ರೈತ ಸಂಪರ್ಕ ಕೇಂದ್ರಕ್ಕೆ ಸಿಬ್ಬಂದಿ ಕೊರತೆ

7
ಒಬ್ಬ ಸಹಾಯಕ ಕೃಷಿ ನಿರ್ದೇಶಕರಿಂದಲೇ ಎಲ್ಲ ಕೆಲಸ; ರೈತರ ಕೆಲಸಕ್ಕೆ ಹಿನ್ನಡೆ

ರೈತ ಸಂಪರ್ಕ ಕೇಂದ್ರಕ್ಕೆ ಸಿಬ್ಬಂದಿ ಕೊರತೆ

Published:
Updated:
Deccan Herald

ಕಂಪ್ಲಿ: ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಸಿಬ್ಬಂದಿ ಕೊರತೆಯಿಂದ ಈ ಭಾಗದ ರೈತರಿಗೆ ಕೃಷಿಗೆ ಸಂಬಂಧಿಸಿದ ಸಲಹೆ, ಸೂಚನೆಗಳು ಸಕಾಲಕ್ಕೆ ದೊರೆಯದೆ ಪರದಾಟ ನಡೆಸುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.

ಪ್ರಸ್ತುತ ರೈತ ಸಂಪರ್ಕ ಕೇಂದ್ರ ಕಂಪ್ಲಿ, ಮೆಟ್ರಿ ಮತ್ತು ದೇವಲಾಪುರ ವೃತ್ತ ವ್ಯಾಪ್ತಿಯ 24 ಗ್ರಾಮಗಳನ್ನು ಒಳಗೊಂಡಿದೆ. ಒಟ್ಟು 27,673 ಹೆಕ್ಟೇರ್‌ ಭೌಗೋಳಿಕ ವಿಸ್ತೀರ್ಣ ಮತ್ತು 19,911 ಹೆಕ್ಟೇರ್‌ಗಿಂತಲೂ ಅಧಿಕ ಸಾಗುವಳಿ ಕ್ಷೇತ್ರ ಹೊಂದಿದೆ. ಸದ್ಯ ಇದೆಲ್ಲವನ್ನು ಸಹಾಯಕ ಕೃಷಿ ನಿರ್ದೇಶಕರೊಬ್ಬರೆ ನಿಭಾಯಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ.

ಹಾಲಿ ಕೇಂದ್ರಕ್ಕೆ ಮೂವರು ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆ ಮಂಜೂರಾಗಿದೆ. ಆದರೆ, ಆ ಹುದ್ದೆಗಳನ್ನು ಸರ್ಕಾರ ತುಂಬದ ಕಾರಣ ಸದ್ಯ ಒಬ್ಬ ಸಹಾಯಕ ಕೃಷಿ ನಿರ್ದೇಶಕರು ಕೆಲಸ ನಿರ್ವಹಿಸುತ್ತಿದ್ದಾರೆ. ಉಳಿದಂತೆ ತಾಂತ್ರಿಕ ಉತ್ತೇಜಕರು, ಸಹಾಯಕ ತಾಂತ್ರಿಕ ವ್ಯವಸ್ಥಾಪಕ, ಲೆಕ್ಕಿಗರ ಕೆಲಸದ ಜವಾಬ್ದಾರಿಯೂ ಇವರ ಹೆಗಲ ಮೇಲಿದೆ.

ಈ ಮೊದಲು ರೈತರು ಮತ್ತು ಅಧಿಕಾರಿಗಳ ಮಧ್ಯೆ ಸೇತುವೆಯಂತೆ ಕೆಲಸ ನಿರ್ವಹಿಸುತ್ತಿದ್ದ ಎಂಟು ಜನ ಅನುವುಗಾರರನ್ನು ಸರ್ಕಾರ ಪ್ರಸಕ್ತ ಸಾಲಿನಿಂದ ತೆಗೆದು ಹಾಕಿದ್ದು, ರೈತರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸದ್ಯ ಕೇಂದ್ರದಲ್ಲಿರುವ ಸಹಾಯಕ ಕೃಷಿ ನಿರ್ದೇಶಕರು ಕಚೇರಿ ಕೆಲಸದ ಜತೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ಕೃಷಿ ಹೊಂಡ, ಎರೆಹುಳು ತೊಟ್ಟಿ ನಿರ್ಮಾಣ, ಬೆಳೆ ವಿಮೆ, ರೈತರ ಆನ್‌ಲೈನ್ ನೋಂದಣಿ ಸೇರಿದಂತೆ ಸರ್ಕಾರದ ಯೋಜನೆಗಳ ಗುರಿ ಸಾಧಿಸುವ ತೊಳಲಾಟ. ಇವೆಲ್ಲವುಗಳ ನಡುವೆ ರೈತರ ಸಮಸ್ಯೆಗಳಿಗೂ ಪರಿಹಾರ ಸೂಚಿಸಬೇಕಾದ ಹೊಣೆಗಾರಿಕೆ ವಹಿಸಿದ್ದರಿಂದ ಅವರು ಒತ್ತಡದಲ್ಲಿ ಕೆಲಸ ನಿರ್ವಹಿಸುವಂತಾಗಿದೆ.

ಈ ಮೊದಲು ರೈತ ಸಂಪರ್ಕ ಕೇಂದ್ರ ಪಟ್ಟಣದ ಹೃದಯ ಭಾಗದ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಆದರೆ, ಕೆಲ ತಿಂಗಳ ಹಿಂದೆ ಸುಮಾರು ಎರಡು ಕಿ.ಮೀ. ದೂರದ ಅಚ್ಚಪ್ಪ ದೊಡ್ಡಬಸಪ್ಪ ಸ್ಮಾರಕ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಆವರಣಕ್ಕೆ ಸ್ಥಳಾಂತರಗೊಳಿಸಲಾಗಿದೆ. ಇದರಿಂದ ರೈತರಿಗೆ ಹೋಗಿ ಬರಲು ತೊಂದರೆಯಾಗುತ್ತಿದೆ.

‘ಕಂಪ್ಲಿ ತಾಲ್ಲೂಕಿನಲ್ಲಿ ತುಂಗಭದ್ರಾ ಬಲದಂಡೆ ಮೇಲ್ಮಟ್ಟ, ಕೆಳಮಟ್ಟ ಮತ್ತು ನದಿ ಪಾತ್ರದಲ್ಲಿ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗುತ್ತದೆ. ಈ ಬೆಳೆಗೆ ತಾಂತ್ರಿಕ ಮಾಹಿತಿ, ರೋಗ ಬಾಧೆ ಕಾಣಿಸಿಕೊಂಡಾಗ ಕ್ಷೇತ್ರ ಕಾರ್ಯ ನಡೆಸಬೇಕಾದ ಅಧಿಕಾರಿಗಳೇ ಇಲ್ಲ ಎಂದರೆ ನಾವು ಯಾರಿಗೆ ಹೇಳಬೇಕು. ಇದು ಒಬ್ಬ ಅಧಿಕಾರಿಯಿಂದ ಸಾಧ್ಯವೆ. ಸರ್ಕಾರ ಗಮನಹರಿಸಿ ಖಾಲಿ ಹುದ್ದೆ ಭರ್ತಿ ಮಾಡಬೇಕು’ ಎನ್ನುತ್ತಾರೆ ಸುಗ್ಗೇನಹಳ್ಳಿ ಗ್ರಾಮದ ರೈತ ಎ.ಕೆ. ಲೋಕೇಶ್ ಮತ್ತು ಕಣವಿ ತಿಮ್ಮಲಾಪುರ ಗ್ರಾಮದ ಜಿ. ವೀರೇಶ್‌.

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !