4

ಜಲಾಶಯದಲ್ಲಿ ಹೂಳಿನ ಜಾತ್ರೆ ನಾಳೆ

Published:
Updated:

ಬಳ್ಳಾರಿ: ‘ತುಂಗಭದ್ರಾ ಜಲಾಶಯದಲ್ಲಿ ಜು.5ರಂದು ಹೂಳಿನ ಜಾತ್ರೆ ನಡೆಸಲು ಸಕಲ ಸಿದ್ಧತೆ ನಡೆದಿದೆ’ ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ತಿಳಿಸಿದರು.

‘ಕಂಪ್ಲಿ ಮತ್ತು ಮರಿಯಮ್ಮನಹಳ್ಳಿ ರೈತರು ಹೂಳನ್ನು ತಮ್ಮ ಜಮೀನುಗಳಿಗೆ ಸಾಗಿಸಲಿದ್ದಾರೆ. ಅದಕ್ಕಾಗಿ ದೇವಸಮುದ್ರದ ರೈತರು 100 ಟ್ರ್ಯಾಕ್ಟರ್‌ಗಳನ್ನು ನೀಡಲು ಒಪ್ಪಿದ್ದಾರೆ’ ಎಂದು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ‘ಬಳ್ಳಾರಿ ಮತ್ತು ಸುತ್ತಮುತ್ತಲಿನ ಸುಮಾರು ಐವತ್ತು ಸ್ವಾಮೀಜಿಗಳ ಸಾನಿಧ್ಯದಲ್ಲಿ ಜಾತ್ರೆ ನಡೆಯಲಿದೆ. ಪಾಲ್ಗೊಳ್ಳಲಿರುವ ಒಂದೂವರೆ ಸಾವಿರ ಮಂದಿಗೆ ಕಂಪ್ಲಿಯ ಸತ್ಯನಾರಾಯಣ ಅವರು ಊಟದ ವ್ಯವಸ್ಥೆ ಮಾಡಲಿದ್ದಾರೆ’ ಎಂದರು.

ಭರವಸೆ:
‘ಹೂಳು ತೆರವಿಗೆ ಸಂಬಂಧಿಸಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರ ಗಮನ ಸೆಳಯುವ ಭರವಸೆಯನ್ನು ಮಂತ್ರಾಲಯದ ಸುಬುಧೇಂದ್ರ ಸ್ವಾಮೀಜಿ ನೀಡಿದ್ದಾರೆ. ಜಾತ್ರೆಯ ಮೂಲಕವೂ ಹೂಳು ತೆರವಿನ ಅನಿವಾರ್ಯ ಪರಿಸ್ಥಿತಿಯನ್ನು ರಾಜ್ಯ ಸರ್ಕಾರಕ್ಕೆ ಮನದಟ್ಟು ಮಾಡಿಸಲಾಗುವುದು’ ಎಂದರು.

‘ಜಲಾಶಯದಲ್ಲಿ 33ಟಿಎಂಸಿಯಷ್ಟು ಹೂಳು ತುಂಬಿದ್ದು ನೀರಿನ ಸಂಗ್ರಹ ಕಡಿಮೆಯಾಗುತ್ತಿದೆ. ಹೂಳು ತೆಗೆಯುವಂತೆ ಪ್ರತಿ ವರ್ಷ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಈ ಬಾರಿಯೂ ಸಾಂಕೇತಿಕವಾಗಿ ಹೂಳು ತೆರವು ಮಾಡಲಾಗುವುದು’ ಎಂದರು.

’ಕಾಲುವೆ ದುರಸ್ತಿ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಿ ಜು.15ರಿಂದ 20ರ ಒಳಗೆಜಲಾಶಯದಿಂದ ನೀರು ಹರಿಸಬೇಕು ಎಂದು ಜಲಾಶಯದ ಮುಖ್ಯ ಎಂಜಿನಿಯರ್‌ ಶಂಕರಗೌಡ ಮತ್ತು ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ರಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಗಿದೆ’ ಎಂದರು.  ಮುಖಂಡರಾದ ವೀರೇಶ, ಶಿವಯ್ಯ, ಬಸವನಗೌಡ ಮತ್ತು ಶ್ರೀಧರಗೌಡ ಇದ್ದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !