ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಕನ್ನಡ ವಿಶ್ವವಿದ್ಯಾಲಯ: ಬರಲಿದೆ ಅತ್ಯಾಧುನಿಕ ವಸ್ತು ಸಂಗ್ರಹಾಲಯ

ಪುರಾತತ್ವ ವಸ್ತುಗಳ ಸಂಶೋಧನೆಗೆ ಕ್ರಮ
Last Updated 5 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಹೊಸಪೇಟೆ: ಪುರಾತತ್ವ ವಸ್ತುಗಳ ಅಧ್ಯಯನ, ಸಂಶೋಧನೆಗಾಗಿ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಶೀಘ್ರವೇ ಅಂತರರಾಷ್ಟ್ರೀಯ ಮಟ್ಟದ ಪುರಾತತ್ವ ವಸ್ತು ಸಂಗ್ರಹಾಲಯ ವಿಭಾಗ ಶುರುವಾಗಲಿದೆ.

ಇತ್ತೀಚೆಗಷ್ಟೇ ವಸ್ತು ಸಂಗ್ರಹಾಲಯ ಮತ್ತು ಪ್ರವಾಸೋದ್ಯಮ ಸಂಶೋಧನಾ ಕೇಂದ್ರಕ್ಕೆ ಚಾಲನೆ ನೀಡಲಾಗಿದ್ದು, ಮೊದಲ ಹಂತದಲ್ಲಿ ಪುರಾತತ್ವ ವಿಭಾಗ ತಲೆ ಎತ್ತಲಿದೆ.

ಕನ್ನಡ ವಿಶ್ವವಿದ್ಯಾಲಯದಲ್ಲಿ ಸದ್ಯ 4,000ಕ್ಕೂ ಅಧಿಕ ಪುರಾತತ್ವಕ್ಕೆ ಸಂಬಂಧಿಸಿದ ವಸ್ತುಗಳಿವೆ. ಆ ವಸ್ತುಗಳನ್ನು ವಸ್ತು ಸಂಗ್ರಹಾಲಯ ಕಟ್ಟಡ ನಿರ್ಮಾಣಗೊಂಡ ಬಳಿಕ ಅದರಲ್ಲಿ ಅವುಗಳನ್ನು ಸುವ್ಯವಸ್ಥಿತವಾಗಿ ಪ್ರದರ್ಶನಕ್ಕೆ ಇಡಲು ಉದ್ದೇಶಿಸಲಾಗಿದೆ. ಒಟ್ಟು 22 ಗ್ಯಾಲರಿಗಳನ್ನು ನಿರ್ಮಿಸಿ, ಅವುಗಳ ಮಹತ್ವ, ಆಕಾರ ನೋಡಿಕೊಂಡು ಇಡಲಾಗುತ್ತದೆ. ಪ್ರತಿಯೊಂದು ವಸ್ತುಗಳ ಕೆಳಗೆ ಕಿರು ಡಿಜಿಟಲ್‌ ಪರದೆ ಅಳವಡಿಸಲು ನಿರ್ಧರಿಸಲಾಗಿದ್ದು, ಅದರಲ್ಲಿ ಸಮಗ್ರ ಮಾಹಿತಿ ಓದಿ ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲ, ಸಂಶೋಧನೆಗಾಗಿ ಬರುವವರಿಗಾಗಿ ಕೊಠಡಿಗಳ ವ್ಯವಸ್ಥೆ, ಅಧ್ಯಯನಕ್ಕೆ ಅಗತ್ಯ ಸೌಕರ್ಯಗಳು ಇರಲಿವೆ.

‘ಕೇಂದ್ರ ಸಂಸ್ಕೃತಿ ಸಚಿವಾಲಯ, ಮಾನವ ಸಂಪನ್ಮೂಲ ಇಲಾಖೆ, ವಸ್ತುಸಂಗ್ರಹಾಲಯ ವಿಭಾಗದ ಸಹಕಾರದೊಂದಿಗೆ ವಸ್ತು ಸಂಗ್ರಹಾಲಯ ಮತ್ತು ಪ್ರವಾಸೋದ್ಯಮ ಸಂಶೋಧನಾ ಕೇಂದ್ರ ಆರಂಭಿಸಲಾಗಿದೆ. ಪುರಾತತ್ವ, ಜಾನಪದ, ಬುಡಕಟ್ಟು ಮತ್ತು ಕಲೆಗೆ ಸಂಬಂಧಿಸಿದ ನಾಲ್ಕು ವಿಭಾಗಗಳನ್ನು ಒಟ್ಟಿಗೆ ಶುರು ಮಾಡುವ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ, ಸರ್ಕಾರವು ಯಾವುದಾದರೂ ಒಂದು ವಿಭಾಗ ಮೊದಲು ಆರಂಭಿಸುವಂತೆ ತಿಳಿಸಿದ್ದರಿಂದ ಪುರಾತತ್ವ ಸಂಗ್ರಹಾಲಯ ಪ್ರಾರಂಭಿಸಲು ನಿರ್ಧರಿಸಲಾಗಿದೆ’ ಎಂದು ಕೇಂದ್ರದ ನಿರ್ದೇಶಕ ವಾಸುದೇವ ಬಡಿಗೇರ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಪುರಾತತ್ವಕ್ಕೆ ಸಂಬಂಧಿಸಿದ ವಸ್ತುಗಳ ಪಟ್ಟಿ ಈಗಾಗಲೇ ಕಳುಹಿಸಿಕೊಡಲಾಗಿದ್ದು, ಅದರ ಪರಿಶೀಲನೆ ನಡೆಯಲಿದೆ. ಸಂಶೋಧನಾ ಕೇಂದ್ರದ ಸ್ಥಾಪನೆಗೆ ಒಟ್ಟು ₹48 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೂರೂ ಇಲಾಖೆಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ’ ಎಂದು ವಿವರಿಸಿದರು.

ಪುರಾತತ್ವ ಕೋರ್ಸ್‌:ಪ್ರಸಕ್ತ ಸಾಲಿನಿಂದ ವಿಶ್ವವಿದ್ಯಾಲಯವು ಒಂದು ವರ್ಷ ಅವಧಿಯ ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಪ್ರವಾಸೋದ್ಯಮ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ಆರಂಭಿಸಲು ಮುಂದಾಗಿದೆ.

ಯು.ಜಿ.ಸಿ. ನಿಯಮಾವಳಿ ಪ್ರಕಾರ, ಈ ಕೋರ್ಸ್‌ಗಳು ಸೆಮಿಸ್ಟರ್‌ ಮಾದರಿ ಒಳಗೊಂಡಿರಲಿವೆ. 20 ವಿದ್ಯಾರ್ಥಿಗಳ ಪ್ರವೇಶಕ್ಕೆ ಸೀಮಿತಗೊಳಿಸಲಾಗಿದೆ. ‘ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆ, ಪ್ರವಾಸೋದ್ಯಮ ಇಲಾಖೆಯಲ್ಲಿನ ಉದ್ಯೋಗಾವಕಾಶಗಳ ಸಾಧ್ಯತೆಗಳಿಗೆ ಅನುಗುಣವಾಗಿ ಪಠ್ಯಪುಸ್ತಕ ಸಿದ್ಧಪಡಿಸಲಾಗಿದೆ’ ಎಂದು ವಾಸುದೇವ ಬಡಿಗೇರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT