ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡ ವಿಶ್ವವಿದ್ಯಾಲಯದವರು ಆರ್‌ಎಸ್‌ಎಸ್‌ಗೆ ಹೆದರಿದ್ದಾರೆ’

Last Updated 22 ಫೆಬ್ರುವರಿ 2021, 11:31 IST
ಅಕ್ಷರ ಗಾತ್ರ

ವಿಜಯನಗರ (ಹೊಸಪೇಟೆ): ‘ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ವಿದ್ವಾಂಸರು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ (ಆರ್‌ಎಸ್‌ಎಸ್‌) ಹೆದರಿದ್ದಾರೆ. ಹೀಗಾಗಿಯೇ ಅವರು ಯಾವುದಕ್ಕೂ ಪ್ರತಿಸ್ಪಂದಿಸುತ್ತಿಲ್ಲ’ ಎಂದು ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ಮರಡಿ ಜಂಬಯ್ಯ ನಾಯಕ ಆರೋಪಿಸಿದರು.

‘ಸ್ಥಳೀಯರು ಸೇರಿದಂತೆ ನಾಡಿನ ವಿವಿಧ ಕ್ಷೇತ್ರದ ಜನರ ಹೋರಾಟದಿಂದ ಕನ್ನಡ ವಿಶ್ವವಿದ್ಯಾಲಯಕ್ಕೆ ಸೇರಿದ 82 ಎಕರೆ ಜಾಗ ಉಳಿದಿದೆ. ವಿಶ್ವವಿದ್ಯಾಲಯ ಕಟ್ಟಲು ಭೂಮಿ ಕೊಟ್ಟವರು ದಲಿತರು. ಆದರೆ, ಅವರಿಗೆ ಕೆಳಹಂತದ ನೌಕರಿ ಕೊಡಲಾಗಿದೆ. ಸಾಮಾಜಿಕ, ರಾಜಕೀಯ ವಿಷಯಗಳಿಗೆ ಅಲ್ಲಿ ಕೆಲಸ ನಿರ್ವಹಿಸುತ್ತಿರುವವರು ಈ ಹಿಂದಿನಂತೆ ಸ್ಪಂದಿಸುತ್ತಿಲ್ಲ. ವಿದ್ವಾಂಸರೆನಿಸಿಕೊಂಡವರು ಬಾಯಿ ಮುಚ್ಚಿಕೊಂಡಿದ್ದಾರೆ’ ಎಂದು ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ವಾಲ್ಮೀಕಿ ಜನಾಂಗದವರು ಹೊರಗಿನಿಂದ ಭಾರತಕ್ಕೆ ವಲಸೆ ಬಂದವರು ಎಂದಾಗ ಅಲ್ಲಿರುವ ವಾಲ್ಮೀಕಿ ಅಧ್ಯಯನ ಪೀಠದವರು ಅದರ ಬಗ್ಗೆ ದನಿ ಎತ್ತಲಿಲ್ಲ. ಆರ್‌ಎಸ್‌ಎಸ್‌ನವರ ಪ್ರಭಾವಕ್ಕೆ ಒಳಗಾಗಿ ಹೆದರಿದ್ದಾರೆ. ₹2 ಲಕ್ಷ ಸಂಬಳ ಪಡೆಯುತ್ತಿರುವ ನಮಗೇಕೇ ಸಮಾಜದ ಎಂಬ ನಿರ್ಲಕ್ಷ್ಯ ತಾಳಿದ್ದಾರೆ’ ಎಂದು ಆರೋಪಿಸಿದರು.

ಸಂಡೂರು ವಿರಕ್ತ ಮಠದ ಪ್ರಭುದೇವ ಸ್ವಾಮೀಜಿ ಅವರು ವರ್ಚುಲ್‌ ಮೂಲಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕನ್ನಡ ವಿಶ್ವವಿದ್ಯಾಲಯ ಕನ್ನಡಿಗರ ಅಸ್ಮಿತೆಯ ಪ್ರತೀಕ. ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವುದು ದುರಂತವೇ ಸರಿ. ಅದಕ್ಕೆ ಸರ್ಕಾರ ತಕ್ಷಣವೇ ₹100 ಕೋಟಿ ಅನುದಾನ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.

ಕನ್ನಡ ವಿಶ್ವವಿದ್ಯಾಲಯ ಹೋರಾಟ ಸಮಿತಿಯ ಮುಖಂಡ ಕೆ. ಸಂಗಮೇಶ್‌ ಮಾತನಾಡಿ, ‘25 ತಿಂಗಳಿಂದ ವಿದ್ಯಾರ್ಥಿಗಳಿಗೆ ಫೆಲೋಶಿಪ್‌ ಸಿಕ್ಕಿಲ್ಲ. ಖನಿಜ ನಿಧಿಯಿಂದ ತುರ್ತಾಗಿ ₹10 ಕೋಟಿ ಬಿಡುಗಡೆಗೊಳಿಸಬೇಕು. ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರು ಈ ಕುರಿತು ಭರವಸೆ ನೀಡಿದ್ದಾರೆ. ಆದರೆ, ಅನುದಾನ ಇದುವರೆಗೆ ಬಿಡುಗಡೆಗೊಳಿಸಿಲ್ಲ’ ಎಂದರು.

25ಕ್ಕೆ ಪ್ರತಿಭಟನೆ, 3ಕ್ಕೆ ವಿಧಾನಸೌಧ ಚಲೋ:

ಸಮಿತಿಯ ಮುಖಂಡ ದಾದಾ ಹಯಾತ್‌ ಮಾತನಾಡಿ, ‘ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸಂಶೋಧನಾ ವಿದ್ಯಾರ್ಥಿಗಳ ಮಾಸಿಕ ಫೆಲೋಶಿಪ್‌ ₹25,000ದಿಂದ ₹8,000ಕ್ಕೆ ಸರ್ಕಾರ ಇಳಿಸಿರುವುದು ಖಂಡನಾರ್ಹ. ಕೂಡಲೇ ಈ ಆದೇಶ ವಾಪಸ್‌ ಪಡೆಯಬೇಕು. ವಿಶ್ವವಿದ್ಯಾಲಯಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಫೆ. 25ರಂದು ನಗರದ ಅನಂತಶಯನಗುಡಿಯಿಂದ ರೋಟರಿ ವೃತ್ತದ ವರೆಗೆ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ’ ಎಂದು ತಿಳಿಸಿದರು.

‘ಸಂಶೋಧನೆಗೆ ಫೆಲೋಶಿಪ್‌ ಬಹಳ ಮುಖ್ಯ. ಆದರೆ, ಅದೇ ಹಣ ಬಿಡುಗಡೆಗೊಳಿಸುತ್ತಿಲ್ಲ. ಸಾವಿತ್ರಿಬಾಯಿ ಫುಲೆ ಹಾಸ್ಟೆಲ್‌ನಲ್ಲಿ ಅನ್ನ, ಸಾಂಬಾರ್‌ ಬಿಟ್ಟರೆ ಬೇರೇನೂ ಕೊಡುತ್ತಿಲ್ಲ. ಈ ಕುರಿತು ಪ್ರಶ್ನಿಸಿದರೆ, ಅನುದಾನ ಬಂದಿಲ್ಲ. ಹಾಸ್ಟೆಲ್‌ ನಡೆಸುವುದೇ ದೊಡ್ಡದು ಎಂದು ಹೇಳುತ್ತಿದ್ದಾರೆ. ಎರಡು ಹೊಸ ಹಾಸ್ಟೆಲ್‌ ನಿರ್ಮಿಸಿದರೂ ಇದುವರೆಗೆ ಕಾರ್ಯಾರಂಭ ಮಾಡಿಲ್ಲ. ಒಂದೇ ಕೊಠಡಿಯಲ್ಲಿ ಐದಾರೂ ಜನ ವಿದ್ಯಾರ್ಥಿಗಳು ಓದುತ್ತಿದ್ದಾರೆ. ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಮಾ. 3ರಂದು ವಿಧಾನಸೌಧ ಚಲೋ ಚಳವಳಿ ಹಮ್ಮಿಕೊಳ್ಳಲಾಗಿದೆ’ ಎಂದು ಸಮಿತಿಯ ಎಂ. ರಾಗಿಣಿ ಹೇಳಿದರು.

ಬಿ. ಮಾಳಮ್ಮ ಮಾತನಾಡಿ, ‘ವಿಶ್ವವಿದ್ಯಾಲಯದಲ್ಲಿ ದಲಿತ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಿದ್ದಾರೆ. ಅವರನ್ನು ಶಿಕ್ಷಣದಿಂದ ಹೊರಗಿಡುವ ಹುನ್ನಾರದಿಂದ ಸರ್ಕಾರ ಅನುದಾನ ಬಿಡುಗಡೆಗೊಳಿಸುತ್ತಿಲ್ಲ. ಖಾಸಗೀಕರಣದ ದೊಡ್ಡ ಹುನ್ನಾರ ನಡೆದಿದೆ’ ಎಂದು ಟೀಕಿಸಿದರು.

ಸಮಿತಿಯ ಮುಖಂಡರಾದ ದೊಡ್ಡ ಬಸವರಾಜ, ಪಂಪಾ, ವೆಂಕಟೇಶ್‌ಬಾಬು, ಜಿ. ಶರಣಪ್ಪ, ಜೆ. ಶಿವಕುಮಾರ ಇದ್ದರು.

***

ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳು ಮುಖ್ಯಮಂತ್ರಿಯವರ ಮೇಲೆ ಒತ್ತಡ ತಂದು ಅನುದಾನ ತರಬೇಕು. ಅವರ ಜವಾಬ್ದಾರಿ ಎಲ್ಲರಿಗಿಂತ ಹೆಚ್ಚಿದೆ.
–ಪ್ರಭುದೇವ ಸ್ವಾಮೀಜಿ, ಸಂಡೂರು ವಿರಕ್ತ ಮಠ

***

ವಿಶ್ವವಿದ್ಯಾಲಯದಲ್ಲಿ ₹64 ಕೋಟಿ ಹಗರಣ ನಡೆದಿದೆ. ಆದರೆ, ವಿದ್ಯಾರ್ಥಿಗಳಿಗೆ ಫೆಲೋಶಿಪ್ ಕೊಡಲು ಹಣ ಇಲ್ಲದಿರುವುದು ದುರದೃಷ್ಟಕರ.
–ಎಂ. ಮುನಿರಾಜು, ಮುಖಂಡ, ಕನ್ನಡ ವಿಶ್ವವಿದ್ಯಾಲಯ ಹೋರಾಟ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT