ಸದಾಶಿವ ಆಯೋಗದ ವರದಿ ಜಾರಿಗೆ ಕ್ರಮ

7
ಪ್ರತಿಭಾ ಪುರಸ್ಕಾರ ಕಾರ್ಯಕ್ರಮ: ಸಂಸದ ಕೆ.ಎಚ್.ಮುನಿಯಪ್ಪ ಭರವಸೆ

ಸದಾಶಿವ ಆಯೋಗದ ವರದಿ ಜಾರಿಗೆ ಕ್ರಮ

Published:
Updated:
Deccan Herald

ಬಳ್ಳಾರಿ: ಬಳ್ಳಾರಿ–ರಾಯಚೂರು ಭಾಗದಲ್ಲಿ ಮುಂದಿನ ದಿನಗಳಲ್ಲಿ ಮಾದಿಗ ಸಮುದಾಯದವರಿಗೆ ವಿಧಾನಪರಿಷತ್ ಸ್ಥಾನ ಕಲ್ಪಿಸಿ, ಸದಾಶಿವ ಆಯೋಗದ ವರದಿ ಜಾರಿಗೆ ಶ್ರಮಿಸಲಾಗುವುದು ಎಂದು ಕೋಲಾರದ ಸಂಸದ ಕೆ.ಎಚ್.ಮುನಿಯಪ್ಪ ಹೇಳಿದರು.

ಜಿಲ್ಲಾ ಮಾದಿಗ ನೌಕರರ ಹಾಗೂ ವಕೀಲರ ಸಂಘದ ವತಿಯಿಂದ ಭಾನುವಾರ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಏರ್ಪಡಿಸಿದ್ದ ಮಾದಿಗ ಸಮುದಾಯದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಪರಿಶಿಷ್ಟರ ಬಡ್ತಿ ಕಾಯ್ದೆಗೆ ಈಗಾಗಲೇ ಅಂಕಿತ ಬಿದ್ದಿದೆ. ದೇಶದ ಪ್ರತಿಯೊಂದು ರಾಜ್ಯದಲ್ಲಿ ಹಲವಾರು ಜಾತಿಗಳಿವೆ ಎಲ್ಲವನ್ನೂ ಒಂದೇ ರೀತಿ ನೋಡದೆ ಅವುಗಳಿಗೆ ಸಿಗಬೇಕಾದ ಸೌಲಭ್ಯವನ್ನು ಸರಿಯಾಗಿ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಸಮುದಾಯದ ವಿದ್ಯಾರ್ಥಿಗಳು ಉತ್ತಮ ಅಭ್ಯಾಸ ಮಾಡಿ ಅಭಿವೃದ್ಧಿ ಹೊಂದಿದಾಗ ಮೀಸಲಾತಿ ಸಾರ್ಥಕವಾಗುತ್ತದೆ’ ಎಂದು ಹೇಳಿದರು.

ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಮಾತನಾಡಿ, ‘ಜಾತಿ ಪದ್ದತಿ ಕಿತ್ತೊಗೆಯಬೇಕು. ಎಲ್ಲರೂ ಸಮಾನತೆಯಿಂದ ಬದುಕಬೇಕು. ಆರ್ಥಿಕವಾಗಿ ಸಬಲರಾಗಬೇಕು. ಶಿಕ್ಷಣ ಎಲ್ಲರ ಹಕ್ಕು ಯಾರೂ ಅದರಿಂದ ವಂಚಿತರಾಗಬಾರದು. ಆ ನಿಟ್ಟಿನಲ್ಲಿ ಸಂಘಟನೆ ಉತ್ತಮ ಕಾರ್ಯ ಮಾಡುತ್ತಿದೆ. ಮುಂದಿನ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ಜಿಲ್ಲೆಯಲ್ಲಿ ಸಮುದಾಯದ ಒಬ್ಬರಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸುತ್ತೇನೆ’ ಎಂದರು.

ಚಿತ್ರದುರ್ಗ ಸಂಸದ ಬಿ.ಎನ್‌.ಚಂದ್ರಪ್ಪ ಮಾತನಾಡಿದರು.

ಸಮುದಾಯದ 200 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಹಿರಿಯೂರಿನ ಆದಿಜಾಂಬವ ಶಾಖಾ ಮಠದ ಷಡಕ್ಷರಿಮುನಿ ಸ್ವಾಮಿ ಮತ್ತು ಹಂಪಿಯ ಮಾತಂಗ ಮಹರ್ಷಿ ಪೀಠಾಧ್ಯಕ್ಷ ಮಾತಂಗ ಮುನಿ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು.

ವಿಧಾನ ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಪಿ.ದೀನಾ ಮಂಜುನಾಥ, ಸದಸ್ಯ ಮುಂಡ್ರಿಗಿ ನಾಗರಾಜ, ಮೇಯರ್ ಆರ್.ಸುಶೀಲಾಬಾಯಿ, ಸಂಘದ ಅಧ್ಯಕ್ಷ ಜಿ.ಕೆ.ರಾಮಕೃಷ್ಣ, ಎಸ್.ಚಿದಾನಂದ, ಎಲ್.ಮಾರೆಣ್ಣ, ಸಿ.ನಿಂಗಪ್ಪ, ಗೋವರ್ಧನ್, ಎನ್.ಡಿ.ವೆಂಕಮ್ಮ, ಪಾಲಿಕೆ ಸದಸ್ಯರಾದ ಪರ್ವೀನ್ ಬಾನು, ಉಮಾದೇವಿ, ವಿಮ್ಸ್ ನಿರ್ದೇಶಕ ಕೃಷ್ಣಸ್ವಾಮಿ ಇದ್ದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !