ಶನಿವಾರ, ಆಗಸ್ಟ್ 24, 2019
28 °C
ಆನಂದ್‌ ಸಿಂಗ್‌ ಅನರ್ಹತೆಯಿಂದ ತೆರವಾಗಿರುವ ಕ್ಷೇತ್ರಕ್ಕೆ ಉಪಚುನಾವಣೆ

ವಿಜಯನಗರದಿಂದ ಸಂತೋಷ್‌ ಲಾಡ್‌ ಕಾಂಗ್ರೆಸ್‌ ಅಭ್ಯರ್ಥಿ?

Published:
Updated:
Prajavani

ಹೊಸಪೇಟೆ: ಆನಂದ್‌ ಸಿಂಗ್‌ ಅವರ ಅನರ್ಹತೆಯಿಂದ ತೆರವಾಗಿರುವ ವಿಜಯನಗರ ಕ್ಷೇತ್ರಕ್ಕೆ ಇನ್ನಷ್ಟೇ ಉಪಚುನಾವಣೆ ನಡೆಯಬೇಕಿದ್ದು, ಈಗಿನಿಂದಲೇ ಕಾಂಗ್ರೆಸ್‌ ಭರ್ಜರಿ ಸಿದ್ಧತೆ ನಡೆಸಿದೆ.

ಉಪಚುನಾವಣೆ ಎದುರಿಸಲು ಸಿದ್ಧರಿರುವಂತೆ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರಿಗೆ ವರಿಷ್ಠರು ಸೂಚನೆ ಕೊಟ್ಟಿದ್ದಾರೆ. ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕಾಂಗ್ರೆಸ್‌ ಮುಖಂಡರು, ಶತಾಯ ಗತಾಯ ಕ್ಷೇತ್ರದಲ್ಲಿ ಗೆಲ್ಲಲು ಅಗತ್ಯ ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ಆನಂದ್‌ ಸಿಂಗ್‌ ಅವರನ್ನು ಸ್ಪೀಕರ್‌ ರಮೇಶ ಕುಮಾರ ಅನರ್ಹತೆಗೊಳಿಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದನ್ನು ಪ್ರಶ್ನಿಸಿ ಸಿಂಗ್‌, ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದಾರೆ. ಇನ್ನಷ್ಟೇ ನ್ಯಾಯಾಲಯದಲ್ಲಿ ಸಿಂಗ್‌ ಅರ್ಜಿಯ ವಿಚಾರಣೆ ನಡೆಯಬೇಕಿದೆ. ನ್ಯಾಯಾಲಯದ ತೀರ್ಪು ಏನೇ ಬರಲಿ ಅದಕ್ಕೆ ಕಾದು ಕೂರದೇ ಕಾಂಗ್ರೆಸ್‌ ಸಿದ್ಧತೆಯಲ್ಲಿ ತೊಡಗಿದೆ.

ಸಂತೋಷ್‌ ಲಾಡ್‌ ಹೆಸರು ಮುಂಚೂಣಿಗೆ:

ಉಪಚುನಾವಣೆಯಲ್ಲಿ ಮಾಜಿಸಚಿವ ಸಂತೋಷ್‌ ಲಾಡ್‌ ಅವರನ್ನು ಕಣಕ್ಕಿಳಿಸುವ ಕುರಿತು ಕಾಂಗ್ರೆಸ್‌ ಗಂಭೀರ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ. ಈ ಹಿಂದೆ ಲಾಡ್‌, ಸಂಡೂರು ಕ್ಷೇತ್ರದ ಶಾಸಕರಾಗಿದ್ದರು. ಕ್ಷೇತ್ರಗಳ ಪುನರ್‌ ವಿಂಗಡಣೆಗೂ ಮೊದಲು ಸಂಡೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ವಿಜಯನಗರ ಕ್ಷೇತ್ರದ ಅನೇಕ ಹಳ್ಳಿಗಳು ಸೇರಿದ್ದವು. ಹೀಗಾಗಿ ಲಾಡ್‌ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಅಲ್ಲದೇ ಬಹುತೇಕ ಗ್ರಾಮಗಳಲ್ಲಿ ಅಲ್ಲಿನ ಮುಖಂಡರು, ಕಾರ್ಯಕರ್ತರೊಂದಿಗೆ ಒಡನಾಟ ಹೊಂದಿದ್ದಾರೆ. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಲಾಡ್‌ ಕೆಲಸ ನಿರ್ವಹಿಸಿದ್ದಾರೆ. ಸ್ಥಳೀಯ ಪ್ರತಿಯೊಂದು ವಿಷಯಗಳನ್ನು ಚೆನ್ನಾರಿ ಅರಿತಿದ್ದಾರೆ.

ಬಿಜೆಪಿಯಿಂದ ಯಾರೇ ಅಭ್ಯರ್ಥಿಯಾದರೂ ಅವರನ್ನು ಎದುರಿಸುವ ಶಕ್ತಿ ಲಾಡ್‌ ಅವರಲ್ಲಿದೆ. ಆರ್ಥಿಕವಾಗಿಯೂ ಅವರು ಸದೃಢರಾಗಿದ್ದಾರೆ. ಹೀಗಾಗಿ ಲಾಡ್‌ ಅವರನ್ನು ಕಣಕ್ಕಿಳಿಸಿದರೆ ಸುಲಭವಾಗಿ ಗೆಲ್ಲಬಹುದು ಎಂದು ಕಾಂಗ್ರೆಸ್‌ ಲೆಕ್ಕಾಚಾರವಾಗಿದೆ. ಇನ್ನೊಂದೆಡೆ ಕಾಂಗ್ರೆಸ್‌ನಲ್ಲಿ ಸ್ಥಳೀಯವಾಗಿ ಹೇಳಿಕೊಳ್ಳುವಂತಹ ಮುಖಂಡರು ಇಲ್ಲ. ಎಚ್‌.ಆರ್‌. ಗವಿಯಪ್ಪ, ದೀಪಕ್‌ ಸಿಂಗ್‌ ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ತೊರೆದು ಅನ್ಯ ಪಕ್ಷ ಸೇರಿದ್ದಾರೆ. ಹಂಪಿ ಜಿಲ್ಲಾ ಪಂಚಾಯಿತಿ ಸದಸ್ಯ ಪ್ರವೀಣ್‌ ಸಿಂಗ್‌, ಆನಂದ್‌ ಸಿಂಗ್‌ ಅವರಿಗೆ ಟಿಕೆಟ್‌ ಕೊಟ್ಟಿದ್ದಕ್ಕೆ ಮುನಿಸಿಕೊಂಡು ಪಕ್ಷದಿಂದ ಸಂಪೂರ್ಣವಾಗಿ ದೂರ ಉಳಿದಿದ್ದಾರೆ.

ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮುಖಂಡರಾದ ಮೊಹಮ್ಮದ್‌ ಇಮಾಮ್‌ ನಿಯಾಜಿ, ಅಬ್ದಲ್‌ ವಹಾಬ್‌ ಅವರ ಮಗ ಶಾದಾಬ್‌ ವಹಾಬ್‌ ಅವರು ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಆದರೆ, ಅವರಿಗೆ ಟಿಕೆಟ್‌ ಸಿಗುವುದು ಅನುಮಾನ ಎನ್ನಲಾಗಿದೆ.

ಸೂರ್ಯನಾರಾಯಣ ರೆಡ್ಡಿ ಹೆಸರು ಚಾಲ್ತಿಯಲ್ಲಿ

ಒಂದುವೇಳೆ ಸಂತೋಷ್‌ ಲಾಡ್‌ ಉಪಚುನಾವಣೆಗೆ ನಿಲ್ಲಲು ಹಿಂಜರಿದರೆ ಮಾಜಿಶಾಸಕ ಸೂರ್ಯನಾರಾಯಣ ರೆಡ್ಡಿ ಅವರನ್ನು ಕಣಕ್ಕಿಳಿಸುವ ಕುರಿತು ಕಾಂಗ್ರೆಸ್‌ ಚಿಂತಿಸುತ್ತಿದೆ.

ಜಿಲ್ಲೆಯ ಪ್ರಭಾವಿ ಮುಖಂಡರಲ್ಲಿ ರೆಡ್ಡಿ ಕೂಡ ಒಬ್ಬರು. ಹೋದ ವಿಧಾನಸಭೆ ಚುನಾವಣೆಯಲ್ಲಿ ಕಂಪ್ಲಿಯಲ್ಲಿ ಜೆ.ಎನ್‌. ಗಣೇಶ್‌ ಅವರ ಗೆಲುವಿನಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ತನ್ನದೇ ಬೆಂಬಲಿಗರ ಪಡೆ ಹೊಂದಿರುವ ಅವರು ಚುನಾವಣೆ ಎದುರಿಸುವ ಎಲ್ಲ ಸಾಮರ್ಥ್ಯ ಹೊಂದಿದ್ದಾರೆ. ಅವರೊಬ್ಬರೇ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವ ಶಕ್ತಿ ಇರುವುದರಿಂದ ಹೆಚ್ಚಿನ ತಲೆಕೆಡಿಸಿಕೊಳ್ಳುವ ಅಗತ್ಯ ತಮಗೆ ಬೀಳುವುದಿಲ್ಲ ಎಂಬುದು ರಾಜ್ಯ ಮುಖಂಡರ ಲೆಕ್ಕಾಚಾರವಾಗಿದೆ.

Post Comments (+)