ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಮಳೆಯಲ್ಲೇ ಬಂದು ಪರೀಕ್ಷೆ ಬರೆದರು

ಹುಮ್ಮಸ್ಸಿನಿಂದ ಪರೀಕ್ಷೆ ಬರೆದು ಹುರುಪಿನಿಂದ ತೆರಳಿದರು
Last Updated 22 ಜುಲೈ 2021, 13:21 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಜಿಟಿಜಿಟಿ ಸುರಿಯುತ್ತಿರುವ ಮಳೆಯಲ್ಲೇ ಬಂದು ವಿದ್ಯಾರ್ಥಿಗಳು ಗುರುವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದರು.

ಕೋವಿಡ್‌ ಮೂರನೇ ಅಲೆಯ ಕರಿಛಾಯೆಯಲ್ಲಿ ಸೋಮವಾರ ಮೊದಲ ಪತ್ರಿಕೆ ಪರೀಕ್ಷೆ ಎದುರಿಸಿದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬುಧವಾರ ನಡೆದ ಕೊನೆಯ ಪರೀಕ್ಷೆಗೆ ಬಹಳ ಹುಮ್ಮಸ್ಸಿನಿಂದಲೇ ಬಂದಿದ್ದರು. ಜಿಟಿಜಿಟಿ ಮಳೆಯ ನಡುವೆಯೇ ಒಂದು ಗಂಟೆಗೂ ಮುಂಚೆಯೇ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಬಂದಿದ್ದರು. ಎಲ್ಲರೂ ಅಂತರ ಕಾಯ್ದುಕೊಂಡು ಒಬ್ಬೊಬ್ಬರಾಗಿ ಒಳ ಹೋದರು. ಎಲ್ಲರಿಗೂ ಥರ್ಮಲ್‌ ಸ್ಕ್ರೀನಿಂಗ್‌, ಆಕ್ಸಿಮೀಟರ್‌ನಿಂದ ಪರೀಕ್ಷೆ ನಡೆಸಲಾಯಿತು. ಮಾಸ್ಕ್‌ ಕೊಡಲಾಯಿತು.

ಮೊದಲ ಪತ್ರಿಕೆಯ ಪರೀಕ್ಷೆಯ ದಿನ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರದೊಳಗೆ ಶಿಸ್ತು ಬದ್ಧ, ಅಂತರ ಕಾಯ್ದುಕೊಂಡು ಕಳುಹಿಸಲು ಸಿಬ್ಬಂದಿ ಪರದಾಟ ನಡೆಸಿದ್ದರು. ಆದರೆ, ಗುರುವಾರ ಅವರೆಲ್ಲ ನಿರಾಳರಾಗಿದ್ದರು. ವಿದ್ಯಾರ್ಥಿಗಳು ಅವರಾಗಿಯೇ ಎಲ್ಲ ನಿಯಮ ಪಾಲಿಸಿಕೊಂಡು ಒಳ ಹೋದರು. ಸಿಬ್ಬಂದಿ, ಪ್ರಾಧ್ಯಾಪಕರು ಅವರನ್ನು ಗಮನಿಸುತ್ತಿದ್ದರು.

ಮೊದಲ ಪತ್ರಿಕೆಯ ಪರೀಕ್ಷೆಯ ದಿನ ಕಂಡು ಬಂದಿದ್ದ ಕೆಲ ಸಣ್ಣಪುಟ್ಟ ಅಸ್ತವ್ಯಸ್ತ, ಕೊನೆಯ ಪತ್ರಿಕೆಯ ದಿನ ಕಂಡು ಬರಲಿಲ್ಲ. ಕೂಡ್ಲಿಗಿ ಪರೀಕ್ಷಾ ಕೇಂದ್ರದಲ್ಲಿ ಗುರುವಾರ ವಿದ್ಯುತ್‌ ದೀಪಗಳಿಗೆ ವ್ಯವಸ್ಥೆ ಮಾಡಲಾಗಿತ್ತು. ಮೊದಲ ಪತ್ರಿಕೆಯನ್ನು ವಿದ್ಯಾರ್ಥಿಗಳು ಬೆಳಕಿನ ಅಭಾವದಲ್ಲಿಯೇ ಬರೆದಿದ್ದರು. ಅಲ್ಲಿಗೆ ಭೇಟಿ ನೀಡಿದ ಶಾಸಕ ಎನ್‌.ವೈ. ಗೋಪಾಲಕೃಷ್ಣ ಅವರು ಕ್ಷೇತ್ರ ಶಿಕ್ಷಣಾಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಕೆಲ ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ಬೆಂಚ್‌ ವ್ಯವಸ್ಥೆ ಇರಲಿಲ್ಲ. ಈ ಸಲ ಆ ಸಮಸ್ಯೆ ಇರಲಿಲ್ಲ.

ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಿಂದ ಬಂದಿದ್ದ ವಿದ್ಯಾರ್ಥಿಗಳು ಹುರುಪಿನಿಂದಲೇ ಕೇಂದ್ರದೊಳಗೆ ಹೋಗಿ, ಪರೀಕ್ಷೆ ಬರೆದು, ಮಂದಹಾಸದೊಂದಿಗೆ ಹೊರಬಂದು, ಮನೆಗಳತ್ತ ಹೆಜ್ಜೆ ಹಾಕಿದರು. ಎಲ್ಲರ ಚಹರೆಯಲ್ಲೂ ಏನೋ ಸಾಧಿಸಿರುವ ಲಕ್ಷಣ ಕಂಡು ಬಂತು.

ಯಾವುದೇ ಕುಂದು ಕೊರತೆ ಇಲ್ಲದೆ ಸುಗಮವಾಗಿ ಪರೀಕ್ಷೆಗಳು ಕೊನೆಗೊಂಡಿದ್ದರಿಂದ ಸಿಬ್ಬಂದಿ ಕೂಡ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಕೊರೊನಾ ಮೂರನೇ ಅಲೆಯ ಆತಂಕದ ನಡುವೆ ಪರೀಕ್ಷೆ ಸಂಘಟಿಸಿದ್ದರಿಂದ ವಿದ್ಯಾರ್ಥಿಗಳು, ಅವರ ಪೋಷಕರು ಹಾಗೂ ಪರೀಕ್ಷಾ ಸಿಬ್ಬಂದಿಯಲ್ಲಿ ಆತಂಕ ಮನೆ ಮಾಡಿತ್ತು. ಆದರೆ, ಎಲ್ಲವೂ ಸುಗಮವಾಗಿ ಮುಗಿದಿದೆ.

‘ಸೋಮವಾರ ಮೊದಲ ದಿನ ಪರೀಕ್ಷೆ ಬರೆಯಲು ಬಂದಾಗ ಸಣ್ಣ ಆತಂಕ ಇತ್ತು. ಆದರೆ, ಪರೀಕ್ಷೆ ಬರೆದು ಮನೆಗೆ ಹೋದ ನಂತರ ಧೈರ್ಯ ಬಂತು. ಗುರುವಾರ ಯಾವುದೇ ಆತಂಕ, ಅಳುಕು ಇರಲಿಲ್ಲ. ಪ್ರಶಾಂತ ವಾತಾವರಣದಲ್ಲಿ ಪರೀಕ್ಷೆ ಎದುರಿಸಿ ಮನೆಗೆ ಹೋಗುತ್ತಿರುವೆ’ ಎಂದು ವಿದ್ಯಾರ್ಥಿನಿ ಶ್ವೇತಾ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT