ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಟ್ಟೂರು ಸಂಸ್ಥಾನ ಮಠ: 27ರಂದು ಕೋಮುಸೌಹಾರ್ದಕ್ಕೆ ಸರ್ವಧರ್ಮ ರಥೋತ್ಸವ

ಎಲ್ಲ ಧರ್ಮಗ್ರಂಥಗಳಿಗೆ ಪೂಜೆ
Last Updated 26 ಮಾರ್ಚ್ 2019, 9:14 IST
ಅಕ್ಷರ ಗಾತ್ರ

ಹೊಸಪೇಟೆ: ‘ಅನೇಕ ಜಾತಿ, ಮತ, ಧರ್ಮಗಳನ್ನು ಹೊಂದಿರುವ ಭಾರತದಲ್ಲಿ ಕೋಮು ಸೌಹಾರ್ದತೆಯ ಅಗತ್ಯವಿದೆ. ಅದನ್ನು ಮನಗಂಡು ಸರ್ವಧರ್ಮ ಸಮನ್ವಯ ರಥೋತ್ಸವ ಆಯೋಜಿಸಲಾಗಿದೆ’ ಎಂದು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಪೀಠಾಧ್ಯಕ್ಷ ಸಂಗನಬಸವ ಸ್ವಾಮೀಜಿ ತಿಳಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಭಾರತೀಯರೆಲ್ಲರೂ ಒಂದೇ ಎಂಬ ಭಾವನೆ ಬರಬೇಕು. ಅದು ಎಲ್ಲರೂ ಒಂದು ಕಡೆ ಸೇರಿದಾಗ ಮಾತ್ರ ಸಾಧ್ಯ. ಈ ಕಾರಣಕ್ಕಾಗಿಯೇ ಹಿಂದಿನ ವರ್ಷದಿಂದ ಈ ರಥೋತ್ಸವ ನಡೆಸಲಾಗುತ್ತಿದೆ’ ಎಂದು ಹೇಳಿದರು.

‘ಮಾ. 27ರಂದು ಸಂಜೆ 5ಕ್ಕೆ ಮಠದಿಂದ ಮಹಾತ್ಮ ಗಾಂಧೀಜಿ ವೃತ್ತದ ವರೆಗೆ ತೇರು ಎಳೆಯಲಾಗುವುದು. ಅದಕ್ಕೆ ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಚಾಲನೆ ಕೊಡುವರು. ರಥದಲ್ಲಿ ಎಲ್ಲ ಧರ್ಮಗಳ ಗ್ರಂಥಗಳನ್ನು ಇಟ್ಟು, ಅವುಗಳಿಗೆ ಪೂಜೆ ಸಲ್ಲಿಸಿ ತೇರು ಎಳೆಯಲಾಗುತ್ತದೆ. ಕಂಸಾಳೆ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿ ಮೆರಗು ಹೆಚ್ಚಿಸಲಿವೆ. ನನಗೆ ಗೊತ್ತಿರುವಂತೆ ಸಮನ್ವಯ ಸಾರುವ ಇಂತಹ ರಥೋತ್ಸವ ದೇಶದ ಯಾವ ಭಾಗದಲ್ಲೂ ನಡೆಯುವುದಿಲ್ಲ’ ಎಂದರು.

‘₹40 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ 45 ಅಡಿ ಎತ್ತರದ ರಥದ ಮೇಲ್ಭಾಗದಲ್ಲಿ ಐದು ಅಡಿ ಚಿನ್ನಲೇಪಿತ ಕಲಶ ಇದೆ. ಅದರ ಸುತ್ತಲೂ ಬಸವಣ್ಣ, ಗೌತಮ ಬುದ್ಧ, ಮಹಾವೀರ, ಶಂಕರಾಚಾರ್ಯ, ಮಧ್ವಚಾರ್ಯ, ರಾಮಾನುಜಾಚಾರ್ಯ, ಮೆಕ್ಕಾ ಮದೀನಾದಲ್ಲಿರುವ ಮಸೀದಿಯ ಕೆತ್ತನೆ ಇದೆ. ಸ್ಟೇರಿಂಗ್‌ ಮೂಲಕ ತೇರನ್ನು ನಿಯಂತ್ರಿಸುವ ವ್ಯವಸ್ಥೆ ಇದೆ. ಬರುವ ದಿನಗಳಲ್ಲಿ ಬ್ರೇಕ್‌ ಕೂಡ ಅಳವಡಿಸಲಾಗುವುದು. ತೇರು ಎಳೆಯುವ ಸಂದರ್ಭದಲ್ಲಿ ಸಾವಿರಾರು ಜನ ಬರುತ್ತಾರೆ. ಈ ವೇಳೆ ಯಾವುದೇ ರೀತಿಯ ಅವಘಡ ಸಂಭವಿಸಬಾರದು ಎಂಬ ಕಾರಣಕ್ಕಾಗಿ ಮುನ್ನೆಚ್ಚರಿಕೆ ವಹಿಸಲಾಗಿದೆ’ ಎಂದು ವಿವರಿಸಿದರು.

‘ಉಡುಪಿಯಲ್ಲಿ ರಥ ನಿರ್ಮಿಸಿ, ಇಲ್ಲಿಗೆ ತರುವುದು ವಿಳಂಬವಾಗಿದ್ದರಿಂದ ಹಿಂದಿನ ವರ್ಷ ರಥೋತ್ಸವ ವಿಳಂಬವಾಯಿತು. ತಡರಾತ್ರಿ ಎರಡು ಗಂಟೆಗೆ ಸಾಂಕೇತಿಕವಾಗಿ ಭಕ್ತರು ತೇರು ಎಳೆದರು. ಅದಕ್ಕೆ ಐದರಿಂದ ಆರು ಸಾವಿರ ಜನ ಸಾಕ್ಷಿಯಾಗಿದ್ದರು. ಈ ರೀತಿ ಅಂತಹ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಈಗಾಗಲೇ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

‘ರಥೋತ್ಸವಕ್ಕೂ ಮುನ್ನ ಬೆಳಿಗ್ಗೆ 10ಕ್ಕೆ ಮಠದಲ್ಲಿ 1,111 ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ನೆರವೇರಲಿದೆ. ರಥೋತ್ಸವದ ನಂತರ ವಿಶ್ವಧರ್ಮ ದರ್ಶನ ಪ್ರವಚನ ಸಮಾರೋಪ ನಡೆಯಲಿದೆ. ವಿವಿಧ ಕಡೆಗಳಿಂದ ಬರುವ ಭಕ್ತರಿಗಾಗಿ ಮಠದಲ್ಲಿ ಬೆಳಿಗ್ಗೆಯಿಂದ ರಾತ್ರಿ ವರೆಗೆ ದಾಸೋಹ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ, ವೀರಶೈವ ಸಮಾಜದ ತಾಲ್ಲೂಕು ಅಧ್ಯಕ್ಷ ಶರಣು ಸ್ವಾಮಿ, ಮಠದ ಶರಣಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT