ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್‌ಗೆ ಸನ್‌ರೈಸರ್ಸ್‌ ಹೈದರಾಬಾದ್‌

ಎರಡನೇ ಕ್ವಾಲಿಫೈಯರ್‌: ಬ್ಯಾಟಿಂಗ್‌, ಬೌಲಿಂಗ್‌ನಲ್ಲಿ ಮಿಂಚಿದ ರಶೀದ್ ಖಾನ್‌; ಸಹಾ–ಶಿಖರ್ ಉತ್ತಮ ಜೊತೆಯಾಟ
Last Updated 25 ಮೇ 2018, 20:34 IST
ಅಕ್ಷರ ಗಾತ್ರ

ಕೋಲ್ಕತ್ತ: ಸನ್‌ರೈಸರ್ಸ್ ಹೈದರಾಬಾದ್‌ ತಂಡ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಲಿದೆ. ಈಡನ್‌ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್‌ರೈಸರ್ಸ್‌ ತಂಡ ಕೋಲ್ಕತ್ತ ನೈಟ್‌ ರೈಸರ್ಸ್‌ ಎದುರು 14 ರನ್‌ಗಳಿಂದ ಗೆದ್ದು ಫೈನಲ್‌ಗೆ ಪ್ರವೇಶಿಸಿತು.

ಲೀಗ್ ಹಂತದ ಪಾಯಿಂಟ್ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಅಗ್ರಸ್ಥಾನದಲ್ಲಿದ್ದರೆ ಸನ್‌ರೈಸರ್ಸ್‌ ಎರಡನೇ ಸ್ಥಾನದಲ್ಲಿತ್ತು.

ಶುಕ್ರವಾರದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್‌ ಆರಂಭಿಕ ಜೋಡಿ ವೃದ್ಧಿಮಾನ್ ಸಹಾ ಮತ್ತು ಶಿಖರ್ ಧವನ್ ಅವರ ಅಮೋಘ ಜೊತೆಯಾಟ ಹಾಗೂ ಅಂತಿಮ ಓವರ್‌ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ರಶೀದ್ ಖಾನ್‌ ಅವರ ಸಾಮರ್ಥ್ಯದಿಂದ 174 ರನ್‌ ಕಲೆ ಹಾಕಿತು.

ಗುರಿ ಬೆನ್ನತ್ತಿದ ಆತಿಥೇಯರು ಉತ್ತಮ ಆರಂಭ ಕಂಡರೂ ನಂತರ ಪತನದತ್ತ ಸಾಗಿದರು. ಮಧ್ಯಮ ಕ್ರಮಾಂಕದ ಶುಭಮನ್ ಗಿನ್‌ ತಂಡಕ್ಕೆ ಗೆಲುವಿನ ಕಾಣಿಕೆ ನೀಡಲು ನಡೆಸಿದ ಶ್ರಮವೂ ವ್ಯರ್ಥವಾಯಿತು.

ಬೌಲಿಂಗ್‌ನಲ್ಲೂ ಮಿಂಚಿದ ರಶೀದ್ ಖಾನ್‌ ಮೂರು ವಿಕೆಟ್ ಉರುಳಿಸಿದರು. ಎರಡು ಕ್ಯಾಚ್ ಪಡೆದ ಅವರು ಒಂದು ರನ್‌ ಔಟ್ ಕೂಡ ಮಾಡಿದರು.

ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್ ಆರಂಭಿಕ ಜೋಡಿ ವೃದ್ಧಿಮಾನ್ ಸಹಾ ಮತ್ತು ಶಿಖರ್ ಧವನ್ 56 ರನ್‌ಗಳ ಜೊತೆಯಾಟ ಆಡಿದರು. ವೇಗಿಗಳಾದ ಶಿವಂ ಮಾವಿ, ಪ್ರಸಿದ್ಧ ಕೃಷ್ಣ ಮತ್ತು ಆ್ಯಂಡ್ರೆ ರಸೆಲ್‌ ದುಬಾರಿಯಾದರು.

ಆದರೆ ಚೆಂಡು ಸ್ಪಿನ್ನರ್‌ಗಳ ಕೈಗೆ ಸಿಗುತ್ತಿದ್ದಂತೆ ರನ್‌ ಗಳಿಸುವ ವೇಗಕ್ಕೆ ಕಡಿವಾಣ ಬಿತ್ತು. ಚೈನಾಮನ್ ಬೌಲರ್‌ ಕುಲದೀಪ್ ಯಾದವ್‌ ಸನ್‌ರೈಸರ್ಸ್‌ಗೆ ಮೊದಲ ಪೆಟ್ಟು ನೀಡಿದರು. 24 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ನಾಲ್ಕು ಬೌಂಡರಿಗಳೊಂದಿಗೆ 34 ರನ್‌ ಗಳಿಸಿದ್ದ ಶಿಖರ್ ಧವನ್ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

ನಾಯಕ ಕೇನ್ ವಿಲಿಯಮ್ಸನ್‌ ಕೇವಲ ಮೂರು ರನ್‌ ಗಳಿಸಿ ಕುಲದೀಪ್‌ಗೆ ಬಲಿಯಾದರು. ವೃದ್ಧಿಮಾನ್‌ ಅವರಿಗೆ ಜೊತೆ ನೀಡಿದ ಶಕೀಬ್ ಅಲ್ ಹಸನ್‌ ಮೂರನೇ ವಿಕೆಟ್‌ಗೆ 24 ರನ್ ಸೇರಿಸಿದರು. ಅಷ್ಟರಲ್ಲಿ ಲೆಗ್ ಸ್ಪಿನ್ನರ್ ಪೀಯೂಷ್ ಚಾವ್ಲಾ ಹೆಣೆದ ಬಲೆಯಲ್ಲಿ ವೃದ್ಧಿಮಾನ್ ಸಹಾ ಬಿದ್ದರು. 27 ಎಸೆತಗಳಲ್ಲಿ 35 ರನ್‌ ಗಳಿಸಿದ ಅವರು ದಿನೇಶ್ ಕಾರ್ತಿಕ್ ಅವರ ಚಾಕಚಕ್ಯತೆಗೆ ಸ್ಟಂಪ್ ಔಟ್ ಆಗಿ ಮರಳಿದರು.

ರಶೀದ್ ಖಾನ್‌ ಬ್ಯಾಟಿಂಗ್ ಸೊಗಸು: ಶಕೀಬ್ ಅಲ್‌ ಹಸನ್ ಮತ್ತು ದೀಪಕ್ ಹೂಡ ಸೊಗಸಾದ ಬ್ಯಾಟಿಂಗ್ ಮಾಡಿ ಪ್ರೇಕ್ಷಕರನ್ನು ರಂಜಿಸಿದರು. ನಾಲ್ಕನೇ ವಿಕೆಟ್‌ಗೆ ಅವರು 39 ರನ್‌ ಸೇರಿಸಿದರು. ಆದರೆ ಶಕೀಬ್ ಅವರನ್ನು ರನ್‌ ಔಟ್ ಮಾಡಿದ ಕುಲದೀಪ್‌ ಯಾದವ್‌ ತಿರುಗೇಟು ನೀಡಿದರು. ಇದರ ಬೆನ್ನಲ್ಲೇ ದೀಪಕ್ ಹೂಡ ಸ್ಪಿನ್ನರ್‌ ಸುನಿಲ್ ನಾರಾಯಣ್‌ಗೆ ವಿಕೆಟ್ ಒಪ್ಪಿಸಿದರು.ಯೂಸುಫ್ ಪಠಾಣ್ ಮತ್ತು ಕಾರ್ಲೋಸ್ ಬ್ರಾಥ್‌ವೇಟ್ ಔಟಾದ ನಂತರ ರಶೀದ್ ಖಾನ್‌ 10 ಎಸೆತಗಳಲ್ಲಿ 34 ರನ್ ಗಳಿಸಿ ರಂಜಿಸಿದರು. ಅವರು ನಾಲ್ಕು ಸಿಕ್ಸರ್ ಮತ್ತು ಎರಡು ಬೌಂಡರಿ ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT