ಟೇಬಲ್‌ ಟೆನ್ನಿಸ್‌ನಲ್ಲಿ ಎತ್ತರದ ಸಾಧನೆ

7

ಟೇಬಲ್‌ ಟೆನ್ನಿಸ್‌ನಲ್ಲಿ ಎತ್ತರದ ಸಾಧನೆ

Published:
Updated:
Deccan Herald

ಹಗರಿಬೊಮ್ಮನಹಳ್ಳಿ: ಪಟ್ಟಣದ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಬಾಲಕರು ಟೇಬಲ್ ಟೆನ್ನಿಸ್ ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡಿದ್ದಾರೆ.

ಸತತ ಎರಡು ವರ್ಷಗಳಿಂದ ವಲಯ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಶಸ್ತಿ ಬಾಚಿಕೊಂಡಿರುವ ಪ್ರಾಥಮಿಕ, ಪ್ರೌಢಶಾಲೆಯ ತಂಡಗಳು, ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.

ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಬಿ. ಆಕಾಶ್‌ ನಾಯಕತ್ವದಲ್ಲಿ ಎಸ್‌. ಗುರುಬಸವರಾಜ, ಬಿ.ವಿ.ಓಂ, ಎ.ಎಂ. ಗುರುಬಸವರಾಜ ಮತ್ತು ಜಯನಾಯಕ ಅವರನ್ನು ಒಳಗೊಂಡ ತಂಡವು ಸೆಪ್ಟೆಂಬರ್‌ನಲ್ಲಿ ಉಡುಪಿಯಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಿತ್ತು. ಆದರೆ, ಸೆಮಿಫೈನಲ್‌ನಲ್ಲಿ ಉಡುಪಿ ವಿರುದ್ಧ ಸೋಲು ಅನುಭವಿಸಿತು.

ಇನ್ನೂ ಪ್ರೌಢಶಾಲೆ ವಿಭಾಗದಲ್ಲಿ ಟಿ.ಜಿ. ಹರ್ಷಾ ನಾಯಕತ್ವದಲ್ಲಿ ಎಂ. ವಿಶ್ವಾಸ್‌, ಆರ್‌.ಎಂ. ಹರ್ಷಾ, ಜಿ.ಎಂ. ಜೀವನ್‌, ಎಚ್‌. ದರ್ಶನ ಅವರನ್ನು ಒಳಗೊಂಡ ತಂಡವು ಶಿವಮೊಗ್ಗ ವಿರುದ್ಧ ಜಯ ಗಳಿಸಿ, ಎರಡನೇ ಪಂದ್ಯದಲ್ಲಿ ಕೋಲಾರ ವಿರುದ್ಧ ಪರಾಭವಗೊಂಡಿತು. ಆದರೆ, ಇದರಿಂದ ಎದೆಗುಂದದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಎರಡು ತಂಡಗಳು ಬರುವ ವರ್ಷದ ಸ್ಪರ್ಧೆಗೆ ಯಾವುದೇ ಕೊರತೆ ಆಗದಂತೆ ಸಿದ್ಧತೆ ಮಾಡಿಕೊಳ್ಳುತ್ತಿವೆ.

ದೈಹಿಕ ಶಿಕ್ಷಣ ಶಿಕ್ಷಕ ದೊಡ್ಡ ಬಸವರಾಜ, ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಶಿಕ್ಷಕರಾದ ಬ್ಯಾಡಗಿ ಅಶೋಕ, ಗುರುಬಸವರಾಜ ಅವರು ವಿದ್ಯಾರ್ಥಿಗಳಿಗೆ ಮುಂದಿನ ಸ್ಪರ್ಧೆಗೆ ಈಗಿನಿಂದಲೇ ಅಣಿಗೊಳಿಸುತ್ತಿದ್ದಾರೆ. ಅವರಿಗೆ ಎಲ್ಲ ರೀತಿಯ ಸೂಕ್ಷ್ಮ ವಿಷಯಗಳನ್ನು ತಿಳಿಸಿಕೊಡುತ್ತಿದ್ದಾರೆ. ಹೀಗಾಗಿ ಈ ಎರಡೂ ತಂಡಗಳು ಮುಂದಿನ ವರ್ಷ ನಡೆಯಲಿರುವ ಸ್ಪರ್ಧೆಯಲ್ಲಿ ಪ್ರಶಸ್ತಿ ಜಯಿಸಲು ತುದಿಗಾಲ ಮೇಲೆ ನಿಂತಿವೆ.

‘ಈ ಶಾಲೆಯ ಬಾಲಕರು ಟೇಬಲ್ ಟೆನ್ನಿಸ್‌ ಆಟದಲ್ಲಿನ ಪ್ರಮುಖ ತಂತ್ರಗಳಾದ ಸ್ಮ್ಯಾಶ್‌, ಸ್ಪಿನ್‌ ಮತ್ತು ಚಾಪ್‌ ಬಳಸುವಾಗ ಎದುರಾಳಿ ಕ್ರೀಡಾಪಟುಗಳನ್ನು ಗೊಂದಲದಲ್ಲಿ ಸಿಲುಕಿಸುವ ಚಾಕಚಾಕ್ಯತೆ ಹೊಂದಿದ್ದಾರೆ. ಇದಲ್ಲದೇ ಇನ್ನು ಕೆಲ ಹೊಸ ತಂತ್ರಗಳನ್ನು ಹೇಳಿಕೊಡಲಾಗುತ್ತಿದೆ’ ಎಂದು ಶಿಕ್ಷಕ ಅಶೋಕ್‌ ಹೇಳಿದರು.

‘ಪಾಠಗಳಿಗೆ ತೊಂದರೆಯಾಗದಂತೆ ಬೆಳಿಗ್ಗೆ 8 ರಿಂದ 9.30ರ ವರೆಗೆ ಮತ್ತು ಸಂಜೆ ಶಾಲೆ ಮುಗಿದ ಬಳಿಕ ಒಂದು ಗಂಟೆಗೆ ಕ್ರೀಡೆಗೆ ಮೀಸಲಿಟ್ಟು, ವಿದ್ಯಾರ್ಥಿಗಳಿಗೆ ತರಬೇತಿ ಕೊಡಲಾಗುತ್ತಿದೆ’ ಎನ್ನುತ್ತಾರೆ ಮುಖ್ಯಶಿಕ್ಷಕಿ ಕೆ.ಎಂ.ಟಿ.ಇಂದುಮತಿ.

‘ಶಾಲೆಯಲ್ಲಿ ಪಠ್ಯದ ಜತೆಗೆ ಕ್ರೀಡೆಗಳಿಗೂ ಸಮಾನವಾದ ಪ್ರೋತ್ಸಾಹವಿದೆ. ಎಲ್ಲ ಶಿಕ್ಷಕರು ತರಬೇತಿ ನೀಡಿದ್ದರಿಂದಲೇ ಟೇಬಲ್ ಟೆನ್ನಿಸ್‌ನಲ್ಲಿ ಸತತ ಎರಡು ಬಾರಿ ರಾಜ್ಯಮಟ್ಟದಲ್ಲಿ ಭಾಗವಹಿಸಲು ಸಾಧ್ಯವಾಗಿದೆ’ ಎಂದು ಆಟಗಾರ ಬಿ.ವಿ. ಓಂ ತಿಳಿಸಿದರು.

ಕ್ರೀಡೆಯ ಜತೆಗೆ ಉತ್ತಮ ಶಿಕ್ಷಣದ ಮೂಲಕ ಈ ಶಾಲೆ ಹೆಸರು ಮಾಡಿದೆ. ಎಸ್ಸೆಸ್ಸೆಲ್ಸಿಯಲ್ಲಿ ಸತತ ಆರು ವರ್ಷಗಳಿಂದ ಶಾಲೆಗೆ ನೂರಕ್ಕೆ ನೂರರಷ್ಟು ಫಲಿತಾಂಶ ಬರುತ್ತಿದೆ.

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !