ಯುವ ವಿಜ್ಞಾನಿಗಳ ಅಣಿಗೊಳಿಸುವ ಶಾಲೆ

7
ಮಾನ್ಯರಮಸಲವಾಡ ಸರ್ಕಾರಿ ಪ್ರೌಢಶಾಲೆಯಲ್ಲಿ ಮಾದರಿ ಪ್ರಯೋಗಾಲಯ

ಯುವ ವಿಜ್ಞಾನಿಗಳ ಅಣಿಗೊಳಿಸುವ ಶಾಲೆ

Published:
Updated:
Prajavani

ಹೂವಿನಹಡಗಲಿ: ತಾಲ್ಲೂಕಿನ ಮಾನ್ಯರಮಸಲವಾಡ ಸರ್ಕಾರಿ ಪ್ರೌಢಶಾಲೆಯು ಸುಸಜ್ಜಿತ ಪ್ರಯೋಗಾಲಯ ವ್ಯವಸ್ಥೆಯನ್ನು ಹೊಂದಿದೆ. ಪ್ರೌಢ ಶಿಕ್ಷಣ ಹಂತದಲ್ಲೇ ವಿದ್ಯಾರ್ಥಿಗಳಿಗೆ ಮೂಲ ವಿಜ್ಞಾನ ಕಲಿಸುವ ಮೂಲಕ ಈ ಸರ್ಕಾರಿ ಶಾಲೆ ಮಾದರಿಯಾಗಿದೆ.

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ನೆರವಿನಲ್ಲಿ ಪ್ರಯೋಗಾಲಯ ತೆರೆಯಲಾಗಿದೆ. ಭೌತ, ರಾಸಾಯನ ಮತ್ತು ಜೀವಶಾಸ್ತ್ರಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು ನಡೆಸುವ ಎಲ್ಲ ವಿಜ್ಞಾನ ಪರಿಕರಗಳು ಈ ಶಾಲೆಯಲ್ಲಿ ಉಂಟು. ಹೀಗಾಗಿ, 8, 9, 10ನೇ ತರಗತಿ ವಿದ್ಯಾರ್ಥಿಗಳು ತಮ್ಮ ಪಠ್ಯ ವಿಷಯ ಮತ್ತು ವಿಜ್ಞಾನದ ಕೌತುಕಗಳನ್ನು ಪ್ರಾಯೋಗಿಕವಾಗಿಯೇ ಅಭ್ಯಾಸ ಮಾಡುತ್ತಾರೆ. ವಿದ್ಯಾರ್ಥಿಗಳು ಜಿರಳೆ, ಕಪ್ಪೆಗಳನ್ನು ಕುಯ್ದು ಜೀವಶಾಸ್ತ್ರ ಅಧ್ಯಯನ ಮಾಡುವಷ್ಟು ಪ್ರಗತಿ ಸಾಧಿಸಿದ್ದಾರೆ.

ಶಾಲೆಯ ವಿಜ್ಞಾನ ಶಿಕ್ಷಕ ನಿಂಗಪ್ಪ ಕಾಡಪ್ಪನವರ 2013ರಲ್ಲಿ ಸಣ್ಣ ಪ್ರಮಾಣದ ಪ್ರಯೋಗಾಲಯ ಪ್ರಾರಂಭಿಸಿದರು. ಶಾಲಾ ಅನುದಾನ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ನೆರವು ಹಾಗೂ ಸ್ವಂತ ಹಣವನ್ನೂ ವ್ಯಯಿಸಿ ಸುವ್ಯವಸ್ಥಿತ ಪ್ರಯೋಗಾಲಯ ಅಭಿವೃದ್ಧಿಪಡಿಸಿದ್ದಾರೆ.

ಪ್ರಸ್ತುತ ಕಾಲೇಜುಗಳಲ್ಲೇ ವಿಜ್ಞಾನ ಪ್ರಯೋಗಾಲಯಗಳ ಕೊರತೆ ಇದೆ. ಆದರೆ, ಮೂಲೆಕಟ್ಟಿನ ಹಳ್ಳಿಯ ಈ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾಲೇಜು ಮಟ್ಟದ ಪ್ರಯೋಗಾಲಯಕ್ಕೆ ಕಡಿಮೆ ಇಲ್ಲದಂತೆ ಲ್ಯಾಬ್‌ ರೂಪಿಸಲಾಗಿದೆ. ಶಾಲಾ ಪ್ರಯೋಗಾಲಯದಲ್ಲಿ ಸೂಕ್ಷ್ಮದರ್ಶಕ ಯಂತ್ರಗಳು, ಟೆಲಿಸ್ಕೋಪ್‌ಗಳು, ಪ್ರಣಾಳಗಳು, ಕ್ಲಾಸಿಕಲ್ ಪ್ಲಾಸ್ಕ್, ಬೀಕರ್‌ಗಳು, ಟೆಸ್ಟ್‌ಟ್ಯೂಬ್ ಸ್ಟ್ಯಾಂಡ್, ಎ.ಸಿ, ಡಿ.ಸಿ. ಡೈನಾಮೊಗಳು, ಡಿ.ಸಿ. ಮೋಟಾರ್‌ಗಳು, ದರ್ಪಣ, ಮಸೂರಗಳು, ಎಲ್ಲ ಬಗೆಯ ರಾಸಾಯನಿಕಗಳು, ಕಂಪ್ಯೂಟರ್ ಕೂಡ ಇದೆ.

ಇಲ್ಲಿನ ವಿದ್ಯಾರ್ಥಿಗಳು ಸೂಕ್ಷ್ಮದರ್ಶಕ ಬಳಸಿ ಜೀವಕೋಶಗಳನ್ನು ಅಭ್ಯಸಿಸುತ್ತಾರೆ. ಟೆಲಿಸ್ಕೋಪ್‌ ಮೂಲಕ ಖಗೋಳ ಶಾಸ್ತ್ರ ಅಧ್ಯಯನ ಮಾಡುತ್ತಾರೆ. ರಾಸಾಯನಿಕಗಳ ಸಂಯೋಜನೆ, ವಿಭಜನೆಗಳಲ್ಲಿ ತೊಡಗುತ್ತಾರೆ. ದರ್ಪಣ, ಮಸೂರಗಳನ್ನು ಬಳಸಿ ಪ್ರಯೋಗ ನಡೆಸುತ್ತಾರೆ. ಪ್ರಯೋಗಾಲಯದಲ್ಲಿ ಎಲ್ಲ ವಿದ್ಯಾರ್ಥಿಗಳನ್ನು ಒಳಗೊಳ್ಳುವಂತೆ ತರಗತಿವಾರು ಗುಂಪುಗಳನ್ನು ರಚಿಸಲಾಗಿದೆ.

ಗ್ರಾಮೀಣ ಮಕ್ಕಳು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಪೈಪೋಟಿ ನೀಡುವಂತಾಗಬೇಕು ಎನ್ನುವುದು ಶಿಕ್ಷಕ ನಿಂಗಪ್ಪನವರ ಹಂಬಲ. ಪ್ರಯೋಗಗಳ ಮೂಲಕ ಹೊಸದನ್ನು ತಿಳಿಸಿಕೊಡುವ ಇವರು ಮಕ್ಕಳಲ್ಲಿ ವಿಜ್ಞಾನದ ಆಸಕ್ತಿ ಚಿಗುರುವಂತೆ ಮಾಡುತ್ತಾರೆ. ಸ್ಥಳೀಯ ಸಾಮಗ್ರಿ ಬಳಸಿ ವಿಜ್ಞಾನ ಉಪಕರಣ ತಯಾರಿಸುವ ಮಟ್ಟಕ್ಕೆ ಮಕ್ಕಳನ್ನು ಅಣಿಗೊಳಿಸಿದ್ದಾರೆ.

ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆಯೋಜಿಸಿದ್ದ ರಾಜ್ಯ ಮಟ್ಟದ ಇನ್‌ಸ್ಪೈರ್ ಅವಾರ್ಡ್ ಮತ್ತು ವಿಜ್ಞಾನ ಮಾದರಿಗಳ ಪ್ರದರ್ಶನದಲ್ಲಿ ಶಿಕ್ಷಕ ನಿಂಗಪ್ಪನವರ ಮಾರ್ಗದರ್ಶನದಲ್ಲಿ ಶಾಲೆಯ ವಿದ್ಯಾರ್ಥಿಗಳು ರೂಪಿಸಿದ ವಿಜ್ಞಾನ ಮಾದರಿಗಳಿಗೆ 2012 ಮತ್ತು 2013ರಲ್ಲಿ ಸತತ ಎರಡು ಬಾರಿ ಪ್ರಥಮ ಬಹುಮಾನ ಲಭಿಸಿವೆ.

ವಿದ್ಯುತ್ ಸಮಸ್ಯೆಗೆ ಪರಿಹಾರವಾಗಿ ರೂಪಿಸಿದ ‘ವಿದ್ಯುತ್ ಉಳಿತಾಯ ಗ್ರಾಮ’ ಮತ್ತು ಬೆಳಕಿನ ಕಿರಣಗಳನ್ನು ಆಧರಿಸಿ ಬೀದಿದೀಪಗಳು ಸ್ವಯಂಚಾಲಿತವಾಗಿ ಹೊತ್ತಿಕೊಳ್ಳುವ, ಆರುವ ‘ಸೋಲಾರ ಆಟೊ’ ಮಾದರಿಗಳು ದೆಹಲಿಯಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಇನ್‌ಸ್ಪೈರ್ ಅವಾರ್ಡ್ ಮತ್ತು ವಿಜ್ಞಾನ ಮಾದರಿಗಳ ಪ್ರದರ್ಶನದಲ್ಲಿ ಮೆಚ್ಚುಗೆ ಗಳಿಸಿದ್ದವು.

‘ಪ್ರತಿವರ್ಷ ವಿಜ್ಞಾನ ದಿನಾಚರಣೆಯಂದು ಮಕ್ಕಳಿಂದಲೇ ಮಾದರಿಗಳನ್ನು ತಯಾರಿಸಿ, ಉತ್ತಮ ಮಾದರಿಗಳಿಗೆ ಬಹುಮಾನ ನೀಡುತ್ತೇವೆ. ಇದಕ್ಕಾಗಿ ಬಿ.ಸಿ.ಎಂ. ಅಧಿಕಾರಿ ಎಂ.ಪಿ.ಎಂ.ಅಶೋಕ ಠೇವಣಿ ಇರಿಸಿದ್ದಾರೆ. ಮುಖ್ಯ ಶಿಕ್ಷಕ ಸಣ್ಣ ಲೆಕ್ಕಪ್ಪ ಮತ್ತು ಸಿಬ್ಬಂದಿ, ಎಸ್‌.ಡಿ.ಎಂ.ಸಿ.ಯವರ ಸಹಕಾರದಿಂದ ಉತ್ತಮ ದರ್ಜೆಯ ಪ್ರಯೋಗಾಲಯ ರೂಪಿಸಿದ್ದೇವೆ’ ಎಂದು ಶಿಕ್ಷಕ ನಿಂಗಪ್ಪ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !