ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೌಷ್ಟಿಕತೆ ನೀಗಿಸಲು ‘ನ್ಯೂಟ್ರಿಷನ್‌ ಸೆಂಟರ್‌’

Last Updated 28 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಹೊಸಪೇಟೆ: ಮಕ್ಕಳಲ್ಲಿ ಕಾಡುತ್ತಿರುವ ಅಪೌಷ್ಟಿಕತೆ ಸಮಸ್ಯೆ ದೂರ ಮಾಡಲು ಇಲ್ಲಿನ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆ ಮುಂದಾಗಿದೆ.

ಅದಕ್ಕಾಗಿ ಆಸ್ಪತ್ರೆಯಲ್ಲಿ ‘ನ್ಯೂಟ್ರಿಷನ್‌ ಸೆಂಟರ್‌’ (ಪೌಷ್ಟಿಕಾಂಶ ಕೇಂದ್ರ) ತೆರೆಯಲು ತೀರ್ಮಾನಿಸಿದೆ. ಈಗಾಗಲೇ ಈ ನಿಟ್ಟಿನಲ್ಲಿ ಕೆಲಸ ನಡೆದಿದ್ದು, ಕೇಂದ್ರದ ಕೆಲಸ ಬಹುತೇಕ ಪೂರ್ಣಗೊಂಡಿದೆ. ಶೀಘ್ರದಲ್ಲೇ ಅದು ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ.

ಹಾಲಿ ಆಸ್ಪತ್ರೆಯ ಕಟ್ಟಡದಲ್ಲಿ ಒಂದು ಪ್ರತ್ಯೇಕ ವಿಭಾಗವನ್ನೇ ಅದಕ್ಕಾಗಿ ಗುರುತಿಸಲಾಗಿದೆ. ಅಲ್ಲಿ ಐದು ಹಾಸಿಗೆಗಳಿಗೆ ವ್ಯವಸ್ಥೆ ಮಾಡಲಾಗಿದೆ. ಕಿರು ಡೈನಿಂಗ್‌ ಟೇಬಲ್‌, ಬೈಸಿಕಲ್‌, ವೀಲಿಂಗ್‌ ಚೇರ್‌ ಸೌಲಭ್ಯ ಕಲ್ಪಿಸಲಾಗಿದೆ. ಟಿ.ವಿ. ಹಾಗೂ ಫ್ಯಾನಿನ ವ್ಯವಸ್ಥೆ ಮಾಡಲಾಗಿದೆ. ಗೋಡೆಗಳ ಮೇಲೆ ತಾಯಿ ಮಗುವಿಗೆ ಹಾಲುಣಿಸುವುದು, ‘ಛೋಟಾ ಭೀಮ್‌’, ‘ಮೊಗ್ಲಿ’, ‘ಭಾಲೂ’, ಆನೆ ಸೇರಿದಂತೆ ಇತರೆ ಪ್ರಾಣಿಗಳ ಚಿತ್ರ ಬಿಡಿಸಲಾಗಿದೆ. ಸ್ವಚ್ಛತೆಗೆ ಹೆಚ್ಚಿನ ಒತ್ತು ಕೊಟ್ಟಿರುವುದು ವಿಶೇಷ.

ಈ ರೀತಿಯ ಕೇಂದ್ರ ಈಗಾಗಲೇ ಬಳ್ಳಾರಿ ಜಿಲ್ಲಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದು, ಒಳ್ಳೆಯ ಸ್ಪಂದನೆ ಸಿಕ್ಕಿದೆ. ನಗರದಲ್ಲಿ ಆರಂಭವಾಗುತ್ತಿರುವ ಕೇಂದ್ರ ಜಿಲ್ಲೆಯಲ್ಲಿ ಎರಡನೆಯದಾಗಲಿದೆ. ಬರುವ ದಿನಗಳಲ್ಲಿ ಜಿಲ್ಲೆಯ ಹೂವಿನಹಡಗಲಿಯಲ್ಲಿ ಕೇಂದ್ರ ಆರಂಭಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

ಕೇಂದ್ರದಿಂದ ಏನು ಲಾಭ?:

ಅಂಗನವಾಡಿ ಕೇಂದ್ರಗಳು ಈಗಾಗಲೇ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯನ್ನು ಕಲೆ ಹಾಕಿವೆ. ಆ ಮಕ್ಕಳನ್ನು ಆದ್ಯತೆಯ ಮೇರೆಗೆ ‘ನ್ಯೂಟ್ರಿಷನ್‌ ಸೆಂಟರ್‌’ನಲ್ಲಿ ದಾಖಲು ಮಾಡಲಾಗುತ್ತದೆ. ಪ್ರತಿ ಮಗುವನ್ನು 15 ದಿನ ಕೇಂದ್ರದಲ್ಲೇ ಆರೈಕೆ ಮಾಡಲಾಗುತ್ತದೆ. ಅಪೌಷ್ಟಿಕತೆಯ ಸಮಸ್ಯೆಯನ್ನು ಗುರುತಿಸಿ, ಮಗುವಿಗೆ ಅಗತ್ಯ ಚಿಕಿತ್ಸೆ, ಆಹಾರ ಕೊಡಲಾಗುತ್ತದೆ. ಆಟಿಕೆಗಳಿಗೂ ಅಲ್ಲೇ ವ್ಯವಸ್ಥೆ ಮಾಡಿರುವುದರಿಂದ ಮಗುವಿನ ಬೆಳವಣಿಗೆಗೆ ಯಾವುದೇ ತೊಡಕು ಉಂಟಾಗುವುದಿಲ್ಲ.

ಮಗುವಿನ ಜತೆಗೆ ತಾಯಿ ಕೂಡ ಅಷ್ಟೂ ದಿನ ಅಲ್ಲೇ ಇರಬಹುದು. ಈ ಅವಧಿಯಲ್ಲಿ ಪ್ರತಿದಿನ ಮಗುವಿನ ತಾಯಿಗೆ ₹259 ಸ್ಟೈಫಂಡ್‌ ನೀಡಲಾಗುತ್ತದೆ. ಹೀಗಾಗಿ ಕೂಲಿ ಸೇರಿದಂತೆ ಇತರೆ ಕೆಲಸ ಮಾಡುವವರು ಯಾವುದೇ ಹಿಂಜರಿಕೆಯಿಲ್ಲದೆ ಕೇಂದ್ರಕ್ಕೆ ಮಗುವನ್ನು ಸೇರಿಸಬಹುದು.

‘ಅಪೌಷ್ಟಿಕತೆ ಸಮಸ್ಯೆ ದೂರವಾದರೆ ಮಕ್ಕಳು ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಿ ಬೆಳೆಯಲು ಸಾಧ್ಯವಾಗುತ್ತದೆ. ಹಾಗಾಗಿ ಸಕಲ ವ್ಯವಸ್ಥೆ ಇರುವ ‘ನ್ಯೂಟ್ರಿಷನ್‌ ಸೆಂಟರ್‌’ ಆರಂಭಿಸಲಾಗುತ್ತಿದೆ. ನಾಲ್ಕೈದು ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ’ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಲೀಂ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಸರ್ಕಾರದ ಮಹತ್ವದ ಕಾರ್ಯಕ್ರಮಗಳಲ್ಲಿ ಇದು ಕೂಡ ಒಂದಾಗಿದೆ. ಇಂದಿನ ಮಕ್ಕಳು ಭವಿಷ್ಯದ ಪ್ರಜೆಗಳು. ಅವರ ಆರೋಗ್ಯ ಸರಿಯಿದ್ದರೆ ಅವರು ಬೆಳೆದು, ದೇಶಕ್ಕೆ ಏನಾದರೂ ಕೊಡುಗೆ ಕೊಡಲು ಸಾಧ್ಯ. ಅದನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕಾರ ಈ ಕಾರ್ಯಕ್ರಮ ಕೈಗೆತ್ತಿಕೊಂಡಿದೆ. ನಮ್ಮ ಕೇಂದ್ರವನ್ನುಮಕ್ಕಳ ತಜ್ಞ ಡಾ. ಶ್ರೀನಿವಾಸ್‌ ಅವರ ನೇತೃತ್ವದ ತಂಡ ನೋಡಿಕೊಳ್ಳಲಿದೆ’ ಎಂದು ಹೇಳಿದರು.

‘ನ್ಯೂಟ್ರಿಷನ್‌ ಸೆಂಟರ್‌’ ಆರಂಭಿಸುತ್ತಿರುವುದು ಒಳ್ಳೆಯ ಕೆಲಸ ಎಂದು ಸಾರ್ವಜನಿಕರು, ಸಂಘ ಸಂಸ್ಥೆಗಳ ಮುಖಂಡರು ಸ್ವಾಗತಿಸಿದ್ದಾರೆ. ‘ಕೇಂದ್ರದಿಂದಉಪವಿಭಾಗ ವ್ಯಾಪ್ತಿಯ ನಾಲ್ಕು ತಾಲ್ಲೂಕುಗಳ ಜನರಿಗೆ ಪ್ರಯೋಜನವಾಗಲಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಕೆ.ಎಂ. ಸಂತೋಷ್‌ ಕುಮಾರ್‌ ತಿಳಿಸಿದರು.

‘ಬಡವರ ಮಕ್ಕಳೇಹೆಚ್ಚಿನ ಸಂಖ್ಯೆಯಲ್ಲಿ ಅಪೌ‌ಷ್ಟಿಕತೆಯಿಂದ ಬಳಲುತ್ತಿದ್ದಾರೆ. ಚಿಕಿತ್ಸೆ ಜತೆಗೆ ಆರೈಕೆ ವ್ಯವಸ್ಥೆ ಇರುವುದರಿಂದ ಫಲಿತಾಂಶ ನಿರೀಕ್ಷಿಸಬಹುದು. ಜತೆಗೆ ಮಗುವಿನ ತಾಯಿಗೆ ಸ್ಟೈಫಂಡ್‌ ಕೂಡ ನೀಡುವುದರಿಂದ ಕೂಲಿ ಕಾರ್ಮಿಕರಿಗೆ ಬಹಳ ಪ್ರಯೋಜನವಾಗಲಿದೆ. ಆಸ್ಪತ್ರೆಯವರು ಕೇಂದ್ರವನ್ನು ಸರಿಯಾಗಿ ನಿರ್ವಹಣೆ ಮಾಡಬೇಕು’ ಎಂದು ಹಿರಿಯ ನಾಗರಿಕ ರಾಜು ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT