ಶನಿವಾರ, ಜೂನ್ 19, 2021
27 °C
ಬೀಳುವ ಹಂತದಲ್ಲಿ ಕಟ್ಟಡ, ಕೊಠಡಿಗಳಿಗಿಲ್ಲ ಕಿಟಕಿ–ಬಾಗಿಲು, ನೆಲದ ಮೇಲೆ ಪಾಠ

ಉಪ ಬಂಧಿಖಾನೆಯಲ್ಲೇ ಶಾಲೆ!

ಶಶಿಕಾಂತ ಎಸ್. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Deccan Herald

ಹೊಸಪೇಟೆ: ಬ್ರಿಟಿಷರ ಕಾಲದಲ್ಲಿ ಈ ಕಟ್ಟಡ ಉಪ ಬಂಧಿಖಾನೆಯಾಗಿತ್ತು. ನಂತರ ಮುನ್ಸಿಪಲ್‌ ಶಾಲೆಯಾಗಿ ಬದಲಾಯಿತು. ಹೆಸರೇನೋ ಬದಲಾಗಿ ಹೋಯಿತು. ಆದರೆ, ಕಟ್ಟಡದ ಸ್ವರೂಪ ಬದಲಾಗಲಿಲ್ಲ. ಇದರಿಂದಾಗಿ ಶಾಲಾ ಮಕ್ಕಳಿಗೆ ಈಗಲೂ ಬಂಧಿಖಾನೆಯಲ್ಲಿರುವ ಅನುಭವ!

ಇದು ನಗರದ ಮುನ್ಸಿಪಲ್‌ ಪ್ರೌಢಶಾಲೆಯ ದುಸ್ಥಿತಿ. ಈ ಶಾಲೆಯಲ್ಲಿ ಕನ್ನಡ, ಇಂಗ್ಲಿಷ್‌, ಉರ್ದು ಹಾಗೂ ತೆಲುಗು ಭಾಷೆ ಮಾಧ್ಯಮದಲ್ಲಿ ಬೋಧನಾ ವ್ಯವಸ್ಥೆ ಇದೆ. ಆದರೆ, ಒಂದು ಶಾಲೆಯೆಂದು ಹೇಳಿಕೊಳ್ಳಲು ಇಲ್ಲಿ ಯಾವುದೇ ವ್ಯವಸ್ಥೆ ಇಲ್ಲ. ಇಡೀ ಕಟ್ಟಡ ಶಿಥಿಲಗೊಂಡಿದೆ. ಒಟ್ಟು 35 ಕೊಠಡಿಗಳಿದ್ದು, 16 ಕೊಠಡಿಗಳನ್ನು ಉಪಯೋಗಿಸುತ್ತಿಲ್ಲ. ಇನ್ನುಳಿದ ಕೊಠಡಿಗಳು ಯಾವುದೇ ಸಂದರ್ಭದಲ್ಲಿ ಕುಸಿದು ಬೀಳಬಹುದು. ಅಷ್ಟರಮಟ್ಟಿಗೆ ಅವುಗಳು ಶಿಥಿಲಗೊಂಡಿದ್ದು, ಆತಂಕದ ನಡುವೆ ಪಾಠ–ಪ್ರವಚನ ನಡೆಯುತ್ತಿದೆ.

ಕೊಠಡಿಗಳ ಮುಂಭಾಗದಲ್ಲಿರುವ ಹೆಂಚುಗಳು ಬಿದ್ದು ಹೋಗಿವೆ. ಕಟ್ಟಡದ ಅಲ್ಲಲ್ಲಿ ಮೇಲ್ಛಾವಣಿ ಬಿದ್ದು ಹೋಗಿದೆ. ಕೆಲವೆಡೆ ಕಿತ್ತು ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಕೆಲವು ಕೊಠಡಿಗಳಿಗೆ ಬಾಗಿಲು ಇಲ್ಲ. ಕೆಲವಕ್ಕೆ ಕಿಟಕಿಗಳು ಇಲ್ಲ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕುಳಿತುಕೊಳ್ಳಲು ಡೆಸ್ಕ್‌ಗಳ ವ್ಯವಸ್ಥೆ ಇಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಅನಿವಾರ್ಯವಾಗಿ ನೆಲದ ಮೇಲೆ ಕುಳಿತುಕೊಂಡು ಪಾಠ ಕೇಳುವಂತಹ ಪರಿಸ್ಥಿತಿ ಇದೆ.

2015ರಲ್ಲಿ ಶಾಲಾ ಪರಿಸರದಲ್ಲೇ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿತ್ತು. ಆದರೆ, ಸೂಕ್ತ ನಿರ್ವಹಣೆ ಇಲ್ಲದ ಕಾರಣ ಅದು ಕೆಟ್ಟು ಹೋಗಿದೆ. ವಿದ್ಯಾರ್ಥಿಗಳು ಮನೆಯಿಂದಲೇ ಕುಡಿಯುವ ನೀರು ತೆಗೆದುಕೊಂಡು ಬರುತ್ತಾರೆ.

1935ರಲ್ಲಿ ಬಂಧಿಖಾನೆ ಇಲಾಖೆಯಿಂದ ಶಿಕ್ಷಣ ಇಲಾಖೆಗೆ ಈ ಕಟ್ಟಡ ಹಸ್ತಾಂತರಗೊಂಡಿತ್ತು. ಶಾಲೆ ಆರಂಭಗೊಂಡು 83 ವರ್ಷಗಳಾಗಿವೆ. ಶಾಲೆ ಆರಂಭಗೊಂಡ ದಿನಗಳಿಂದ ಇತ್ತೀಚಿನ ವರ್ಷಗಳ ವರೆಗೆ ಶಾಲೆಗೆ 1,500ರಿಂದ 2,000 ಮಕ್ಕಳು ಬರುತ್ತಿದ್ದರು. ಆದರೆ, ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತ ಬಂದಿದೆ. ಪ್ರಸಕ್ತ ಸಾಲಿನಲ್ಲಿ 589 ವಿದ್ಯಾರ್ಥಿಗಳಷ್ಟೇ ವ್ಯಾಸಂಗ ಮಾಡುತ್ತಿದ್ದಾರೆ. 24 ಜನ ಬೋಧಕ ಸಿಬ್ಬಂದಿ ಇದ್ದಾರೆ. 

ಶಾಲಾ ಕಟ್ಟಡ ನವೀಕರಣಕ್ಕೆ ಸಂಬಂಧಿಸಿದಂತೆ ಪ್ರಾಚಾರ್ಯರು ಮಾಡಬಾರದ ಕಸರತ್ತು ಮಾಡುತ್ತಿದ್ದಾರೆ. ಸರ್ಕಾರದ ಮಟ್ಟದಲ್ಲಿ ಹಲವು ಉನ್ನತ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಆದರೆ, ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. 

‘ಶಾಲೆಯ ದುಸ್ಥಿತಿ ಕುರಿತು ಶಿಕ್ಷಣ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಇಲಾಖೆಗೆ ಸಂಬಂಧಿಸಿದ ಯಾರೇ ಜಿಲ್ಲೆಗೂ ಬಂದರೂ ಅವರಿಗೆ ಮನವಿ ಸಲ್ಲಿಸಿದ್ದೇನೆ. ಆದರೆ, ಯಾರೊಬ್ಬರೂ ಸ್ಪಂದಿಸಿಲ್ಲ’ ಎಂದು ಶಾಲೆಯ ಮುಖ್ಯಶಿಕ್ಷಕ ಡಿ. ಗುರುಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

 

 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು