ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ಷಿಪ್ತ ಸುದ್ದಿಗಳು

Last Updated 6 ಜುಲೈ 2018, 12:16 IST
ಅಕ್ಷರ ಗಾತ್ರ

ಬಲಿಜ ಸಂಘದಿಂದ ಇಂದು ಪ್ರತಿಭಟನೆ

ಹೊಸಪೇಟೆ: ಬಲಿಜ ಸಮುದಾಯವನ್ನು ಪ್ರವರ್ಗ ‘2ಎ’ನಿಂದ ‘3ಎ’ಗೆ ಸೇರಿಸಿರುವ ಕ್ರಮವನ್ನು ಖಂಡಿಸಿ ಬಲಿಜ ಸಂಘವು ಶನಿವಾರ ಬೆಳಿಗ್ಗೆ 10ಕ್ಕೆ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಿದೆ.

‘ಅನೇಕ ವರ್ಷಗಳಿಂದ ನಮ್ಮ ಸಮಾಜ ‘2ಎ’ನಲ್ಲಿದೆ. ಆದರೆ, ಏಕಾಏಕಿ ‘3ಎ’ಗೆ ಸೇರಿಸಲಾಗಿದೆ. ಇದರಿಂದ ಸಮಾಜಕ್ಕೆ ಅನ್ಯಾಯವಾಗಲಿದೆ. ಅದನ್ನು ಸರಿಪಡಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಸಮಾಜದ ಎಲ್ಲರೂ ಪಾಲ್ಗೊಳ್ಳಬೇಕು’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎನ್‌.ಟಿ. ರಾಜು ಮನವಿ ಮಾಡಿದ್ದಾರೆ.

ಇಂದಿನಿಂದ ಹಜ್‌ ಯಾತ್ರಿಕರಿಗೆ ತರಬೇತಿ

ಹೊಸಪೇಟೆ: ನಗರದ ಜಂಬುನಾಥ ರಸ್ತೆಯ ಪೂಲ್‌ ಬನ್‌ ಉರ್ದು ಶಾಲೆಯಲ್ಲಿ ಶನಿವಾರ, ಭಾನುವಾರ ಹಜ್‌ ಯಾತ್ರಿಕರಿಗೆ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ.

ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಕೊಪ್ಪಳ, ರಾಯಚೂರು ಮತ್ತು ಗದಗ ಜಿಲ್ಲೆಗಳ ಯಾತ್ರಿಕರು ಶಿಬಿರದಲ್ಲಿ ಪಾಲ್ಗೊಳ್ಳುವರು. ಹಜ್‌ ಸಂದರ್ಭದಲ್ಲಿ ಅನುಸರಿಸಬೇಕಾದ ನಿಯಮಗಳ ಕುರಿತು ಶಿಬಿರದಲ್ಲಿ ತಿಳಿಸಿಕೊಡಲಾಗುವುದು. ಶನಿವಾರ ಬೆಳಿಗ್ಗೆ 9ರಿಂದ ಕಾರ್ಯಕ್ರಮ ಆರಂಭವಾಗಲಿದೆ ಎಂದು ಹಜ್‌ ತರಬೇತಿ ಶಿಬಿರ ಸಮಿತಿ ಅಧ್ಯಕ್ಷ ಮೊಹಮ್ಮದ್‌ ಇಮಾಮ್‌ ನಿಯಾಜಿ ತಿಳಿಸಿದ್ದಾರೆ.

ನಾಳೆ ವಿಜಯನಗರ ಐಸಿರಿ

ಹೊಸಪೇಟೆ: ಇಲ್ಲಿನ ಆಕಾಶವಾಣಿ ಕೇಂದ್ರದಿಂದ ಇದೇ 8ರಂದು ‘ವಿಜಯನಗರದ ಐಸಿರಿ’ ಕಾರ್ಯಕ್ರಮ ಪ್ರಸಾರವಾಗಲಿದೆ.

ಸಂಜೆ 5ಕ್ಕೆ ‘ಸಂಗೀತ ಸಿರಿ’ಯಲ್ಲಿ ಕೊಪ್ಪಳದ ಎನ್‌. ವೀರನಗೌಡ ಅವರು ಬಸವಣ್ಣನವರ ವಚನಗಳನ್ನು ಪ್ರಸ್ತುತಪಡಿಸುವರು. ‘ವಿದ್ಯಾಸಿರಿ’ಯಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಚ್‌.ಡಿ. ಪ್ರಶಾಂತ್‌ ಅವರು ‘ಶಾಲಾ ಶಿಕ್ಷಣದ ಅವಕಾಶ ಮತ್ತು ಅದರಲ್ಲಿನ ಅಸಮಾನತೆ’ ಕುರಿತು ವಿವರಿಸುವರು.

‘ಪ್ರತಿಭಾ ಸಿರಿ’ಯಲ್ಲಿ ಮಕ್ಕಳ ಪಾಲನೆ ಕುರಿತು ಎಚ್‌. ಬಸವರಾಜ ಮಾಹಿತಿ ಕೊಡುವರು. ಪರೀಕ್ಷಾ ಕೊಠಡಿಯೊಳಗೆ ಮಕ್ಕಳು ಯಾವ ರೀತಿ ವರ್ತಿಸಬೇಕು ಎನ್ನುವುದರ ಕುರಿತು ಶಿಕ್ಷಕ ಪರಮೇಶ್ವರಯ್ಯ ಸೊಪ್ಪಿಮಠ ವಿವರಿಸುವರು. ಬಳಿಕ ವಾರದ ವರದಿ, ಸಂದೇಶ, ಅಮೃತವಾಣಿ ಪ್ರಸಾರವಾಗಲಿದೆ ಎಂದು ಆಕಾಶವಾಣಿ ಕಾರ್ಯಕ್ರಮದ ಮುಖ್ಯಸ್ತೆ ಅನುರಾಧ ಕಟ್ಟಿ ತಿಳಿಸಿದ್ದಾರೆ.

ನಾಳೆ ಪ್ರತಿಭಾ ಪುರಸ್ಕಾರ

ಹೊಸಪೇಟೆ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಇದೇ 8ರಂದು ಬೆಳಿಗ್ಗೆ 10.30ಕ್ಕೆ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಶಾಸಕ ಆನಂದ್‌ ಸಿಂಗ್‌ ಉದ್ಘಾಟಿಸುವರು. ಉಪವಿಭಾಗಾಧಿಕಾರಿ ಗಾರ್ಗಿ ಜೈನ್‌, ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಘದ ತಾಲ್ಲೂಕು ಅಧ್ಯಕ್ಷ ಎನ್‌.ಎಸ್‌. ರೇವಣಸಿದ್ಧಪ್ಪ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ಹಾಸ್ಟೆಲ್‌ಗಳಿಗೆ ಅರ್ಜಿ ಆಹ್ವಾನ

ಹೊಸಪೇಟೆ: ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ ಬಾಲಕ/ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

www.sw.kar.nic.in ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿಗಳನ್ನು ಭರ್ತಿ ಮಾಡಿ, ಇದೇ 20ರೊಳಗೆ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ (ಗ್ರೇಡ್‌–1) ಕಚೇರಿಗೆ ಭೇಟಿ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT