ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಕೊರತೆ; ಜನವಸತಿಗೆ ವನ್ಯಜೀವಿ ಲಗ್ಗೆ!

ಕಾಡಂಚಿಗೆ ಹಿಗ್ಗುತ್ತಿರುವ ಜನವಸತಿ ಪ್ರದೇಶದಿಂದ ಹೆಚ್ಚಿನ ಮಾನವ–ಪ್ರಾಣಿ ಸಂಘರ್ಷ
Last Updated 17 ಡಿಸೆಂಬರ್ 2018, 6:30 IST
ಅಕ್ಷರ ಗಾತ್ರ

ಹೊಸಪೇಟೆ: ಕಂಪ್ಲಿ ಹಾಗೂ ತಾಲ್ಲೂಕಿನ ಸುತ್ತಮುತ್ತ ನಡೆಯುತ್ತಿರುವ ಮಾನವ ಹಾಗೂ ಪ್ರಾಣಿ ಸಂಘರ್ಷ ಇತ್ತೀಚಿನ ಹೊಸ ವಿದ್ಯಮಾನವೇನಲ್ಲ. ಆದರೆ, ಕಾಡಿನ ಅಂಚಿನ ವರೆಗೆ ಜನವಸತಿ ಪ್ರದೇಶಗಳು ಹಿಗ್ಗಿರುವುದರಿಂದ ಚಿರತೆ, ಕರಡಿಗಳು ಜನರ ಮೇಲೆ ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗಿವೆ.

ಇದಕ್ಕೆ ಇತ್ತೀಚಿನ ತಾಜಾ ನಿದರ್ಶನ ಕಂಪ್ಲಿ ತಾಲ್ಲೂಕಿನ ಸೋಮಲಾಪುರದಲ್ಲಿ ಮೂರು ವರ್ಷದ ಬಾಲಕನ ಮೇಲೆ ಚಿರತೆ ಎರಗಿ ಸಾಯಿಸಿರುವುದು. ಮೇಲಿಂದ ಮೇಲೆ ಜಾನುವಾರುಗಳ ಮೇಲೆ ದಾಳಿಗಳು ನಡೆಯುತ್ತಿವೆ. ಸೋಮಲಾಪುರದಲ್ಲಿ ನಡೆದ ಘಟನೆಯ ನಂತರ ಸತತವಾಗಿ ಅರಣ್ಯ ಇಲಾಖೆಯು ಆ ಪ್ರದೇಶದಲ್ಲಿ ಚಿರತೆ ಸೆರೆಗೆ ಎಲ್ಲಿಲ್ಲದ ಕಸರತ್ತು ನಡೆಸುತ್ತಿದೆ. ಆದರೆ, ಅದಕ್ಕೆ ಯಶ ಸಿಕ್ಕಿಲ್ಲ. ಅದೇ ಪ್ರದೇಶದಲ್ಲಿ ಓಡಾಡಿಕೊಂಡಿರುವ ಚಿರತೆ, ಕಣ್ಣಾಮುಚ್ಚಾಲೆ ಆಡುತ್ತಿದೆ. ಇದರಿಂದ ಸ್ಥಳೀಯರ ನೆಮ್ಮದಿ ಸಂಪೂರ್ಣ ಹಾಳಾಗಿದೆ.

ಆಗಾಗ ನಡೆಯುತ್ತಿರುವ ಇಂತಹ ದಾಳಿಗಳನ್ನು ತಡೆಯಬಹುದು. ಆದರೆ, ಅರಣ್ಯ ಇಲಾಖೆಯು ದೂರದೃಷ್ಟಿಯ ಯೋಜನೆಗಳನ್ನು ಜಾರಿಗೊಳಿಸದೇ ಇರುವುದು ಹಾಗೂ ಕಾಡಂಚಿನ ಜನರ ಬದುಕಿನ ಶೈಲಿ ಹೇಗಿರಬೇಕೆಂದು ತಿಳಿವಳಿಕೆ ಮೂಡಿಸದೇ ಇರುವುದು ಈ ರೀತಿಯ ಘಟನೆಗಳಿಗೆ ಪ್ರಮುಖ ಕಾರಣ ಎನ್ನುತ್ತಾರೆ ವನ್ಯಜೀವಿ ತಜ್ಞ ಸಮದ್‌ ಕೊಟ್ಟೂರು.

‘ಈ ಹಿಂದೆ ಚಿರತೆ, ಕರಡಿಗಳಿಗೆ ಅವುಗಳಿರುವ ಪ್ರದೇಶದಲ್ಲೇ ಯಥೇಚ್ಛವಾಗಿ ಆಹಾರ ಸಿಗುತ್ತಿತ್ತು. ಇತ್ತೀಚಿನ ಕೆಲವು ವರ್ಷಗಳಿಂದ ಕಳ್ಳಬೇಟೆ ಹೆಚ್ಚಾಗಿದೆ. ಕಾಡು ಹಂದಿ, ಮಂಗ, ಕೋತಿ, ಮೊಲ, ಕೌಜುಗ ಸೇರಿದಂತೆ ಇತರೆ ಪ್ರಾಣಿಗಳನ್ನು ಜನ ಅಕ್ರಮವಾಗಿ ಬೇಟೆಯಾಡುತ್ತಿದ್ದಾರೆ. ನಿಧಾನವಾಗಿ ಅವುಗಳ ಸಂತತಿ ಕಡಿಮೆಯಾಗುತ್ತಿದೆ. ಇವುಗಳೇ ಚಿರತೆ, ಕರಡಿಗಳಿಗೆ ಪ್ರಮುಖ ಆಹಾರವಾಗಿದೆ. ಆಹಾರ ಸಿಗದ ಕಾರಣ ಕಾಡಂಚಿಗೆ ವಿಸ್ತರಣೆಯಾಗಿರುವ ಜನವಸತಿ ಪ್ರದೇಶಗಳನ್ನು ಗುರಿಯಾಗಿರಿಸಿ ದಾಳಿ ನಡೆಸುತ್ತಿವೆ’ ಎಂದರು.

‘ಚಿರತೆ, ಕರಡಿ ತನಗಿಂತ ಕಡಿಮೆ ಎತ್ತರದ ಯಾವುದೇ ಜೀವಿ ಕಂಡರೆ ತಕ್ಷಣವೇ ಅದರ ಮೇಲೆ ದಾಳಿ ನಡೆಸುತ್ತವೆ. ಉದಾಹರಣೆಗೆ ನಾಯಿ, ಕುರಿಗಳ ಮೇಲೆ ಆಗಾಗ ದಾಳಿ ನಡೆಸುವುದು. ಕಾಡಿನ ತುದಿಯಲ್ಲಿರುವ ಕೆಲವು ಗ್ರಾಮಸ್ಥರು ಅವರ ಮಕ್ಕಳನ್ನು ಏಕಾಂಗಿಯಾಗಿ ಕುರಿ ಕಾಯಿಸಲು ಕಳುಹಿಸುತ್ತಾರೆ. ಇಲ್ಲವೇ ಮಕ್ಕಳಿಗೆ ಒಬ್ಬಂಟಿಯಾಗಿ ಬಹಿರ್ದೆಸೆಗೆ ಹೋಗಲು ಬಿಡುತ್ತಾರೆ. ಇಂತಹ ಸಂದರ್ಭದಲ್ಲಿ ಚಿರತೆ, ಕರಡಿಗಳು ದಾಳಿ ನಡೆಸುತ್ತವೆ’ ಎಂದು ಮಾಹಿತಿ ನೀಡಿದರು.

‘ಬೆಳಿಗ್ಗೆ ಹಾಗೂ ಸಂಜೆ ವೇಳೆ ಚಿರತೆ, ಕರಡಿ ಹೆಚ್ಚು ಕ್ರಿಯಾಶೀಲವಾಗುತ್ತವೆ. ಎತ್ತರದ ಪ್ರದೇಶದ ಮೇಲೆ ಕುಳಿತುಕೊಂಡು ಬೇಟೆಗೆ ಯೋಜನೆ ರೂಪಿಸುತ್ತಿರುತ್ತವೆ. ನಾಯಿ ಬೊಗಳುವುದು, ದನಗಳು ಕೂಗುವ ಸದ್ದು ಕೇಳಿಸಿದರೆ ತಕ್ಷಣವೇ ಆ ಸ್ಥಳಕ್ಕೆ ಹೋಗಿ ದಾಳಿ ನಡೆಸುತ್ತವೆ. ಅಲ್ಲಿ ಯಾವುದು ಮೊದಲು ಅದರ ದೃಷ್ಟಿಗೆ ಬೀಳುತ್ತದೆಯೋ ಅದರ ಮೇಲೆ ಎರಗುತ್ತದೆ. ಇತರೆ ಪ್ರಾಣಿಗಳು ಹಾಗೂ ಮನುಷ್ಯರ ನಡುವಿನ ವ್ಯತ್ಯಾಸ ಅದು ಗುರುತಿಸುವುದಿಲ್ಲ’ ಎಂದರು.

‘ಅರಣ್ಯದಂಚಿನ ಜನ ಮಕ್ಕಳಿಗೆ ಯಾವುದೇ ಕಾರಣಕ್ಕೂ ಏಕಾಂಗಿಯಾಗಿ ಹೊರಗೆ ಬಿಡಬಾರದು. ಬೆಳಿಗ್ಗೆ ಹಾಗೂ ಸಂಜೆ ವೇಳೆ ಜನ ಗುಂಪು ಗುಂಪಾಗಿ ಓಡಾಡಬೇಕು. ಮನೆಯಲ್ಲೇ ಶೌಚಾಲಯಗಳನ್ನು ಕಟ್ಟಿಸಿಕೊಳ್ಳಬೇಕು. ಮಕ್ಕಳನ್ನು ಕಟ್ಟಿಗೆ ತರಲು ಅರಣ್ಯಕ್ಕೆ ಕಳಿಸಬಾರದು. ಈ ಕುರಿತು ಅರಣ್ಯ ಇಲಾಖೆಯು ತಿಳಿವಳಿಕೆ ಮೂಡಿಸಬೇಕು’ ಎಂದು ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT