ಮಂಗಳವಾರ, ಮೇ 18, 2021
30 °C

ಸೋಮಶೇಖರ ರೆಡ್ಡಿ ಬಂಧಿಸದಿದ್ದರೆ ಉಗ್ರ ಹೋರಾಟ: ಶಾಸಕ ನಾಗೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಮುಸ್ಲಿಂ ಸಮುದಾಯವನ್ನು‌ ಕುರಿತು ಪ್ರಚೋದನಕಾರಿ ಭಾಷಣ‌ ಮಾಡಿದ ಶಾಸಕ ‌ಜಿ.ಸೋಮಶೇಖರ ರೆಡ್ಡಿ ಅವರನ್ನು ಬಂಧಿಸದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಗ್ರಾಮೀಣ ಶಾಸಕ ಬಿ.ನಾಗೇಂದ್ರ ತಿಳಿಸಿದರು.

ನಗರದಲ್ಲಿ ಮಂಗಳವಾರ ಕಾಂಗ್ರೆಸ್ ಮುಖಂಡರೊಂದಿಗೆ‌ ಸುದ್ದಿಗೋಷ್ಠಿ ನಡೆಸಿದ ‌ಅವರು, ' ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜ.3 ರಂದು ನಗರದಲ್ಲಿ ನಡೆದ ಜಾಗೃತಿ ಮೆರವಣಿಗೆಯಲ್ಲಿ ಮಾತನಾಡಿದ್ದ ರೆಡ್ಡಿ, ಮುಸ್ಲಿಮರು ದೇಶ ಬಿಟ್ಟು ಹೋಗಬೇಕು ಎಂದಿದ್ದರು. ಇದು ಕೋಮು ಸೌಹಾರ್ದ ಕದಡುವ ಕೆಟ್ಟ ಪ್ರಯತ್ನ. ಅವರನ್ನು ಬಂಧಿಸಬೇಕು ಎಂದು ದೂರು‌ ಸಲ್ಲಿಸಿ ನಾಲ್ಕು ದಿನವಾದರೂ ಪೊಲೀಸರು ಸುಮ್ಮನಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

'ಕಾನೂನು ಎಲ್ಲರಿಗೂ ಒಂದೇ. ಜನಸಾಮಾನ್ಯರು ಪ್ರಚೋದನಕಾರಿ ಮಾತನಾಡಿದ ಕೂಡಲೇ ಬಂಧಿಸುವ ‌ಪೊಲೀಸರು, ರೆಡ್ಡಿಯವರ ವಿರುದ್ಧ ಎಫೈಆರ್ ದಾಖಲಿಸಿ‌ ಸುಮ್ಮನಾಗಿದ್ದಾರೆ. ರೆಡ್ಡಿ ಮತ್ತೆ ತಮ್ಮ ಭಾಷಣವನ್ನು ಮುಂದುವರಿಸಿದ್ದು, ತಮ್ಮ ಪ್ರಚೋದನಕಾರಿ ಮಾತುಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಒಂದು ವಾರದವರೆಗೂ ಕಾದು ಹೋರಾಟ ರೂಪಿಸಲು ಕಾಂಗ್ರೆಸ್ ನಿರ್ಧರಿಸಿದೆ' ಎಂದರು.

'ಯಾರನ್ನಾದರೂ ಬಿಜೆಪಿಯವರು‌ ದೇಶದಿಂದ ಹೊರಕ್ಕೆ ಕಳಿಸಬೇಕೆಂದರೆ ನಮ್ಮನ್ನು ದಾಟಿಕೊಂಡೇ ಹೋಗಬೇಕು. ಅಂಥ ಗಟ್ಟಿ ಹೋರಾಟವನ್ನು ರೂಪಿಸಲಾಗುವುದು' ಎಂದರು.
'ಕಾಂಗ್ರೆಸ್ ಪಕ್ಷದವರನ್ನು ಬೇವಕೂಫ್ ಗಳು ಎಂದು ಬಿಜೆಪಿ ಜರಿದಿರುವುದನ್ನು ಒಪ್ಪುವುದಿಲ್ಲ. ಹಾಗಾದರೆ ಸ್ವಾತಂತ್ರ್ಯ ಹೋರಾಟಗಾರರೆಲ್ಲರೂ ಬೇವಕೂಫ್ ಗಳೇ' ಎಂದು ಪ್ರಶ್ನಿಸಿದರು.

ನಂತರ ಮಾತನಾಡಿದ ಮುಖಂಡ ಹುಮಾಯೂನ್ ಖಾನ್, ರೆಡ್ಡಿಯವರ ವಿರುದ್ಧ ನಗರದ ಗಾಂಧಿನಗರ ಠಾಣೆಯಲ್ಲಿ ಮೂರು ಎಫ್ ಐಆರ್ ದಾಖಲಾಗಿವೆ. ಮುಸ್ಲಿಂ ಮುಖಂಡರೂ ದೂರು ನೀಡಿದ್ದಾರೆ. ಇದು ಆರಂಭವಷ್ಟೇ.  ಹೋರಾಟ ತೀವ್ರಗೊಳ್ಳಲಿದೆ' ಎಂದರು.

ಮುಖಂಡರಾದ ನಿರಂಜನ ನಾಯ್ಡು ಕುಡುತಿನಿ ಶ್ರೀನಿವಾಸ, ಹನುಮ ಕಿಶೋರ್, ಜೆ.ಎಸ್.ಆಂಜನೇಯುಲು, ಎ.ಮಾನಯ್ಯ, ಅಲ್ಲಂ ಪ್ರಶಾಂತ್, ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.