ಹಳೆ ಘಟನೆಯಿಂದ ಕಲಿಯದ ಪಾಠ

7
ನಾಲ್ಕು ಹಂತದ ಭದ್ರತಾ ವ್ಯವಸ್ಥೆಯಿದ್ದರೂ ಹಂಪಿ ಸ್ಮಾರಕಗಳಿಗಿಲ್ಲ ಸುರಕ್ಷತೆ; ಸಮನ್ವಯದ ಕೊರತೆ

ಹಳೆ ಘಟನೆಯಿಂದ ಕಲಿಯದ ಪಾಠ

Published:
Updated:
Prajavani

ಹೊಸಪೇಟೆ: ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು (ಎ.ಎಸ್‌.ಐ.) ಹಳೆಯ ಘಟನೆಗಳಿಂದ ಯಾವುದೇ ಪಾಠ ಕಲಿತಂತಿಲ್ಲ. ಒಂದುವೇಳೆ ಅದು ಎಚ್ಚೆತ್ತುಕೊಂಡಿದ್ದರೆ ಹಂಪಿ ಸ್ಮಾರಕಗಳಿಗೆ ಹಾನಿ ಉಂಟು ಮಾಡುವ ಘಟನೆಗಳು ಜರುಗುತ್ತಿರಲಿಲ್ಲ.

ಹಂಪಿ ಗಜಶಾಲೆ ಹಿಂದಿನ ವಿಷ್ಣು ದೇಗುಲ ಮಂಟಪದ ಕಲ್ಲುಗಂಬಗಳನ್ನು ಯುವಕರು ಬೀಳಿಸುವ ವಿಡಿಯೊ ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಘಟನೆ ಯಾವಾಗ ನಡೆದಿದೆ ಎನ್ನುವುದು ಇದುವರೆಗೆ ಗೊತ್ತಾಗಿಲ್ಲ. ಅದರ ಬಗ್ಗೆ ಪೊಲೀಸ್‌ ಇಲಾಖೆ ತನಿಖೆ ಕೈಗೊಂಡಿದೆ. ಅದೇನೇ ಇರಲಿ, ಹಂಪಿ ಸ್ಮಾರಕಗಳ ಸುರಕ್ಷತೆಯ ವಿಷಯದಲ್ಲಿ ‘ಖಾತ್ರಿ’ ಪಡಿಸುವ ಕ್ರಮಗಳನ್ನು ಅದು ಕೈಗೊಂಡಿದೆಯೇ ಎಂಬ ಪ್ರಶ್ನೆ ಹಾಕಿಕೊಂಡರೆ, ಇಲ್ಲ ಬಿಟ್ಟರೆ ಬೇರೇನೂ ಉತ್ತರ ಸಿಗುವುದಿಲ್ಲ.

2017 ಜೂ. 28ರಂದು ಚಕ್ರತೀರ್ಥದ ಕೋಟಿಲಿಂಗವನ್ನು ದುಷ್ಕರ್ಮಿಗಳು ಭಗ್ನಗೊಳಿಸಿದ್ದರು. ಅದಾದ ಎರಡು ದಿನಗಳ ನಂತರ ಕೃಷ್ಣ ದೇವಸ್ಥಾನದ ಎಲೆ ಬಜಾರ್‌ನಲ್ಲಿರುವ ಕಂಬವನ್ನು ಯುವಕನೊಬ್ಬ ಉರುಳಿಸಿದ್ದ. ಅದಕ್ಕೂ ಹಿಂದೆ ಮಾಲ್ಯವಂತ, ಅಚ್ಯುತರಾಯ ದೇವಾಲಯ ಬೀದಿಯಲ್ಲಿರುವ ಕಲ್ಲುಗಂಬಗಳನ್ನು ಇದೇ ರೀತಿ ಬೀಳಿಸಲಾಗಿತ್ತು. ಅದರ ವಿರುದ್ಧ ಸ್ಥಳೀಯರು ಸೇರಿದಂತೆ ಸ್ಮಾರಕಗಳ ಬಗ್ಗೆ ಕಾಳಜಿ ಹೊಂದಿದ್ದವರು ರಸ್ತೆಗೆ ಇಳಿದು, ಸುರಕ್ಷತೆಗೆ ಒತ್ತು ಕೊಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.

ಬಳಿಕ ಪೊಲೀಸರು ಗಸ್ತು ಹೆಚ್ಚಿಸಿದ್ದರು. ಎರಡು ಕಡೆ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿತ್ತು. ಎಲ್ಲ ಕಡೆ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸುವ ಭರವಸೆ ಎ.ಎಸ್‌.ಐ. ನೀಡಿತ್ತು. ಆದರೆ, ಅದು ಈಗಲೂ ಭರವಸೆಯಾಗಿಯೇ ಉಳಿದಿದೆ.

ನಾಲ್ಕು ಹಂತದ ಭದ್ರತಾ ವ್ಯವಸ್ಥೆ

ಹಂಪಿಯಲ್ಲಿ ನಾಲ್ಕು ಹಂತದ ಭದ್ರತಾ ವ್ಯವಸ್ಥೆ ಇದೆ. ಪೊಲೀಸರು, ಗೃಹರಕ್ಷಕ ಸಿಬ್ಬಂದಿ, ಪ್ರವಾಸಿ ಮಿತ್ರ ಹಾಗೂ ಎ.ಎಸ್‌.ಐ.ಗೆ ಸೇರಿದ ಖಾಸಗಿ ಭದ್ರತಾ ಸಿಬ್ಬಂದಿ ಇದ್ದಾರೆ. ಹೀಗಿದ್ದರೂ ಪದೇ ಪದೇ ಭದ್ರತೆಯನ್ನು ಬೇಧಿಸಿ, ಸ್ಮಾರಕಗಳನ್ನು ಭಗ್ನಗೊಳಿಸುವ ಕೃತ್ಯಗಳು ನಿರಾತಂಕವಾಗಿ ನಡೆಯುತ್ತಿವೆ. 

ಅಷ್ಟೇ ಅಲ್ಲ, ಎ.ಎಸ್‌.ಐ., ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ, ರಾಜ್ಯ ಪುರಾತತ್ವ ಇಲಾಖೆಯಂತಹ ಪ್ರಮುಖ ಕಚೇರಿಗಳು ಅಲ್ಲೇ ಇದ್ದು, ಆ ಇಲಾಖೆಗಳಿಗೆ ಸೇರಿದ ಅನೇಕ ಜನ ಸಿಬ್ಬಂದಿ ಅಲ್ಲಿಯೇ ಓಡಾಡುತ್ತಿರುತ್ತಾರೆ. ಆದರೂ ಈ ರೀತಿಯ ಘಟನೆಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ. 

‘ಹಂಪಿಯಲ್ಲಿ ನಾಲ್ಕೈದು ಇಲಾಖೆಗಳಿವೆ. ಆದರೆ, ಅವುಗಳ ನಡುವೆ ಸಮನ್ವಯದ ಕೊರತೆ ಇದೆ. ಏನೇ ಹೇಳಿದರೂ ಅಧಿಕಾರಿಗಳು ನುಣುಚಿಕೊಳ್ಳುತ್ತಾರೆ. ಹೀಗಾಗಿಯೇ ಇಂತಹ ಘಟನೆಗಳು ಜರುಗುತ್ತಿವೆ’ ಎನ್ನುತ್ತಾರೆ ಹಂಪಿ ಮಾರ್ಗದರ್ಶಿ ಗೋಪಾಲ. 

‘ಎರಡು ವರ್ಷಗಳ ಹಿಂದೆ ಭಗ್ನಗೊಳಿಸಿದ ಕೋಟಿಲಿಂಗದ ಬಳಿ ಇದುವರೆಗೆ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಿಲ್ಲ. ವಿಜಯ ವಿಠಲ ದೇಗುಲಕ್ಕೆ ಅತಿ ಹೆಚ್ಚು ಪ್ರವಾಸಿಗರು ಭೇಟಿ ಕೊಡುತ್ತಾರೆ. ಅಲ್ಲಿ ಮೆಟಲ್‌ ಡಿಟೆಕ್ಟರ್‌ ಇಲ್ಲ. ಯಾರ ವಸ್ತುಗಳನ್ನು ಪರಿಶೀಲಿಸುವುದಿಲ್ಲ. ನಮ್ಮ ಭದ್ರತಾ ವ್ಯವಸ್ಥೆ ಅಚ್ಚುಕಟ್ಟಾಗಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಪದೇ ಪದೇ ಈ ರೀತಿ ಆಗುತ್ತಿರುವುದಕ್ಕೆ ನೋವಾಗುತ್ತಿದೆ’ ಎಂದರು.

 

 

 

 

 

 

 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !