ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಕ್ಕಟ್ಟಿನ ಓಣಿಗಳಲ್ಲಿ ಜೀವನ ಬಿಕ್ಕಟ್ಟು

ಹೊಸಪೇಟೆ ಒಂದನೇ ವಾರ್ಡ್‌ನಲ್ಲಿ ಕಚ್ಚಾ ರಸ್ತೆಗಳಿಗೆ ಕೂಡಿ ಬರದ ಕಾಲ; ದುರ್ಗಂಧದಲ್ಲೇ ಜೀವನ
Last Updated 17 ಜನವರಿ 2019, 12:50 IST
ಅಕ್ಷರ ಗಾತ್ರ

ಹೊಸಪೇಟೆ: ಇಕ್ಕಟ್ಟಿನಿಂದ ಕೂಡಿರುವ ಕಿರಿದಾದ ಕಚ್ಚಾ ರಸ್ತೆಗಳು. ಅಲ್ಲಲ್ಲಿ ಒಡೆದು ಹಾಳಾಗಿರುವ ಚರಂಡಿ. ದುರ್ಗಂಧದಲ್ಲೇ ಬದುಕು ನಡೆಸುವ ಅನಿವಾರ್ಯತೆ.

ಇದು ನಗರಸಭೆ ಒಂದನೇ ವಾರ್ಡ್‌ ವ್ಯಾಪ್ತಿಗೆ ಬರುವ ಬಡಾವಣೆಗಳ ದುಃಸ್ಥಿತಿ. ಚಿತ್ತವಾಡ್ಗಿ ಮುಖ್ಯರಸ್ತೆ ಹೊರತುಪಡಿಸಿದರೆ ರಹಮತ್‌ ನಗರ, ಹೊಸೂರು ರಸ್ತೆ, ರಾಮಾಲಿಸ್ವಾಮಿ ಮಸೀದಿ ರಸ್ತೆ ಹಲವು ದಶಕಗಳಿಂದ ಟಾರ್‌ ಕಂಡಿಲ್ಲ. ಕಚ್ಚಾ ರಸ್ತೆಯಲ್ಲೇ ಜನ ಓಡಾಡುತ್ತಾರೆ. ಚರಂಡಿಗಳ ಸಂಪರ್ಕ ಸರಿಯಾಗಿ ಇರದೇ ಇರುವುದು, ಸಕಾಲಕ್ಕೆ ತ್ಯಾಜ್ಯ ವಿಲೇವಾರಿ ಮಾಡದ ಕಾರಣ ಎಲ್ಲೆಡೆ ದುರ್ಗಂಧ ಹರಡಿರುತ್ತದೆ.

ರಹಮತ್‌ ನಗರದಲ್ಲಿ ರಸ್ತೆ ಎಷ್ಟು ಇಕ್ಕಟ್ಟಿನಿಂದ ಕೂಡಿದೆ ಅಂದರೆ ಆಟೊ ಕೂಡ ಆ ರಸ್ತೆಯಲ್ಲಿ ಸಂಚರಿಸಲು ಆಗುವುದಿಲ್ಲ. ಇನ್ನು ರಾಮಾಲಿ ಸ್ವಾಮಿ ಮಸೀದಿಗೆ ಹೊಂದಿಕೊಂಡಿರುವ ರಸ್ತೆ ವಿಶಾಲವಾಗಿದ್ದರೂ ಅದು ಟಾರ್‌ ಕಂಡಿಲ್ಲ. ಅಲ್ಲಿ ಸದಾ ದೂಳು ಆವರಿಸಿಕೊಂಡಿರುತ್ತದೆ.

ವರ್ಷದ ಹಿಂದೆ ಚಿತ್ತವಾಡ್ಗಿ ಮುಖ್ಯರಸ್ತೆ ವಿಸ್ತರಣೆ ಕಾಮಗಾರಿಯನ್ನು ನಗರಸಭೆಯಿಂದ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಅದು ಅರ್ಧಕ್ಕೆ ನಿಂತಿದೆ. ಕೆಲವರು ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೊರೆ ಹೋಗಿರುವುದರಿಂದ ಕಾಮಗಾರಿ ಸ್ಥಗಿತಗೊಂಡಿದೆ. ಇಕ್ಕಟ್ಟಿನ ರಸ್ತೆಯಲ್ಲೇ ಜನ ಹಾಗೂ ವಾಹನಗಳು ಓಡಾಡುತ್ತಿವೆ.

‘ರಸ್ತೆ ವಿಸ್ತರಣೆಯ ನೆಪದಲ್ಲಿ ನಗರಸಭೆ ಬಡವರ ಮನೆಗಳನ್ನು ತೆರವುಗೊಳಿಸಿತು. ಈಗ ಶ್ರೀಮಂತರ ಮನೆಗಳನ್ನು ತೆರವುಗೊಳಿಸಲು ಮೀನಮೇಷ ಎಣಿಸುತ್ತಿದೆ. ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದೆ’ ಎಂದು ಆರೋಪಿಸುತ್ತಾರೆ ಸ್ಥಳೀಯರು.

‘ಅನೇಕ ವರ್ಷಗಳಿಂದ ಮುಖ್ಯರಸ್ತೆ ಟಾರ್‌ ಕಂಡಿರಲಿಲ್ಲ. ರಸ್ತೆ ವಿಸ್ತರಣೆ ನಂತರ ಎಲ್ಲವೂ ಸರಿಹೋಗುತ್ತದೆ ಎಂದು ಭಾವಿಸಿದ್ದೆವು. ಆದರೆ, ಕೆಲಸ ಪೂರ್ಣಗೊಂಡಿಲ್ಲ. ಇನ್ನು ಒಳರಸ್ತೆಗಳ ಸ್ಥಿತಿಯಂತೂ ನೋಡಬಾರದು. ಕೆಲವು ಮನೆಗಳಿಗೆ ವಾರಕ್ಕೊಮ್ಮೆ ಸಿಹಿ ನೀರು ಬರುತ್ತದೆ’ ಎನ್ನುತ್ತಾರೆ ಚಿತ್ತವಾಡ್ಗಿ ನಿವಾಸಿ ಗಾಳೆಪ್ಪ.

‘ಕಸ ಹಾಕಲು ಯಾವುದೇ ವ್ಯವಸ್ಥೆ ಇಲ್ಲ. ನಿಜವಾದ ಫಲಾನುಭವಿಗಳಿಗೆ ಜನತಾ ಮನೆ ಸಿಕ್ಕಿಲ್ಲ. ಅಷ್ಟೇ ಅಲ್ಲ, ಯಾವುದೇ ಕನಿಷ್ಠ ಮೂಲ ಸೌಕರ್ಯಗಳನ್ನು ಕಲ್ಪಿಸಿಲ್ಲ’ ಎಂದು ಹೇಳಿದರು.

‘ಗೆದ್ದ ನಂತರ ಕೌನ್ಸಲರ್‌ ಏನೂ ಕೆಲಸ ಮಾಡಿಲ್ಲ. ಕೆಲವೇ ಬಡಾವಣೆಗಳಿಗೆ ಸೀಮಿತರಾಗಿದ್ದಾರೆ. ಅಲ್ಪಸಂಖ್ಯಾತರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವ ರಹಮತ್‌ ನಗರದಲ್ಲಿ ರಸ್ತೆ, ಚರಂಡಿ ಯಾವುದೂ ಸರಿಯಿಲ್ಲ. ಹೀಗೇ ಇದ್ದರೆ ಜನರಿಗೆ ರೋಗ ರುಜಿನಗಳು ಬರುತ್ತವೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ರಹಮತ್‌.

‘ಚರಂಡಿಗಳನ್ನು ನಿರ್ಮಿಸದ ಕಾರಣ ಪ್ರತಿ ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುತ್ತದೆ. ಇಲ್ಲಿನವರ ಗೋಳು ಯಾರೂ ಕೇಳಿಸಿಕೊಳ್ಳುತ್ತಿಲ್ಲ. ದಿನಗೂಲಿ ಮಾಡುವವರೇ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿದ್ದಾರೆ. ಅವರಿಗೆ ಸರ್ಕಾರದ ಯಾವ ಸವಲತ್ತುಗಳು ಸಿಕ್ಕಿಲ್ಲ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT