ಹೂಳೆತ್ತುವುದು ಕಷ್ಟ ಸಾಧ್ಯ: ಸಚಿವ ಶಿವಕುಮಾರ

7
ನಾಲ್ಕು ವರ್ಷಗಳ ಬಳಿಕ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಸಮರ್ಪಣೆ

ಹೂಳೆತ್ತುವುದು ಕಷ್ಟ ಸಾಧ್ಯ: ಸಚಿವ ಶಿವಕುಮಾರ

Published:
Updated:
Deccan Herald

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅವರು ಬುಧವಾರ ಸಂಜೆ ಬಾಗಿನ ಸಮರ್ಪಿಸಿದರು.

ಇದಕ್ಕೂ ಮುನ್ನ ಅವರಿಗೆ ಸ್ವಸಹಾಯ ಸಂಘದ ಮಹಿಳೆಯರು ಆರತಿ ಬೆಳಗಿ, ತಿಲಕವಿಟ್ಟು ಸ್ವಾಗತಿಸಿದರು. ನಂತರ ಕ್ರಸ್ಟ್‌ಗೇಟ್‌ಗಳ ಮೇಲೆ ನಿರ್ಮಿಸಿದ್ದ ಪೂಜಾ ಮಂಟಪದ ವರೆಗೆ ಡೊಳ್ಳು ಕುಣಿತದ ಸ್ವಾಗತದೊಂದಿಗೆ ಕರೆದೊಯ್ಯಲಾಯಿತು. ಅಲ್ಲಿ ಗಂಗೆಗೆ ವಿಶೇಷ ಪೂಜೆ ಸಲ್ಲಿಸಿದ ಶಿವಕುಮಾರ ದಂಪತಿ, ನಂತರ ತುಂಗಭದ್ರಾ ಅಣೆಕಟ್ಟೆಯಲ್ಲಿ ಬಾಗಿನ ಅರ್ಪಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತುಂಗಭದ್ರಾ ಜಲಾಶಯದಿಂದ ಹೂಳು ತೆಗೆಸುವುದು ಕಷ್ಟ ಸಾಧ್ಯ ಎಂದು ದೇಶ ಹಾಗೂ ವಿದೇಶಿಯರು ಸೇರಿದ 210 ತಂಡಗಳ ತಜ್ಞರು ವರದಿ ನೀಡಿದ್ದಾರೆ. ಈಗಾಗಲೇ ಸಮಾನಾಂತರ ಜಲಾಶಯಕ್ಕೆ ಜಾಗ ಗುರುತಿಸಲಾಗಿದ್ದು, ನದಿಯಿಂದ ಹರಿದು ಹೋಗುತ್ತಿರುವ ಹೆಚ್ಚುವರಿ ನೀರು ಅಲ್ಲಿ ಸಂಗ್ರಹಿಸಲು ಆದಷ್ಟು ಶೀಘ್ರ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

‘ಜಲಾಶಯದಿಂದ ಸಮುದ್ರಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹೋಗುತ್ತಿದೆ. ಆ ನೀರು ಹರಿದು ಹೋಗದಂತೆ ತಡೆಯಲು ಯೋಜನೆ ರೂಪಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಕುರಿತು ತಜ್ಞರ ಜತೆ ಸಮಾಲೋಚನೆ ನಡೆಸಿ, ಯೋಜನೆ ಅನುಷ್ಠಾನಕ್ಕೆ ತರಲಾಗುವುದು’ ಎಂದು ತಿಳಿಸಿದರು.

‘ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯ ನೀರಾವರಿ ಇಲಾಖೆಯ ಗುತ್ತಿಗೆ ಕಾರ್ಮಿಕರ ನಾಲ್ಕು ತಿಂಗಳ ವೇತನ ಬಿಡುಗಡೆಗೆ ಸಂಬಂಧಿಸಿದಂತೆ ಆಯಾ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

‘ಮಹದಾಯಿ ನ್ಯಾಯಮಂಡಳಿ ತೀರ್ಪು ಸಮಾಧಾನ ತಂದಿಲ್ಲ. ರಾಜ್ಯಕ್ಕೆ 34 ಟಿ.ಎಂ.ಸಿ. ನೀರು ಕೇಳಲಾಗಿತ್ತು. ಆದರೆ, 13 ಟಿ.ಎಂ.ಸಿ. ಕೊಡಲಾಗಿದೆ. ನ್ಯಾಯಮಂಡಳಿ ತೀರ್ಪು ಹೊರಬರುವುದಕ್ಕೂ ಮುನ್ನವೇ ಅದು ಕೇಂದ್ರ ಸರ್ಕಾರದ ಕೈಸೇರಿದೆ. ಏನೇ ಇರಲಿ ರಾಜ್ಯಕ್ಕೆ ಅನ್ಯಾಯ ಆಗದಂತೆ ನೋಡಿಕೊಳ್ಳಲಾಗುವುದು’ ಎಂದರು.

ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆರ್‌. ಶಂಕರ್‌, ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ ನಾಡಗೌಡ, ಕೊಪ್ಪಳ ಸಂಸದ ಕರಡಿ ಸಂಗಣ್ಣ, ಶಾಸಕರಾದ ರಾಘವೇಂದ್ರ ಹಿಟ್ನಾಳ್‌, ಆನಂದ್‌ ಸಿಂಗ್‌, ಭೀಮಾ ನಾಯ್ಕ, ಬಿ. ನಾಗೇಂದ್ರ, ಜೆ.ಎನ್‌. ಗಣೇಶ್‌, ಅಲ್ಲಂ ವೀರಭದ್ರಪ್ಪ, ಪ್ರತಾಪಗೌಡ ಪಾಟೀಲ, ಅಮರೇಗೌಡ ಬಯ್ಯಾಪುರ, ಜಿಲ್ಲಾಧಿಕಾರಿಗಳಾದ ರಾಮ್‌ಪ್ರಸಾದ್ ಮನೋಹರ್‌, ಪಿ. ಸುನೀಲ್‌ ಕುಮಾರ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !