ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌– ಬಿಜೆಪಿ ನಡುವೆಯೇ ಜಿದ್ದಾಜಿದ್ದು

ಒಂದಿಷ್ಟು ಪ್ರದೇಶದಲ್ಲಿ ರಾಮದಾಸ್‌, ಮತ್ತೊಂದಿಷ್ಟು ಪ್ರದೇಶದಲ್ಲಿ ಸೋಮಶೇಖರ್‌ ಪರ ಒಲವು
Last Updated 10 ಮೇ 2018, 8:56 IST
ಅಕ್ಷರ ಗಾತ್ರ

ಮೈಸೂರು:‌ ‘ಕೃಷ್ಣರಾಜ ಕ್ಷೇತ್ರದಲ್ಲಿ ನಮ್ಮ ಗೆಲುವು ಡೌಟು’ ಎಂದು ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ ಮಾರನೇ ದಿನವೇ ಪಕ್ಷದ ಕಾರ್ಯಕರ್ತರ ಉತ್ಸಾಹ ಕುಗ್ಗಿದ್ದರೆ, ಆ ಲಾಭವನ್ನು ಪಡೆಯಲು ಬಿಜೆಪಿ, ಕಾಂಗ್ರೆಸ್‌ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ.

ದೇವೇಗೌಡರ ಹೇಳಿಕೆಗೆ ಮುನ್ನವೂ ಕ್ಷೇತ್ರದಲ್ಲಿ ಇದ್ದುದು ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆಯೇ ನೇರ ಪೈಪೋಟಿ. ಜೊತೆಗೆ ಯಾವ ಲೆಕ್ಕಾಚಾರಕ್ಕೂ ನಿಲುಕದ ಜಿದ್ದಾಜಿದ್ದಿನ ಪೈಪೋಟಿ. ಅದು ಜಾತಿ ಲೆಕ್ಕಾಚಾರವನ್ನೂ ಮೀರಿ ನಿಂತಿದೆ. ಅಭ್ಯರ್ಥಿಗಳ ಜೊತೆಗಿನ ಸುತ್ತಾಟದ ವೇಳೆಯೂ ಈ ಅಂಶ ಭಾಸವಾಗಿದೆ. ಯಾರೇ ಗೆದ್ದರೂ ಮತಗಳ ಅಂತರ ತೀರಾ ಕಡಿಮೆ ಇರಲಿದೆ ಎನ್ನಬಹುದು.

ಒಂದಿಷ್ಟು ಪ್ರದೇಶದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಂ.ಕೆ.ಸೋಮಶೇಖರ್‌ ಪರ ಒಲವು ಇದ್ದರೆ, ಮತ್ತೊಂದಿಷ್ಟು ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿ ಎಸ್‌.ಎ.ರಾಮದಾಸ್‌ ಪರ ಮತದಾರರ ಚಿತ್ತ ಹರಿಯುತ್ತಿದೆ. ಪಾಲಿಕೆ ಸದಸ್ಯರೂ ಆಗಿರುವ ಕೆ.ವಿ.ಮಲ್ಲೇಶ್‌ ಈ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ. ಆದರೆ, ಸಮರ್ಪಕ ‘ಬಲ’ ಇಲ್ಲದಿರುವುದು ಅವರ ಪಾಲಿಗೆ ದೊಡ್ಡ ತೊಡಕಾಗಿದೆ. ಕೆಲ ಕ್ಷೇತ್ರಗಳಲ್ಲಿ ಜೆಡಿಎಸ್‌ ಎದುರಿಸುತ್ತಿರುವ ಸಮಸ್ಯೆ ಇಲ್ಲೂ ಇದೆ.

ಕೃಷ್ಣರಾಜ ಕ್ಷೇತ್ರದ ವಾಸ್ತವವೇ ಬೇರೆ. ಕಸದ ವಾಸನೆ ವಿಚಾರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಮೇಲೆ ಹಲವರ ಎದೆಯಲ್ಲಿ ಆಕ್ರೋಶ ಮಡುಗಟ್ಟಿದೆ. ವಿದ್ಯಾರಣ್ಯಪುರಂ ಕೆಲ ಪ್ರದೇಶಗಳಿಗೆ ಹೋಗಿ ಅಲ್ಲಿನ ನಿವಾಸಿಗಳನ್ನು ಮಾತನಾಡಿಸಿದರೆ ಆ ವಾಸ್ತವಾಂಶದ ಚಿತ್ರಣ ತೆರೆದುಕೊಳ್ಳುತ್ತದೆ. ಇಲ್ಲಿನ ನಿವಾಸಿಗಳು ಹಲವು ವರ್ಷಗಳಿಂದ ಸೂಯೆಜ್‌ ಫಾರಂನ ಕಸದ ರಾಶಿಯ ವಾಸನೆಯಿಂದ ನರಳುತ್ತಿದ್ದಾರೆ.

‘ಇನ್ನೆಷ್ಟು ದಿನ ವಾಸನೆ ಸಹಿಸಿಕೊಂಡು ಬದುಕಬೇಕು? ಇದಕ್ಕೆ ಹಾಲಿ, ಮಾಜಿ ಶಾಸಕರಿಬ್ಬರೂ ಹೊಣೆ’ ಎಂದು ದೂರುತ್ತಾರೆ. ಯಾರಿಗೆ ಮತ ಹಾಕುವುದು ಎಂಬ ಗೊಂದಲದಲ್ಲಿದ್ದಾರೆ. ಏಕೆಂದರೆ 20 ವರ್ಷಗಳಿಂದ ಇದೇ ಅಭ್ಯರ್ಥಿಗಳನ್ನು ನೋಡುತ್ತಿದ್ದಾರೆ. ಒಮ್ಮೆ ರಾಮದಾಸ್‌, ಮತ್ತೊಮ್ಮೆ ಸೋಮಶೇಖರ್‌ ಕ್ಷೇತ್ರದ ಪ್ರತಿನಿಧಿಯಾಗಿರುತ್ತಾರೆ. ಈ ಬಾರಿ ಇವರಿಬ್ಬರೂ ಚುನಾವಣಾ ಪ್ರಚಾರ ನಡೆಸುವ ವೇಳೆ ಸ್ಥಳೀಯರ ಆಕ್ರೋಶಕ್ಕೆ ಗುರಿಯಾಗಿದ್ದುಂಟು. ‘ಎರಡೂ ಪಕ್ಷಗಳದ್ದು ಇದೇ ಕಥೆ, ನಮ್ಮದು ಮಾತ್ರ ಸದಾ ವ್ಯಥೆ’ ಎಂಬುದು ಮತದಾರನ ಮನದಾಳ.

ಜನರ ಕೈಗೆ ಸಿಗುತ್ತಾರೆ: ‘ಹಾಲಿ ಶಾಸಕ ಸೋಮಶೇಖರ್‌ ಸುಲಭವಾಗಿ ಕೈಗೆ ಸಿಗುತ್ತಾರೆ’ ಎಂಬುದು ಕ್ಷೇತ್ರದ ಜನರ ಮಾತು. ಐದು ವರ್ಷಗಳಲ್ಲಿ ರಸ್ತೆ ಅಭಿವೃದ್ಧಿಗೆ ಆಸ್ಥೆ ವಹಿಸಿರುವುದು, ನೀರಿನ ಸಮಸ್ಯೆ ನೀಗಿಸಿರುವುದು, ಉದ್ಯೋಗಮೇಳ ಆಯೋಜಿಸಿದ್ದು ಅವರ ಪಾಲಿಗೆ ವರದಾನವಾಗಬಹುದು. ಆದರೆ, ಮಳೆ ಬಂದಾಗ ಉಂಟಾಗುವ ಸಮಸ್ಯೆಗೆ ಪರಿಹಾರ ಹಾಗೂ ರಾಜಕಾಲುವೆ, ಚರಂಡಿ ಸ್ವಚ್ಛತೆಗೆ ಆದ್ಯತೆ ನೀಡದಿರುವುದು ತಿರುಗೇಟು ಆಗಬಹುದು. ‘ಜಿಲ್ಲೆಯವರೇ ಮುಖ್ಯಮಂತ್ರಿ ಆಗಿದ್ದರಿಂದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇದ್ದವು. ಆದರೆ, ಆ ನಿರೀಕ್ಷೆಗೆ ಸ್ಪಂದಿಸಿಲ್ಲ’ ಎಂಬ ದೂರು ಇದೆ.

ಕಸರತ್ತುಗಳ ನಡುವೆ: ಇನ್ನು ಕಸದ ವಿಚಾರವನ್ನು ಮೈಮೇಲಿಂದ ಕೊಡವಿಕೊಳ್ಳಲು ರಾಮದಾಸ್‌ ಹಲವು ಕಸರತ್ತು ನಡೆಸಿದರು. ಸೂಯೆಜ್‌ ಫಾರಂನಲ್ಲೇ ಕುಳಿತು ಮುಷ್ಕರ ಕೈಗೊಂಡರು, ಈ ಪ್ರದೇಶದ ಜನರ ಒಲವು ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿದರು. ಅದು ಕಾಂಗ್ರೆಸ್‌–ಬಿಜೆಪಿ ನಡುವೆ ಸಂಘರ್ಷಕ್ಕೂ ಕಾರಣವಾಯಿತು.

‘ಕ್ಷೇತ್ರದಲ್ಲಿ ಕೈಗೊಂಡಿರುವ ಬಹುತೇಕ ಯೋಜನೆಗಳಿಗೆ ಕಾರಣ ಹಿಂದಿನ ಬಿಜೆಪಿ ಸರ್ಕಾರ’ ಎಂದು ಹೇಳಿಕೊಂಡು ರಾಮದಾಸ್‌ ಕ್ಷೇತ್ರ ಸುತ್ತುತ್ತಿದ್ದಾರೆ. ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಬ್ರಾಹ್ಮಣ ಸಮುದಾಯದ ಮತಗಳನ್ನೇ ನೆಚ್ಚಿಕೊಂಡಿದ್ದಾರೆ.

ಪೈಪೋಟಿ, ತಂತ್ರಗಾರಿಕೆ ಸೇರಿ ಹಲವು ವಿಚಾರಗಳಿಂದ ಅವರಿಗೆ ಟಿಕೆಟ್‌ ಸಿಕ್ಕದ್ದೇ ಕೊನೆ ಕ್ಷಣದಲ್ಲಿ. ಈಗಲೂ ಈ ಕ್ಷೇತ್ರದಲ್ಲಿ ಪಕ್ಷದೊಳಗೆ ಒಳಜಗಳ ನಿಂತಿಲ್ಲ. ಜೊತೆಗೊಂದಿಷ್ಟು ವಿವಾದಗಳು ಅವರ ಪಾಲಿಗೆ ನಕಾರಾತ್ಮಕ ಅಂಶ. ಆದರೆ, ‘ಆಸರೆ’, ‘ಅಮ್ಮ ಮನೆ’ ಮೂಲಕ ಸಮಾಜ ಸೇವೆಯಲ್ಲಿ ತೊಡಗಿರುವುದು ನೆರವಿಗೆ ಬರಬಹುದು.

ಬಿಎಸ್ಪಿ ಜೊತೆಗಿನ ನಂಟು: ಪಾಲಿಕೆ ಚುನಾವಣೆಯಲ್ಲಿ ಲಭಿಸಿದ ಗೆಲುವು, ಸದಸ್ಯನಾಗಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ನೆಚ್ಚಿಕೊಂಡು ಜೆಡಿಎಸ್‌ ಅಭ್ಯರ್ಥಿ ಮಲ್ಲೇಶ್‌ ಮತಯಾಚಿಸುತ್ತಿದ್ದಾರೆ.

‘ಬಿಜೆಪಿ, ಕಾಂಗ್ರೆಸ್‌ಗೆ ಸಾಧ್ಯವಾಗದ ಕೆಲಸಗಳನ್ನು ನಾನು ಮಾಡುತ್ತೇನೆ. ಒಂದು ಬಾರಿ ಮತ ಕೊಟ್ಟು ನೋಡಿ. ಸೂಯೆಜ್‌ ಫಾರಂ ಸಮಸ್ಯೆಗೆ ಪರಿಹಾರ ನೀಡುತ್ತೇನೆ’ ಎಂದು ಪ್ರಚಾರ ಕೈಗೊಂಡಿದ್ದಾರೆ. ಬಿಎಸ್ಪಿ ಜೊತೆಗಿನ ನಂಟು ದಲಿತ ಮತಗಳನ್ನು ಸೆಳೆಯಲು ನೆರವಾಗಬಹುದು. ಇದು ಕಾಂಗ್ರೆಸ್‌ಗೆ ತುಸು ಪೆಟ್ಟು ನೀಡಬಹುದು. ಆದರೆ, ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷದ ಬೇರು ಸಡಿಲಗೊಂಡಿದೆ. ಕಾರ್ಯಕರ್ತರ ಕೊರತೆಯೂ ಇದೆ. ಇದನ್ನು ಅರಿತುಕೊಂಡೇ ದೇವೇಗೌಡರು ಹೇಳಿಕೆ ನೀಡಿರಬಹುದು. ಈ ವಿಚಾರ ಬಿಜೆಪಿಯಲ್ಲಿ ನಗು ಅರಳಿಸುವುದೋ ಅಥವಾ ಕಾಂಗ್ರೆಸ್‌ ಕೈಹಿಡಿಯುವುದೋ ಎಂಬುದು ಈಗ ಎಲ್ಲರ ಮುಂದಿರುವ ಪ್ರಶ್ನೆ. ಆ ಪ್ರಶ್ನೆ ಸಾಕಷ್ಟು ಕುತೂಹಲ ಹುಟ್ಟು ಹಾಕಿದೆ. ರೋಚಕ ಪೈಪೋಟಿಯಂತೂ ಖಚಿತ.
*
ಅದು ಇದು ಆಮಿಷವೊಡ್ಡಿ ದಲಿತರ ವೋಟು ಪಡೆಯುತ್ತಾರೆ. ಆದರೆ, ಸಮಸ್ಯೆಗಳ ಪರಿಹಾರಕ್ಕೆ ಯಾರೂ ಪ್ರಯತ್ನಿಸಲ್ಲ. ಮುರಕಲು ಮನೆಯಲ್ಲೇ ಇರಬೇಕು.
 ಯಶವಂತ್‌, ಅಶೋಕಪುರ
ಕ್ಷೇತ್ರದ ಜನರ ಸಮಸ್ಯೆ ಆಲಿಸುವ, ಕುಂದುಕೊರತೆ ಬಗೆ ಹರಿಸುವ ವಿಚಾರ ಮೆಚ್ಚುವಂಥದ್ದೇ. ಆದರೆ, ಯಾರೂ ದೂರದೃಷ್ಟಿ ಇಟ್ಟುಕೊಂಡು ಕೆಲಸ ಮಾಡುತ್ತಿಲ್ಲ
ರಾಮ್‌ಪ್ರಸಾದ್‌, ವಿವೇಕಾನಂದನಗರ
**
ನಮಗೆ ಆಯ್ಕೆಯೇ ಇಲ್ಲದಂತೆ ಮಾಡಿಬಿಟ್ಟಿದ್ದಾರೆ. ಕಸದಿಂದ ಉಂಟಾಗಿರುವ ಯಾತನೆ ಕಡಿಮೆ ಮಾಡಲು ಯಾವ ಶಾಸಕರಿಂದಲೂ ಸಾಧ್ಯವಾಗುತ್ತಿಲ್ಲ
–ರಾಮಚಂದ್ರ, ವಿದ್ಯಾರಣ್ಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT