ಭಾನುವಾರ, ಆಗಸ್ಟ್ 14, 2022
25 °C

ಹಾಸ್ಟೆಲ್‌ ನೌಕರರಿಗೆ ವಿಶೇಷ ಪ್ಯಾಕೇಜ್‌ಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ಸರ್ಕಾರಿ ಹಾಸ್ಟೆಲ್‌ನಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಕೋವಿಡ್‌–19 ವಿಶೇಷ ಪ್ಯಾಕೇಜ್‌ ಘೋಷಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್‌ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದವರು ಶುಕ್ರವಾರ ನಗರದ ಉಪವಿಭಾಗಾಧಿಕಾರಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಬಳಿಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೆ. ಶ್ರೀನಿವಾಸ ಪೂಜಾರಿ ಅವರಿಗೆ ಬರೆದ ಮನವಿ ಪತ್ರವನ್ನು ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಅವರಿಗೆ ಸಲ್ಲಿಸಿದರು.

2010ರ ಮಾರ್ಚ್‌ನಿಂದ ಹಾಸ್ಟೆಲ್‌ಗಳನ್ನು ಮುಚ್ಚಲಾಗಿದೆ. ಅಂದಿನಿಂದ ಇದುವರೆಗೆ ನೌಕರರ ವೇತನ ಪಾವತಿಸಿಲ್ಲ. ಕೂಡಲೇ ಅವರ ವೇತನ ಪಾವತಿಗೆ ಸರ್ಕಾರ ಮುಂದಾಗಬೇಕು. ಐದು ವರ್ಷ ಸೇವೆ ಸಲ್ಲಿಸಿದ ಹೊರಗುತ್ತಿಗೆ ನೌಕರರನ್ನು ನೌಕರರ ಕ್ಷೇಮಾಭಿವೃದ್ಧಿ ಯೋಜನೆಯಲ್ಲಿ ನೇಮಕ ಮಾಡಿಕೊಳ್ಳಬೇಕು. 2019ರಲ್ಲಿ ನೇರ ನೇಮಕಾತಿಯಲ್ಲಿ ಕೆಲಸ ಕಳೆದುಕೊಂಡ ನೌಕರರಿಗೆ ಹೊಸದಾಗಿ ಆರಂಭಿಸುವ ಹಾಸ್ಟೆಲ್‌ಗಳಲ್ಲಿ ಮರು ನೇಮಕ ಮಾಡಿಕೊಳ್ಳಬೇಕು. ಎಲ್ಲ ಹಾಸ್ಟೆಲ್‌ಗಳಲ್ಲಿ ಹಗಲು–ರಾತ್ರಿ ಕಾವಲುಗಾರರನ್ನು ನೇಮಿಸಿ, ವಿದ್ಯಾರ್ಥಿಗಳಿಗೆ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಮರಡಿ ಜಂಬಯ್ಯ ನಾಯಕ, ಜಿಲ್ಲಾ ಅಧ್ಯಕ್ಷ ಇ.ಆರ್‌. ಯಲ್ಲಪ್ಪ, ಜಿಲ್ಲಾ ಉಪಾಧ್ಯಕ್ಷ ಎಸ್‌. ಸತ್ಯಮೂರ್ತಿ, ಜಿಲ್ಲಾ ಸಹಕಾರ್ಯದರ್ಶಿ ಬಿ. ರಮೇಶ್‌ ಕುಮಾರ್‌, ಭಾಸ್ಕರ್‌ ರೆಡ್ಡಿ, ಎನ್‌. ಯಲ್ಲಾಲಿಂಗ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು