ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟಕ್ಕೆ ಅಧ್ಯಯನ ಹಿನ್ನಲೆ ಅಗತ್ಯ: ಚಿಂತಕ ಎಸ್‌. ಶಿವಾನಂದ

ಯುವಜನ ಹಕ್ಕಿನ ಮೇಳ
Last Updated 14 ಮಾರ್ಚ್ 2021, 11:49 IST
ಅಕ್ಷರ ಗಾತ್ರ

ವಿಜಯನಗರ(ಹೊಸಪೇಟೆ): ‘ಹಕ್ಕುಗಳನ್ನು ಪಡೆಯುವುದು ಸುಲಭವಲ್ಲ. ಹೋರಾಟ ಕೈಗೊಳ್ಳುವವರು ಯಾವುದೇ ತ್ಯಾಗ, ಬಲಿದಾನಕ್ಕೂ ಸಿದ್ಧವಿರಬೇಕು. ಹೋರಾಟಕ್ಕೆ ಅಧ್ಯಯನದ ಹಿನ್ನಲೆ ಇರುವುದು ಬಹಳ ಅವಗತ್ಯವಿದೆ’ ಎಂದು ಚಿಂತಕ ಎಸ್‌. ಶಿವಾನಂದ ತಿಳಿಸಿದರು.

ಬೆಂಗಳೂರಿನ ಸಂವಾದ, ಯುವಧ್ವನಿ–ಯುವಜನರ ಒಕ್ಕೂಟ ಹಾಗೂ ಸಖಿ ಸಂಸ್ಥೆಯಿಂದ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 2020-21ರ ಯುವಜನ ಹಕ್ಕಿನ ಮೇಳದ ಬ್ಯಾನರ್ ಪ್ರದರ್ಶಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

‘ಯುವ ಎನ್ನುವುದು ಕೇವಲ ಮಾನಸಿಕ ಸ್ಥಿತಿ ಮಾತ್ರ. ಯುವಕರು ಇರುವ ದೇಶಗಳಲ್ಲಿ ಅನ್ಯಾಯ, ಶೋಷಣೆ ದಬ್ಬಾಳಿಕೆಯ ಸಮಸ್ಯೆಗಳು ನಡೆಯಲು ಸಾಧ್ಯವಿಲ್ಲ ಎಂಬ ಮಾತಿದೆ. ಆದರೆ ಗುಲಾಮಿ ಮನಸ್ಥಿತಿ ದೇಶಕ್ಕಿದೆ. ಸಮಾಜದಲ್ಲಿ ನಡೆಯುವ ಘಟನೆಗಳಿಗೆ ಯುವಜನರ ಸ್ಪಂದನೆ ಇಲ್ಲ. ಈ ಕುರಿತು ಯುವಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಹಕ್ಕುಗಳು ಪಡೆದುಕೊಳ್ಳುವ ಜೊತೆಗೆ ತಮಗಿರುವ ಕರ್ತವ್ಯಗಳನ್ನು ಯುವಜನರು ಅರಿತುಕೊಂಡು ಮುನ್ನಡೆಯಬೇಕು’ ಎಂದು ಕಿವಿಮಾತು ಹೇಳಿದರು.

‘1991ರ ಉದಾರೀಕರಣದ ನಂತರ 30 ವರ್ಷಗಳಿಂದ ಹಂತ ಹಂತವಾಗಿ ಸರ್ಕಾರಿ ನೌಕರಿಗಳು ತೆಗೆದು ನುಣುಚಿಕೊಳ್ಳುತ್ತಿರುವ ಆಡಳಿತದ ಹಿಂದೆ ಖಾಸಗೀಕರಣದ ಹುನ್ನಾರವಿದೆ. ಜಾಗತೀಕರಣ ಹಾಗೂ ಉದಾರೀಕರಣವನ್ನು ನಾವೆಲ್ಲಾ ಒಪ್ಪಿಕೊಂಡಿದ್ದೇವೆ. ಗುಣಮಟ್ಟದ ಶಿಕ್ಷಣ ನಮ್ಮ ಹಕ್ಕು. ಅದನ್ನು ಯುವಜನತೆ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

‘ಹಕ್ಕುಗಳ ಬಗ್ಗೆ ಹೋರಾಟ ಮಾಡುವವರು ಶರಣ ಪರಂಪರೆಯ ಬಗ್ಗೆ ತಿಳಿದುಕೊಳ್ಳುವುದು ಬಹಳ ಅಗತ್ಯ. ಅದರ ಜೊತೆಗೆ ವಚನ ಸಾಹಿತ್ಯವನ್ನು ಅಧ್ಯಯನ ಮಾಡಬೇಕು. ಕಾಯಕ, ಸಮಾನತೆಯ ಆಶಯ ಅದರಲ್ಲಿದೆ. ಪ್ರತಿಯೊಬ್ಬರೂ ಅನ್ನ ಗಳಿಸಿ ಕೊಡುವ ಕೌಶಲ, ಕೆಲಸ ಕಲಿತುಕೊಳ್ಳಬೇಕು’ ಎಂದರು.

ವಕೀಲೆ ಸಿ.ಸುನಂದಮ್ಮ, ‘ಯುವಜನರಿಗೆ ಸೂಕ್ತವಾದ ಮಾರ್ಗದರ್ಶನದ ಅವಶ್ಯಕತೆ ಇದೆ. ಯುವಜನ ಹಕ್ಕುಗಳನ್ನು ಪಡೆಯುವ ಮುನ್ನ ಕರ್ತವ್ಯಗಳನ್ನು ಶ್ರದ್ಧೆಯಿಂದ ನಿರ್ವಹಿಸಬೇಕು. ಒಗ್ಗಟ್ಟಿನಿಂದ ದೇಶದ ಪಿಡುಗುಗಳ ವಿರುದ್ಧ ಹೋರಾಡಿ, ದೇಶವನ್ನು ಮುಂದೆ ತರಬೇಕು’ ಎಂದು ತಿಳಿಸಿದರು.

ತುಮಕೂರಿನ ಯುವ ಸಮನ್ವಯ ಸಮಿತಿಯ ಸಂಚಾಲಕ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ‘ಮತಕ್ಕಾಗಿ ಸಮುದಾಯಗಳಿಗೆ ಆಯೋಗ ನಿರ್ಮಿಸುವ ಸರ್ಕಾರ 2.8 ಕೋಟಿ ಜನಸಂಖ್ಯೆ ಇರುವ ಯುವಜನಕ್ಕೂ ಆಯೋಗ ರಚಿಸಬೇಕಿದೆ. ಬಜೆಟ್ ನಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆಗೆ ₹12 ಕೋಟಿ ಕೊಟ್ಟಿದ್ದು ಸರ್ಕಾರದ ಧೋರಣೆಯು ಖಂಡನೀಯವಾಗಿದೆ’ ಎಂದರು.

ಸಖಿ ಸಂಸ್ಥೆಯ ನಿರ್ದೇಶಕಿ ಎಂ.ಭಾಗ್ಯಶ್ರೀ, ಹಂಪಿ ಗ್ರಾಮ ಪಂಚಾಯಿತಿ ಸದಸ್ಯೆ ಸ್ವಾತಿ ಸಿಂಗ್, ಮೊಹಮ್ಮದ್ ಸೊಹೆಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT