ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಕೊರತೆ: ಬಿತ್ತನೆ ವಿಳಂಬ

Last Updated 3 ಆಗಸ್ಟ್ 2019, 12:55 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ಮುಂಗಾರು ತಡವಾಗಿ ಪ್ರವೇಶ ಮಾಡಿದ್ದರಿಂದ ತಾಲ್ಲೂಕಿನಲ್ಲಿ ಮುಂಗಾರು ಬಿತ್ತನೆಯೂ ತಡವಾಗಿದೆ.

ಹಿಂದಿನ ವರ್ಷ ಜೂನ್ ಜುಲೈ ತಿಂಗಳಲ್ಲಿ ಬಿತ್ತನೆ ಪ್ರಮಾಣ ಹೆಚ್ಚಾಗಿತ್ತು. ಆದರೆ ಮಳೆ ಕೈಕೊಟ್ಟಿದ್ದರಿಂದ ಮೊಳಕೆ ಒಡೆದ ಬೆಳೆಗಳೆಲ್ಲಾ ಒಣಗಿ ಸಂಪೂರ್ಣ ಬರಗಾಲ ಆವರಿಸಿತ್ತು.

ಆದರೆ ಈ ವರ್ಷ ಆರಂಭದಲ್ಲಿ ಮಳೆ ಸುರಿಯದೇ ಜೋಳದ ಬೆಳೆ ಬಿತ್ತನೆ ಆಗಿಲ್ಲ. ತಾಲ್ಲೂಕಿನಲ್ಲಿ ಇದುವರೆಗೂ ವಾಡಿಕೆ ಮಳೆ ಜುಲೈ ಅಂತ್ಯದವರೆಗೂ 243ಮಿ.ಮೀ ಆಗಬೇಕಿತ್ತು, ಈಗ ಕೇವಲ 176 ಮಿ.ಮೀ ಸುರಿದಿದೆ. ತಾಲ್ಲೂಕಿನಲ್ಲಿ ಶೇಕಡ 28ರಷ್ಟು ಮಳೆ ಕೊರತೆ ಉಂಟಾಗಿದೆ.

ಹಂಪಸಾಗರ ಹೋಬಳಿಯಲ್ಲಿ ಶೇ 31, ತಂಬ್ರಹಳ್ಳಿ ಹೋಬಳಿಯಲ್ಲಿ ಶೇ36, ಕೋಗಳಿ ಹೋಬಳಿಯಲ್ಲಿ ಶೇ 18 ಮತ್ತು ಹಗರಿಬೊಮ್ಮನಹಳ್ಳಿ ಹೋಬಳಿಯಲ್ಲಿ ಶೇ 26ರಷ್ಟು ಮಳೆ ಕೊರತೆ ಉಂಟಾಗಿದೆ.

ಜೂನ್ ಮತ್ತು ಜುಲೈ ತಿಂಗಳಲ್ಲಿ ಮಾತ್ರ ತುಂತುರು ಮಳೆಯಾಗಿರುವುದು ರೈತರಲ್ಲಿ ಕೊಂಚ ಆಶಾಭಾವನೆ ಮೂಡಿಸಿದೆ. ಪರಿಣಾಮವಾಗಿ ರೈತರು ಚಟುವಟಿಕೆಯಿಂದ ಇದ್ದಾರೆ. ಮೆಕ್ಕೆ ಜೋಳ, ರಾಗಿ, ನವಣೆ, ಸೂರ್ಯಕಾಂತಿ, ಶೇಂಗಾ ಬಿತ್ತನೆ ಮಾಡುತ್ತಿದ್ದಾರೆ.

ತಾಲ್ಲೂಕಿನಲ್ಲಿ ನೀರಾವರಿ ಮತ್ತು ಖುಷ್ಕಿ ಸೇರಿ ಬಿತ್ತನೆ ಗುರಿ ಮುಂಗಾರಿನಲ್ಲಿ 47,000 ಹೆಕ್ಟೇರ್ ಇದೆ. ಆದರೆ ಇದುವರೆಗೂ ಕೇವಲ 16,252 ಹೆಕ್ಟೇರ್ ಬಿತ್ತನೆಯಾಗಿದೆ.

ಜೋಳ ಬಿತ್ತನೆ ಗುರಿ 2500 ಹೆಕ್ಟೇರ್ ಇದ್ದರೂ ಕೇವಲ 425ಹೆಕ್ಟೇರ್ ಆಗಿದೆ. ರಾಗಿ ಗುರಿ 100ಹೆಕ್ಟೇರ್ ಇದ್ದರೂ, 225ಹೆಕ್ಟೇರ್‌ನಲ್ಲಿ ಬಿತ್ತನೆಯಾಗದೆ. ಮೆಕ್ಕೆಜೋಳ 14,500 ಹೆಕ್ಟೇರ್ ಗುರಿಗೆ ಕೇವಲ 3,013 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಸಜ್ಜೆ 4,500 ಹೆಕ್ಟೇರ್ ಗುರಿ ಇದ್ದು, 3,574 ಹೆಕ್ಟೇರ್ ಬಿತ್ತನೆಯಾಗಿದೆ. ಶೇಂಗಾ 4500 ಹೆಕ್ಟೇರ್‍ ಇದ್ದು, 1963 ಹೆಕ್ಟೇರ್ ಬಿತ್ತನೆಯಾಗಿದೆ. ಸೂರ್ಯಕಾಂತಿ 300 ಹೆಕ್ಟೇರ್ ಇದ್ದು , 1,611 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.

ಹಿನ್ನೀರೂ ಬರಲಿಲ್ಲ...

ತಾಲ್ಲೂಕಿನ ತಂಬ್ರಹಳ್ಳಿ ಮತ್ತು ಹಂಪಸಾಗರ ಹೋಬಳಿಯ ಕೆಲ ಭಾಗಗಳ ಜಮೀನುಗಳ ಬಳಿ ತುಂಗಭದ್ರಾ ನದಿ ಹಿನ್ನೀರು ಇದುವರೆಗೂ ಬರದೇ ಇರುವುದರಿಂದ ಅಲ್ಲಿನ ನೀರಾವರಿ ಪ್ರದೇಶದ ರೈತರು ತೀವ್ರ ಆತಂಕಗೊಂಡಿದ್ದಾರೆ. ಪ್ರತಿ ವರ್ಷ ಜುಲೈ ಅಂತ್ಯದ ವೇಳೆಗಾಗಲೇ ಬರುತ್ತಿತ್ತು. ಆದರೆ ಇದುವರೆಗೂ ಸುಳಿವೇ ಇಲ್ಲದಂತಾಗಿದೆ. ಈ ಭಾಗದಲ್ಲಿ ಬರುವ ಹಿನ್ನೀರಿನಿಂದಲೇ ಕೃಷಿ ಚಟುವಟಿಕೆಗಳು ನಡೆಯುತ್ತವೆ. ಕೊಳವೆ ಬಾವಿಗಳಲ್ಲಿ ಅಂತರ್ಜಲವೂ ಹೆಚ್ಚುತ್ತದೆ.

`ತಾಲ್ಲೂಕಿನಲ್ಲಿ ಈಗ ಬಿತ್ತನೆ ಚುರುಕುಗೊಂಡಿದ್ದರೂ ರೈತರ ಮೊಗದಲ್ಲಿ ಆತಂಕ ಇದ್ದೇ ಇದೆ. ಬೆಳೆ ಹುಟ್ಟಿದ ಬಳಿಕ ಮಳೆ ಕೈಕೊಟ್ಟರೆ, ಈಗ ಬಿತ್ತನೆ ಮಾಡಿದ ಅಲ್ಪಸ್ಪಲ್ಪ ಬೆಳೆಯೂ ಹಾಳಾಗುತ್ತದೆ. ಮತ್ತೆ ಸಾಲದ ಕೂಪಕ್ಕೆ ಹೋಗುತ್ತೇವೆನ್ನುವ ಭಯ ಇದೆ’ ಎನ್ನುತ್ತಾರೆ ವರಲಹಳ್ಳಿಯ ರೈತ ಕಾಳಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT