ಆರು ಗಂಟೆ ರಾಷ್ಟ್ರೀಯ ಹೆದ್ದಾರಿ ಬಂದ್

ಬುಧವಾರ, ಜೂನ್ 19, 2019
29 °C
ಭೂಸ್ವಾಧೀನ ಕಾಯ್ದೆ ತಿದ್ದುಪಡಿಗೆ ರೈತರ ವಿರೋಧ: ವಾಹನ ಸಂಚಾರ ಸ್ತಬ್ಧ

ಆರು ಗಂಟೆ ರಾಷ್ಟ್ರೀಯ ಹೆದ್ದಾರಿ ಬಂದ್

Published:
Updated:
Prajavani

ಹೊಸಪೇಟೆ: ರಾಜ್ಯ ಸರ್ಕಾರವು ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೋಮವಾರ ಆರು ಗಂಟೆ ರಾಷ್ಟ್ರೀಯ ಹೆದ್ದಾರಿ ಬಂದ್‌ ನಡೆಸಿದ್ದರಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

ನಗರ ಹೊರವಲಯದ ತುಂಗಭದ್ರಾ ಜಲಾಶಯ ಎದುರಿನ ರಾಷ್ಟ್ರೀಯ ಹೆದ್ದಾರಿ 50ರ ಮೇಲೆ ರಸ್ತೆಗೆ ಅಡ್ಡಲಾಗಿ ವಾಹನಗಳನ್ನು ನಿಲ್ಲಿಸಿದರು. ರಸ್ತೆಯ ಮಧ್ಯದಲ್ಲಿಯೇ ಶಾಮಿಯಾನ ಹಾಕಿ ಧರಣಿ ನಡೆಸಿದರು. ಬೆಳಿಗ್ಗೆ ಹತ್ತು ಗಂಟೆಗೆ ಆರಂಭವಾದ ಬಂದ್‌ ಸಂಜೆ ನಾಲ್ಕು ಗಂಟೆಯ ವರೆಗೆ ನಡೆಯಿತು.

ಆಂಬ್ಯುಲೆನ್ಸ್‌ ಹೊರತುಪಡಿಸಿ ಬೇರೆ ಯಾವ ವಾಹನಗಳ ಸಂಚಾರಕ್ಕೂ ರೈತರು ಆಸ್ಪದ ಕೊಡಲಿಲ್ಲ. ಇದರಿಂದಾಗಿ ರಸ್ತೆಯ ಎರಡೂ ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕೆಲವರು ತಡಹೊತ್ತು ಬಸ್ಸಿನಲ್ಲಿ ಕುಳಿತು ಸುಸ್ತಾಗಿದ್ದರಿಂದ ಕೆಳಗಿಳಿದು ಅಲ್ಲಿಂದ ಕಾಲ್ನಡಿಗೆಯಲ್ಲಿ ತೆರಳಿದರು.

ಕೆಲ ದ್ವಿಚಕ್ರ ವಾಹನ ಸವಾರರು ಬ್ಯಾರಿಕೇಡ್‌ಗಳನ್ನು ತಳ್ಳಿ ಹೋಗಲು ಯತ್ನಿಸಿದರು. ಅದಕ್ಕೆ ರೈತರು ವಿರೋಧ ವ್ಯಕ್ತಪಡಿಸಿ ತಡೆದರು. ಈ ವೇಳೆ ಮಾತಿನ ಚಕಮಕಿ ಕೂಡ ನಡೆಯಿತು. ಪೊಲೀಸರು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು. ವಾಹನ ಸವಾರರು ಅನಿವಾರ್ಯವಾಗಿ ಅಲ್ಲಿಂದ ವಾಪಸ್‌ ಹೋದರು. ಬೆಂಗಳೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಮಂಗಳೂರು, ಹುಬ್ಬಳ್ಳಿ, ಪುಣೆ, ಮುಂಬೈ ಹೋಗಬೇಕಿದ್ದವರು ತೀವ್ರ ತೊಂದರೆ ಅನುಭವಿಸಿದರು.

ಅಧಿಕಾರಿಗಳು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ, ಖಚಿತ ಭರವಸೆ ನೀಡುವವರೆಗೆ ಬಂದ್‌ ಹಿಂಪಡೆಯುವುದಿಲ್ಲ ಎಂದು ರೈತ ಸಂಘದವರು ಪಟ್ಟು ಹಿಡಿದರು. ಹೀಗಾಗಿ ಉಪವಿಭಾಗಾಧಿಕಾರಿ ಪಿ.ಎನ್‌. ಲೋಕೇಶ್‌ ಅವರು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು.

’ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರುವುದರಿಂದ ರೈತರಿಗೆ ಆಗುವ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ತುಂಗಭದ್ರಾ ಜಲಾಶಯದ ಕಾಲುವೆಗಳ ದುರಸ್ತಿ ಸಂಬಂಧ ವಾರದೊಳಗೆ ಅಧಿಕಾರಿಗಳು, ರೈತರ ಸಭೆ ಕರೆಯಲಾಗುವುದು ಎಂದು ಜಿಲ್ಲಾಧಿಕಾರಿ ಖಚಿತ ಭರವಸೆ ನೀಡಿದ್ದು, ಬಂದ್‌ ಕೈಬಿಡಬೇಕು‘ ಎಂದು ಲೋಕೇಶ್‌ ಮನವಿ ಮಾಡಿದರು. ಅದಕ್ಕೆ ಸ್ಪಂದಿಸಿ ರೈತರು ಬಂದ್‌ ಕೈಬಿಟ್ಟರು.

ಇದಕ್ಕೂ ಮುನ್ನ ಮಾತನಾಡಿದ ರೈತ ಸಂಘದ ಜಿಲ್ಲಾ ಅಧ್ಯಕ್ಷ ಜೆ. ಕಾರ್ತಿಕ್‌, ’ಯು.ಪಿ.ಎ. ಸರ್ಕಾರ ರೈತರ ಅನುಕೂಲಕ್ಕಾಗಿ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡಿತ್ತು. ರೈತರ ಒಪ್ಪಿಗೆ ಇಲ್ಲದೇ ಭೂಸ್ವಾಧೀನ ಮಾಡಿಕೊಳ್ಳುವಂತಿಲ್ಲ ಎಂಬ ಷರತ್ತು ವಿಧಿಸಿತ್ತು. ಭೂಸ್ವಾಧೀನ ಮಾಡಿಕೊಳ್ಳಬೇಕಾದರೆ ರೈತರಿಗೆ ಕೊಡುವ ಪರಿಹಾರ ಮಾರುಕಟ್ಟೆ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚಿರಬೇಕು. ಸ್ವಾಧೀನ ಪಡಿಸಿಕೊಂಡ ಭೂಮಿ ಸಾರ್ವಜನಿಕ ಉದ್ದೇಶಗಳಿಗೆ ಸೀಮಿತವಾಗಿರಬೇಕು. ಸ್ವಾಧೀನ ಪಡಿಸಿಕೊಂಡ ಭೂಮಿ ಐದು ವರ್ಷದೊಳಗೆ ಉದ್ದೇಶಿತ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳಬೇಕು. ಮಾಡದಿದ್ದರೆ ರೈತರಿಗೆ ಭೂಮಿಯನ್ನು ವಾಪಸ್ ಕೊಡಬೇಕು ಎಂಬ ಕಾಯ್ದೆಯನ್ನು ಜಾರಿಗೆ ತಂದಿತ್ತು. ಆದರೆ, ರಾಜ್ಯದ ಮೈತ್ರಿ ಸರ್ಕಾರ ಹಿಂದಿನ ಎಲ್ಲಾ ಕಾಯ್ದೆಗಳನ್ನು ಗಾಳಿಗೆ ತೂರಿ ಕಾಯ್ದೆಗೆ ತಿದ್ದುಪಡಿ ಮಾಡಿ, ರಾಷ್ಟ್ರಪತಿಯವರ ಅಂಕಿತಕ್ಕೆ ಕಳುಹಿಸಿಕೊಟ್ಟಿದೆ‘ ಎಂದು ಟೀಕಿಸಿದರು.

’ಕಾಯ್ದೆ ವಿರುದ್ಧ ಇಂದಿನ ಹೋರಾಟ ಆರಂಭವಷ್ಟೇ. ಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು. ಯಾವುದೇ ಸರ್ಕಾರವಿರಲಿ ರೈತರ ಹಿತ ಕಾಪಾಡಬೇಕು. ಅವರನ್ನು ಬಲಿ ಕೊಡುವ ಕೆಲಸ ಮಾಡಬಾರದು. ರೈತರಿಂದಲೇ ಈ ರಾಜ್ಯ, ಈ ದೇಶ. ಅವರ ಹಿತಕ್ಕೆ ಮೊದಲ ಆದ್ಯತೆ ಕೊಡಬೇಕು. ರೈತರನ್ನು ಕಡೆಗಣಿಸಿದ ಯಾರೂ ಕೂಡ ಅಧಿಕಾರದಲ್ಲಿ ಉಳಿದಿಲ್ಲ‘ ಎಂದು ಎಚ್ಚರಿಸಿದರು.

ರೈತ ಸಂಘದ ಕಾರ್ಯಾಧ್ಯಕ್ಷ ಪಿ.ನಾರಾಯಣರೆಡ್ಡಿ, ‘ವಿಜಯನಗರ ಕಾಲುವೆಗಳಾದ ರಾಯ, ಬಸವ, ಬೆಲ್ಲ, ತುರ್ತಾ ಕಾಲುವೆಗಳಿಗೆ ಏಳು ಟಿ.ಎಂ.ಸಿ. ಅಡಿ ನೀರು ಹರಿಸಲಾಗುತ್ತಿತ್ತು. ಇಂದು ರಾಜಕಾರಣಿಗಳ ಇಚ್ಚಾಶಕ್ತಿ ಕೊರತೆಯಿಂದ ವರ್ಷದಲ್ಲಿ ಐದು ಟಿ.ಎಂ.ಸಿ. ಅಡಿ ನೀರು ಹರಿಯುತ್ತಿದೆ. ಎಚ್‌.ಎಲ್‌.ಸಿ., ಎಲ್‌.ಎಲ್‌.ಸಿ. ಕಾಲುವೆಗಳ ಆಧುನೀಕರಣ ಅವೈಜ್ಞಾನಿಕವಾಗಿ ನಡೆಯುತ್ತಿದೆ. ಕೂಡಲೇ ಕೆಲಸ ನಿಲ್ಲಿಸಬೇಕು. ರೈತರ ಸಭೆ ಕರೆಯಬೇಕು‘ ಎಂದು ಆಗ್ರಹಿಸಿದರು.

ತಾಲ್ಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ, ಮುಖಂಡರಾದ ಎಲ್.ಎಸ್.ರುದ್ರಪ್ಪ, ರೇವಣಸಿದ್ದಪ್ಪ, ಚಿನ್ನಾದೊರೈ, ಅಯ್ಯಣ್ಣ, ನಾಗೇಶ, ಶ್ರೀನಿವಾಸ, ಎಂ.ಕೆ.ಹನುಮಂತಪ್ಪ, ಖಾಜಾ ಮೊಹಮ್ಮದ್‌ ನಿಯಾಜಿ, ಮಧುಸೂಧನ್, ಸುರೇಶ್‌, ಪೂರ್ಣಚಂದ್ರ, ಶಂಕರ್‌, ನಾರಾಯಣ ರೆಡ್ಡಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗದ ನೂರಾರು ರೈತರು ಪಾಲ್ಗೊಂಡಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !