ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂದರ ಸಂಜೆಯಲ್ಲಿ ಸರಳ ಹಂಪಿ ಉತ್ಸವ

ಕಲ್ಲು ಬಂಡೆಗಳ ಮೇಲೆ ಕುಳಿತು ಶೋಭಾಯಾತ್ರೆ ವೀಕ್ಷಿಸಿದ ಜನರು
Last Updated 13 ನವೆಂಬರ್ 2020, 16:58 IST
ಅಕ್ಷರ ಗಾತ್ರ

ಹಂಪಿ (ಹೊಸಪೇಟೆ ತಾಲ್ಲೂಕು): ಪಡುವಣ ದಿಕ್ಕಿನಲ್ಲಿ ಸೂರ್ಯ ಮರೆಯಾಗುತ್ತಿದ್ದ. ತುಂಗಭದ್ರಾ ನದಿ ದಂಡೆ ಮೇಲಿರುವ ಹಂಪಿಯ ಉದ್ಧಾನ ವೀರಭದ್ರೇಶ್ವರನ ಸನ್ನಿಧಿಯಲ್ಲಿ ಕಂಸಾಳೆ ನೃತ್ಯ, ಕಹಳೆ, ಜಾಗಟೆ ಸದ್ದು ಮೊಳಗಿತು. ಅಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿತ್ತು.

ಹಂಪಿ ಉತ್ಸವದ ಪ್ರಯುಕ್ತ ಶುಕ್ರವಾರ ಸಂಜೆ ಹಂಪಿಯ ಉದ್ಧಾನ ವೀರಭದ್ರೇಶ್ವರ ದೇವಸ್ಥಾನದ ಪರಿಸರದಲ್ಲಿ ಕಂಡು ಬಂದ ದೃಶ್ಯಗಳಿವು.

ಸುಂದರ ಇಳಿಸಂಜೆಯಲ್ಲಿ ಅರಣ್ಯ ಸಚಿವ ಆನಂದ್ ಸಿಂಗ್ ಅವರು ತಾಯಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಆರತಿ ಬೆಳಗಿ ಶೋಭಾಯಾತ್ರೆಗೆ ಚಾಲನೆ ನೀಡಿದರು.

ಅದಾದ ನಂತರ ಜಿಲ್ಲೆಯ ವಿವಿಧ ಕಲಾ ತಂಡಗಳಿಂದ ತುಂಗಭದ್ರಾ ನದಿ ತಟದ ವರೆಗೆ ಮೆರವಣಿಗೆ ಜರುಗಿತು. ಹಂಪಿಯ ಆನೆ ಲಕ್ಷ್ಮಿ ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕಿದಳು. ಅದರ ಹಿಂಬದಿಯಲ್ಲಿ ಅಲಂಕರಿಸಿದ ವಾಹನದಲ್ಲಿ ಪಲ್ಲಕ್ಕಿಯಲ್ಲಿ ಭುವನೇಶ್ವರಿ ದೇವಿ ಮೆರವಣಿಗೆ ನಡೆಯಿತು.

ವೀರಗಾಸೆ, ಡೊಳ್ಳು ಕುಣಿತ, ಹಲಗೆ ವಾದನ, ಕಹಳೆ ವಾದನ, ನಂದಿಧ್ವಜ ಪ್ರದರ್ಶನ, ಹಗಲುವೇಷ, ಸಿಂದೋಳ್ ಕುಣಿತ, ಹಕ್ಕಿಪಿಕ್ಕಿ ಬುಡಕಟ್ಟು ನೃತ್ಯ, ಗೊರವರ ಕುಣಿತ, ಮರಗಾಲು ಕುಣಿತ, ಕೀಲುಕುದುರೆ ಗಮನ ಸೆಳೆಯಿತು. ಬಳಿಕ ಸಚಿವರು ವಿರೂಪಾಕ್ಷೇಶ್ವರನಿಗೆ ಪೂಜೆ ನೆರವೇರಿಸಿದರು.

‘ಇಡೀ ದೇಶ ನೋಡುವಂತೆ ಉತ್ಸವ ಆಚರಣೆ’:

ಇದಕ್ಕೂ ಮುನ್ನ ಶೋಭಾಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಆನಂದ್ ಸಿಂಗ್, ಕೋವಿಡ್ ಕಾರಣಕ್ಕಾಗಿ ಈ ಸಲ ಬಹಳ ಸರಳವಾಗಿ ಹಂಪಿ ಉತ್ಸವ ಆಚರಿಸಲಾಗುತ್ತಿದೆ. ಮುಂದಿನ ವರ್ಷ ಇಡೀ ದೇಶ ಈ ಕಡೆ ನೋಡುವಂತಹ ರೀತಿಯಲ್ಲಿ ಉತ್ಸವ ಆಚರಿಸಲಾಗುವುದು. ಅದು ಇತಿಹಾಸದ ಪುಟಗಳಲ್ಲಿ ದಾಖಲಾಗುವಂತೆ ಮಾಡಲಾಗುವುದು' ಎಂದರು.

ಹಂಪಿ ಉತ್ಸವ ಬಹಳ ವಿಜೃಂಭಣೆಯಿಂದ ಮಾಡಬೇಕು ಎಂಬ ಕನಸಿತ್ತು. ಅದರಲ್ಲೂ ನ. 3ರಿಂದ 5ರ ವರೆಗೆ ಆಚರಿಸುವ ಯೋಜನೆ ಇತ್ತು. ಚುನಾವಣಾ ಮಾದರಿ ನೀತಿ ಸಂಹಿತೆ ಕಾರಣಕ್ಕಾಗಿ ಆಚರಿಸಲು ಆಗಲಿಲ್ಲ. ಹಾಗಾಗಿ ಮುಂದೂಡಬೇಕಾಯಿತು ಎಂದರು.

ಮೈಸೂರು ದಸರಾ ಮಾಡಿದ್ದಾರೆ. ಹಂಪಿ ಉತ್ಸವ ಆಚರಿಸಲು ಹಿಂದೇಟೇಕೇ ಎಂದು ಬಹಳಷ್ಟು ಜನ ಟೀಕಿಸಿದ್ದಾರೆ. ಆದರೆ, ಜಿಲ್ಲಾಡಳಿತ, ಹಿರಿಯರ ಸಲಹೆ ಮೇರೆಗೆ ಸರಳವಾಗಿ ಆಚರಿಸಲು ತೀರ್ಮಾನಿಸಲಾಯಿತು. ಕೊರೊನಾದಿಂದ ಇಡೀ ಜಗತ್ತು ಸಂಕಷ್ಟಕ್ಕೆ ಸಿಲುಕಿದೆ. ಲಸಿಕೆ ಬರುವವರೆಗೆ ನಾವು ಎಚ್ಚರದಿಂದ ಇರಬೇಕು. ಸರ್ಕಾರದ ಎಲ್ಲ ನಿಯಮ ಪಾಲಿಸಬೇಕು. ಮನುಷ್ಯನ ಜೀವಕ್ಕಿಂತ ಯಾವೂದೂ ಮುಖ್ಯವಲ್ಲ. ನಾವು ಜೀವಂತವಾಗಿದ್ದರೆ, ಜಿಲ್ಲೆ ಆರೋಗ್ಯವಾಗಿದ್ದರೆ ಏನೂ ಬೇಕಾದರೂ ಮಾಡಬಹುದು ಎಂದು ತಿಳಿಸಿದರು.

ಸರಳ ಉತ್ಸವದಿಂದ ಬಹಳಷ್ಟು ಕಲಾವಿದರಿಗೆ ನಿರಾಸೆಯಾಗಿದೆ. ಅವರ ಪ್ರತಿಭೆ ಪ್ರದರ್ಶಿಸಲು ಅವಕಾಶ ಸಿಕ್ಕಿಲ್ಲ ಎನ್ನುವ ಕೊರಗಿದೆ. ಇತಿಹಾಸ ಸದಾ ನೆನಪಿಸುವಂತಹ ರೀತಿಯಲ್ಲಿ ಮುಂದಿನ ವರ್ಷ ಉತ್ಸವ ಸಂಘಟಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿವೆ. ಕೆಲವು ತಾಲ್ಲೂಕುಗಳಲ್ಲಿ ಒಂದಂಕ್ಕಿ ಪ್ರಕರಣಗಳು ವರದಿಯಾಗುತ್ತಿವೆ. ಸಾವಿನ ಸಂಖ್ಯೆ ಇಳಿಕೆಯಾಗಿದೆ. ಹಾಗಂತ ನಿರ್ಲಕ್ಷ್ಯ ಸಲ್ಲದು. ಯಾರಿಗೆ ಸೋಂಕು ಅಪಾಯಕಾರಿ ಎನ್ನುವುದು ಗೊತ್ತಿಲ್ಲ. ಚಳಿಗಾಲದಲ್ಲಿ ಸೋಂಕಿನ ಪ್ರಕರಣ ಹೆಚ್ಚಾಗಬಹುದು ಎಂದು ತಜ್ಞರು ಹೇಳುತ್ತಿದ್ದಾರೆ. ಎಲ್ಲರೂ ನಿಯಮ ಪಾಲಿಸಬೇಕು ಎಂದು ಮನವಿ ಮಾಡಿದರು.

ಸಂಸದ ವೈ.ದೇವೇಂದ್ರಪ್ಪ ಮಾತನಾಡಿ, ಸಚಿವ ಆನಂದ್ ಸಿಂಗ್ ಅವರು ಕೊಟ್ಟಿರುವ ಭರವಸೆಯಂತೆ ಮುಂದಿನ ವರ್ಷ ಬಹಳ ಅದ್ದೂರಿಯಾಗಿ ಉತ್ಸವ ಆಚರಿಸಲಾಗುವುದು ಎಂದು ಹೇಳಿದರು.
ಶಾಸಕ ಸೋಮಲಿಂಗಪ್ಪ ಮಾತನಾಡಿ, ಸಚಿವ ಆನಂದ್ ಸಿಂಗ್ ಅವರು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಗ್ರಾಮಗಳಲ್ಲಿ ಬೇಗ ಕೆಲಸಗಳು ಆಗುತ್ತಿಲ್ಲ. ಹಿರಿಯ ಅಧಿಕಾರಿಗಳು ಕೆಳಹಂತದ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಬೇಕು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲ್ಲಾ ಅಡಾವತ್, ಉಪವಿಭಾಗಾಧಿಕಾರಿ ಶೇಖ್ ತನ್ವೀರ್ ಆಸಿಫ್, ಪ್ರೊಬೆಷನರಿ ಐಎಎಸ್ ಅಧಿಕಾರಿ ರಾಹುಲ್ ಸಂಕನೂರು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಾಗವೇಣಿ ಬಸವರಾಜ, ಸದಸ್ಯ ಪಾಲಪ್ಪ, ಕಮಲಾಪುರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸೈಯದ್ ಅಮಾನುಲ್ಲಾ,‌ ತಹಶೀಲ್ದಾರ್ ಎಚ್. ವಿಶ್ವನಾಥ್, ಡಿವೈಎಸ್ಪಿಗಳಾದ ವಿ.ರಘುಕುಮಾರ, ಕಾಶಿಗೌಡ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ. ರಾಮಲಿಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣನವರ್, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಎಂ.ಎಚ್‌. ಪ್ರಕಾಶ್‌ ರಾವ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT