ಬೆಳೆಯಲಾಗುವ ಒಳ್ಳೆಯ ಜೋಳವನ್ನು ನೇರವಾಗಿ ರೈತರ ಹೊಲದಿಂದಲೇ ಖರೀದಿಸಿ ಸಂಗ್ರಹಿಸಿ ಇಡುತ್ತಾರೆ. ಶುಚಿತ್ವ ಹಾಗೂ ಒಲೆಯ ಮೇಲೆ ರೊಟ್ಟಿ ಮಾಡುವುದರಿಂದ ಚನ್ನಮ್ಮ ಅವರ ಬಳಿ ಮಾಡುವ ರೊಟ್ಟಿಗೆ ಹೆಚ್ಚಿನ ಬೇಡಿಕೆ ಇದೆ.

ಪ್ರತಿ ಜೋಳದ ರೊಟ್ಟಿ ₨3, ಸಜ್ಜೆ ರೊಟ್ಟಿಗೆ ₨4ರಂತೆ ಮಾರಾಟ ಮಾಡುತ್ತಾರೆ. ನಿತ್ಯ ಕನಿಷ್ಠ 800 ರೊಟ್ಟಿ ಮಾರಾಟವಾಗುತ್ತವೆ. ದಸರಾ, ದೀಪಾವಳಿ, ಗೌರಿ ಹುಣ್ಣಿಮೆ, ಜಾತ್ರೆ ವೇಳೆ ಖಡಕ್‌ ರೊಟ್ಟಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗುತ್ತದೆ. ಇತ್ತೀಚಿನ ಕೆಲ ವರ್ಷಗಳಿಂದ ಸಭೆ, ಸಮಾರಂಭಗಳಿಗೂ ರೊಟ್ಟಿ ಖರೀದಿಸಿ, ಕೊಂಡೊಯ್ಯುತ್ತಿದ್ದಾರೆ.

‘ಯಜಮಾನರ ನೆರವಿನೊಂದಿಗೆ ಆರಂಭವಾದ ಈ ಕೆಲಸ ಇಂದು ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಅವರು ಇಂದು ಜೀವಂತವಾಗಿದ್ದರೆ ಇದನ್ನು ನೋಡಿ ಬಹಳ ಖುಷಿ ಪಡುತ್ತಿದ್ದರು. ಮಕ್ಕಳಾದ ಸತ್ಯನಾರಾಯಣ, ಶ್ರೀಕುಮಾರ, ಸೊಸೆಯಂದಿಯರಾದ ಪೂಜಾ, ಲಕ್ಷ್ಮಿ ನನ್ನ ಕೆಲಸಕ್ಕೆ ಕೈ ಜೋಡಿಸುತ್ತಿದ್ದಾರೆ’ ಎಂದು ಚನ್ನಮ್ಮ ಹೇಳಿದರು.

ರೊಟ್ಟಿಗೆ ಬೇಡಿಕೆ ಸಲ್ಲಿಸುವವರು ಚನ್ನಮ್ಮ ಅವರ ಮೊಬೈಲ್‌ ಸಂಖ್ಯೆ: 89715 39003 ಸಂಪರ್ಕಿಸಬಹುದು.

**

20 ವರ್ಷಗಳಿಂದ ರೊಟ್ಟಿ ಮಾಡಿ, ಜನರ ಹೊಟ್ಟೆ ತುಂಬಿಸುತ್ತಿದ್ದೇನೆ. ಇದರಿಂದ ನನ್ನ ಹಾಗೂ ಇತರರ ಜೀವನ ಕೂಡ ನಡೆಯುತ್ತಿದೆ.

–ಚನ್ನಮ್ಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT