ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ ಜಿಲ್ಲಾ ಕೇಂದ್ರದಲ್ಲೇ ಕಡಿಮೆ ಮತದಾನ!

ಹಗರಿಬೊಮ್ಮನಹಳ್ಳಿಯಲ್ಲಿ ಹೆಚ್ಚು, ಬಳ್ಳಾರಿ ನಗರದಲ್ಲಿ ಅತಿ ಕಡಿಮೆ
Last Updated 24 ಏಪ್ರಿಲ್ 2019, 14:06 IST
ಅಕ್ಷರ ಗಾತ್ರ

ಬಳ್ಳಾರಿ: 1957ರಿಂದ ಇಲ್ಲಿವರೆಗೆ ನಡೆದಿರುವ 17 ಲೋಕಸಭೆ ಚುನಾವಣೆಗಳ ಮತದಾನದ ಪೈಕಿ ಈ ಬಾರಿಯ ಚುನಾವಣೆಯ ಮತದಾನ ಸಮಾಧಾನಕರವಾಗಿದೆ. ಅಷ್ಟೇನೂ ಹೆಚ್ಚೂ ಆಗದೇ ಕಡಿಮೆಯೂ ಆಗದೆ ಜಿಲ್ಲೆಯ ಮಟ್ಟಿಗೆ ಸ್ಥಿರತೆಯನ್ನು ಕಾಪಾಡಿಕೊಂಡಿರುವುದೇ ಈ ಬಾರಿಯ ವಿಶೇಷ.

ಮೊದಲಿನಿಂದ ಇಲ್ಲೀವರೆಗೆ ಯಾವ ಚುನಾವಣೆಯಲ್ಲೂ ಮತದಾನ ಪ್ರಮಾಣ ಶೇ 71 ದಾಟಿಲ್ಲ. ಮೊದಲ ಚುನಾವಣೆಯಲ್ಲಿ ಶೇ.62.59 ಇದ್ದುದು, ಮೂರನೇ ಚುನಾವಣೆ ಹೊತ್ತಿಗೆ ಶೇ 67 ದಾಟಿತ್ತು. ನಂತರ ಕುಸಿಯಲಾರಂಭಿಸಿದ ಮತದಾನ 1999ರ ಚುನಾವಣೆಯಲ್ಲಿ ಮಾತ್ರ ಶೇ 69.84ಕ್ಕೆ ಏರಿತ್ತು.

ನಂತರ ಮತ್ತೆ ಕುಸಿಯಲಾರಂಭಿಸಿದ ಮತದಾನ 2014ರಲ್ಲಿ ದಾಖಲೆಯ ಶೇ.70.29ಕ್ಕೆ ಏರಿತ್ತು. ಮತ್ತೆ ಈ ಬಾರಿಯ ಚುನಾವಣೆಯಲ್ಲೇ ಮತದಾನ ಪ್ರಮಾಣ ಅದರ ಸಮೀಪಕ್ಕೆ ಬಂದು ನಿಂತಿದೆ.

ಪುರುಷರೇ ಹೆಚ್ಚು: ಕ್ಷೇತ್ರದಲ್ಲಿ ಪುರುಷರಿಗಿಂತಲೂ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಿದೆ. ಆದರೆ ಪುರುಷರ ಮತದಾನ ಪ್ರಮಾಣವೇ ಹೆಚ್ಚಿದೆ. 2014ರ ಚುನಾವಣೆಯಲ್ಲೂ ಇದೇ ಸನ್ನಿವೇಶವಿತ್ತು.

ಅಂಗವಿಕಲರಲ್ಲಿ ಹೆಚ್ಚು: ತೃತೀಯ ಲಿಂಗಿಗಳ ಮತದಾನದ ಪ್ರಮಾಣಕ್ಕೆ ಹೋಲಿಸಿದರೆ, ಅಂಗವಿಕಲರ ಮತದಾನ ಪ್ರಮಾಣ ಕ್ಷೇತ್ರದಲ್ಲಿ ಹೆಚ್ಚಿದೆ. 20,351 ಮತದಾರರ ಪೈಕಿ 13,947 ಮಂದಿ ಮತದಾನ ಮಾಡಿದ್ದಾರೆ. ಶೇ 68.53ರಷ್ಟು ಮತದಾನವಾಗಿದೆ. ಇಲ್ಲಿಯೂ ಪುರುಷರ ಮತದಾನ ಪ್ರಮಾಣವೇ ಹೆಚ್ಚಾಗಿದೆ.

ಮತಗಟ್ಟೆಗಳ ಪೈಕಿ ಅತಿ ಹೆಚ್ಚು ಮತದಾನ ಮತ್ತು ಅತಿ ಕಡಿಮೆ ಮತದಾನವಾದ ಮತಗಟ್ಟೆಗಳೆರಡೂ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲೇ ಇರುವುದು ವಿಶೇಷ. 154ನೇ ಮತಗಟ್ಟೆಯಲ್ಲಿ ಅತಿಹೆಚ್ಚು (ಶೇ 90.23) ಮತದಾನವಾಗಿದೆ.ಮುತ್ಕೂರಿನಲ್ಲಿದ್ದ 9ನೇ ಮತಗಟ್ಟೆಯಲ್ಲಿ ಅತಿಕಡಿಮೆ (5) ಮತದಾನವಾಗಿದೆ. ಇಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರಿಂದ, ಚುನಾವಣೆ ಸಿಬ್ಬಂದಿ ಮಾತ್ರ ಮತದಾನ ಮಾಡಿದ್ದರು.

ನಾಲ್ವರ ಸಾವು: ಚುನಾವಣೆ ಘೋಷಣೆಯಾದ ಬಳಿಕ ಮತದಾನದ ದಿನದವರೆಗೆ ಒಟ್ಟು ನಾಲ್ವರು ಸಿಬ್ಬಂದಿ ಮೃತಪಟ್ಟರು. ‘ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ನೌಕರಿ ದೊರಕಿಸಲಾಗುವುದು’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮಪ್ರಸಾದ್‌ ಮನೋಹರ್ ತಿಳಿಸಿದ್ದಾರೆ.

ತೃತೀಯ ಲಿಂಗಿಗಳ ನಿರುತ್ಸಾಹ

ಈ ಬಾರಿಯೂ ಕ್ಷೇತ್ರದಲ್ಲಿ ತೃತೀಯ ಲಿಂಗಿಗಳು ಮತದಾನದ ವಿಷಯದಲ್ಲಿ ಆಸಕ್ತಿ ತೋರಿಸಿಲ್ಲ. 232 ಮತದಾರರ ಪೈಕಿ ಕೇವಲ 17 ಮಂದಿ ಮಾತ್ರ ಮತದಾನ ಮಾಡಿದ್ದಾರೆ, ಹಡಗಲಿ ಮತ್ತು ಕೂಡ್ಲಿಗಿಯಲ್ಲಿ ಒಬ್ಬರೂ ಮತದಾನ ಮಾಡಿಲ್ಲ. ಬಳ್ಳಾರಿ ನಗರ ಮತ್ತು ಸಂಡೂರಿನಲ್ಲಿ ತಲಾ ಒಬ್ಬರು ಮಾತ್ರ ಮತದಾನ ಮಾಡಿದ್ದಾರೆ, ಹಗರಿಬೊಮ್ಮನಹಳ್ಳಿ ಮತ್ತು ಕಂಪ್ಲಿಯಲ್ಲಿ ತಲಾ ಮೂವರು, ವಿಜಯನಗರ ಕ್ಷೇತ್ರದಲ್ಲಿ ಐವರು ಮತ್ತು ಬಳ್ಳಾರಿ ಗ್ರಾಮೀಣದಲ್ಲಿ ನಾಲ್ವರು ಮತದಾನ ಮಾಡಿದ್ದಾರೆ.

ಜಿಲ್ಲಾ ಕೇಂದ್ರದಲ್ಲೇ ಕಡಿಮೆ ಮತದಾನ!

ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರಗಳ ಪೈಕಿ, ಜಿಲ್ಲಾ ಕೇಂದ್ರವಾಗಿರುವ ನಗರ ಕ್ಷೇತ್ರದಲ್ಲೇ ಅತಿ ಕಡಿಮೆ ಮತದಾನವಾಗಿರುವುದು ವಿಪರ್ಯಾಸ. ಇಡೀ ಲೋಕಸಭೆ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರು ಇರುವುದೂ ನಗರ ಕ್ಷೇತ್ರದಲ್ಲೇ, ಜಿಲ್ಲಾ ಮಟ್ಟದ ಸ್ವೀಪ್‌ ಸಮಿತಿಯು ಜಿಲ್ಲಾ ಕೇಂದ್ರದಲ್ಲಿ ಅತಿ ಹೆಚ್ಚು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ವಿದ್ಯಾರ್ಥಿ,ಸಾರ್ವಜನಿಕರ ಜಾಥಾ, ಪಂಜಿನ ಮೆರವಣಿಗೆ, ವಿವಿಧ ಸ್ಪರ್ಧೆಗಳು, ಮನರಂಜನೆ ಕಾರ್ಯಕ್ರಮಗಳು, ಅರ್ಧ ಮ್ಯಾರಥಾನ್‌ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆದಿದ್ದರೂ ಮತದಾನ ಪ್ರಮಾಣ ಹೆಚ್ಚಾಗಿಲ್ಲ. ಹಿಂದಿನ ವರ್ಷ ನಡೆದಿದ್ದ ಉಪಚುನಾವಣೆಯಲ್ಲೂ ನಗರದಲ್ಲಿ ಅತಿಕಡಿಮೆ ಮತದಾನವಾಗಿತ್ತು. ನಂತರ ಪರಿಸ್ಥಿತಿ ಸುಧಾರಣೆ ಕಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT