ಮತದಾನ ಮಾಡಿ, ನಾಳೆಯನ್ನು ರೂಪಿಸಿ..

ಶುಕ್ರವಾರ, ಮೇ 24, 2019
28 °C
ಬಳ್ಳಾರಿ ಸಂಸ್ಕೃತಿ ಉತ್ಸವ ತಂಡದಿಂದ ಸದ್ದಿಲ್ಲದೆ ಮತದಾನ ಜಾಗೃತಿ!

ಮತದಾನ ಮಾಡಿ, ನಾಳೆಯನ್ನು ರೂಪಿಸಿ..

Published:
Updated:
Prajavani

ಬಳ್ಳಾರಿ: ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಮತದಾನ ಮಾಡಬೇಕು ಎಂಬ ಉದ್ದೇಶದಿಂದ ಬಳ್ಳಾರಿ ಸಂಸ್ಕೃತಿ ಉತ್ಸವ ತಂಡದ ನೂರಾರು ಮಂದಿ ನಗರದಲ್ಲಿ ಸದ್ದಿಲ್ಲದೆ ಮತದಾನ ಜಾಗೃತಿ ಅಭಿಯಾನ ನಡೆಸಿದ್ದಾರೆ.

ಜೆಸಿಐ ಬಳ್ಳಾರಿ ಸ್ಟೀಲ್‌ ಸಿಟಿ ಸಂಘಟನೆಯ ಯುವಪಡೆಯೊಂದಿಗೆ, ಶ್ರೀ ಗುರುಬಸವೇಶ್ವರ ಎಜುಕೇಶನ್‌ ಟ್ರಸ್ಟ್‌ನ ಸಹಯೋಗದಲ್ಲಿ ಉತ್ಸವದ ಪ್ರಮುಖರು ಸುಮಾರು ಹತ್ತು ಸಾವಿರ ಜಾಗೃತಿ ಕರಪತ್ರಗಳನ್ನು ಒಂದು ವಾರದಿಂದ ನಗರದ ವಿವಿಧೆಡೆ ಸಾರ್ವಜನಿಕರಿಗೆ ವಿತರಿಸಿರುವುದು ವಿಶೇಷ.

ಮತದಾನ ಮಾಡಿ,, ನಾಳೆಯನ್ನು ರೂಪಿಸಿ (SHAPE TOMMOROW BY VOTING TODAY)ಎಂಬ ಘೋಷಣೆಯೊಂದಿಗೆ ನಗರದ ಗಡಿಗಿ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಗವಿಯಪ್ಪ ವೃತ್ತ, ಜೈನ್ ಮಾರುಕಟ್ಟೆ ರಸ್ತೆ, ಕೇಂದ್ರೀಯ ಬಸ್‌ ನಿಲ್ದಾಣ ರಸ್ತೆ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಸಾರ್ವಜನಿಕರ ಗಮನ ಸೆಳೆದಿದ್ದಾರೆ.

‘ಮತದಾನ ಮಾಡಿ, ಪ್ರಜಾಪ್ರಭುತ್ವ ಗಟ್ಟಿಗೊಳಿಸಿ’, ‘ನಿಮ್ಮ ಮತ ನಿಮ್ಮ ಹಕ್ಕು’, ‘ಜಾಗೃತ ಮತದಾರ, ಸದೃಢ ಪ್ರಜಾಪ್ರಭುತ್ವ’, ‘ನಿಮ್ಮ ಮತ ಗೌಪ್ಯವಾಗಿರಲಿ’, ‘ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯ’, ‘ಇನ್ನೊಬ್ಬರ ಹೆಸರಿನಲ್ಲಿ ಮತದಾನ ಮಾಡುವುದು ಅಪರಾಧ’, ‘ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆಗೆ ಸಹಕರಿಸಿ’, ‘ಚುನಾವಣೆ ಪ್ರಜಾಪ್ರಭುತ್ವದ ಭದ್ರ ಬುನಾದಿ’, ‘ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ನಿರ್ಭೀತರಾಗಿ ಮತ ಚಲಾಯಿಸಿ’, ‘ಮತದಾರರ ಪಟ್ಟಿಯಲ್ಲಿ ಹೆಸರಿರುವುದನ್ನು ಖಚಿತಪಡಿಸಿಕೊಂಡು ಮತದಾನ ಮಾಡಿ’ ಎಂಬ ಘೋಷ ವಾಕ್ಯಗಳನ್ನು ಕರಪತ್ರದಲ್ಲಿ ಮುದ್ರಿಸಲಾಗಿದೆ.

ಮತದಾನ ನಡೆಯುವ ದಿನಾಂಕ ಮತ್ತು ಸಮಯವನ್ನೂ ಪ್ರತ್ಯೇಕವಾಗಿ, ಎದ್ದು ಕಾಣುವಂತೆ ಮುದ್ರಿಸಿರುವುದು ವಿಶೇಷ.

ಪ್ರತಿಜ್ಞೆ: ‘ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವು, ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು, ಮುಕ್ತ, ನ್ಯಾಯಸಮ್ಮತ, ಶಾಂತಿಯುತ ಚುನಾವಣೆಯನ್ನು ಎತ್ತಿಹಿಡಿಯುತ್ತೇವೆಂದು, ಚುನಾವಣೆಯಲ್ಲಿ ನಿರ್ಭೀತರಾಗಿ ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆಂದು ಪಣ ತೊಡೋಣ’ ಎಂಬ ಪ್ರತಿಜ್ಞೆಯೂ ಕರಪತ್ರದಲ್ಲಿರುವುದು ವಿಶೇಷ.

ಜಾಗೃತಿ ಅಭಿಯಾನ ಬಗ್ಗೆ ‘ಪ್ರಜಾವಾಣಿ’ಗೆ ಭಾನುವಾರ ಮಾಹಿತಿ ನೀಡಿದ ಉತ್ಸವದ ಪ್ರಮುಖರಲ್ಲೊಬ್ಬರಾದ ಬಿಸಿಲಹಳ್ಳಿ ಬಸವರಾಜ್‌, ‘ಬಳ್ಳಾರಿ ಸಾಂಸ್ಕೃತಿಕ ಉತ್ಸವವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಿದ್ದು, ಪೂರ್ವಸಿದ್ಧತೆ ನಡೆಸಿದ್ದೇವೆ. ಉತ್ಸವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನದ ಕುರಿತು ಚರ್ಚೆ ನಡಯುತ್ತಿದ್ದ ಹೊತ್ತಿನಲ್ಲೇ ಚುನಾವಣೆ ಘೋಷಣೆಯಾಗಿತ್ತು. ಹೀಗಾಗಿ ಮತದಾನ ಜಾಗೃತಿಯನ್ನೂ ಒಟ್ಟಿಗೇ ಮಾಡಬಹುದೆನ್ನಿಸಿ ಪ್ರಯತ್ನ ಆರಂಭಿಸಿದೆವು’ ಎಂದು ಸ್ಮರಿಸಿದರು.

‘ಚುನಾವಣೆ ಸಮಯದಲ್ಲಿ ವಿವಿಧ ಪಕ್ಷ, ಅಭ್ಯರ್ಥಿಗಳ ಪರ ಪ್ರಚಾರ ನಡೆಸುವುದು ಸಾಮಾನ್ಯ. ಆದರೆ ನಾವು ಮತದಾನ ಜಾಗೃತಿ ಅಭಿಯಾನ ನಡೆಸಿದ್ದು ಹಲವರಲ್ಲಿ ಅಚ್ಚರಿ ಮೂಡಿಸಿತ್ತು. ಮೆಚ್ಚುಗೆಯನ್ನೂ ಪಡೆಯಿತು. ನಗರ ಕ್ಷೇತ್ರದಲ್ಲಿ ಮತದಾನದ ಪ್ರಮಾಣ ಹೆಚ್ಚಾದರೆ ನಮ್ಮ ಕಿರುಪ್ರಯತ್ನವೂ ಇರುತ್ತದೆ ಎಂಬುದೇ ನಮ್ಮ ಹೆಮ್ಮೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !