ಸೋಮವಾರ, ಡಿಸೆಂಬರ್ 9, 2019
21 °C
ನರೇಗಾದಡಿ ಆಸ್ತಿ ಸೃಜನೆ ಕುರಿತು ಜನಪ್ರತಿನಿಧಿಗಳಿಗೆ ಕಾರ್ಯಾಗಾರ

‘ಜನ ಕಂಗೆಟ್ಟು ಗುಳೆ ಹೋಗದಿರಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬಳ್ಳಾರಿ: ನರೇಗಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿದರೆ ಬರಪೀಡಿತ ಪ್ರದೇಶಗಳಿಗೆ ವರದಾನವಾಗಲಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.

ನರೇಗಾ ಯೋಜನೆಯಡಿ ‘ದೀರ್ಘಕಾಲಿಕ ಬಾಳಿಕೆ ಬರುವ ಆಸ್ತಿಗಳ ಸೃಜನೆ; ಕಾಮಗಾರಿ ಅನುಷ್ಠಾನದಲ್ಲಿ ಜನಪ್ರತಿನಿಧಿಗಳ ಪಾಲ್ಗೊಳ್ಳುವಿಕೆ’ ಕುರಿತು ನಗರದ ಬಿಡಿಎಎ ಪುಟ್ಬಾಲ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಯೋಜನೆಯ ಕುರಿತಾದ ಮಾಹಿತಿ ತಿಳಿದುಕೊಂಡು ತಮ್ಮ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ಬರದಿಂದ ಕೃಷಿ ಚಟುವಟಿಕೆ ಇಲ್ಲದೇ ಜನರು ಗುಳೆ ಹೋಗುತ್ತಿದ್ದಾರೆ. ಉತ್ತಮ ದುಡಿಮೆಯ ನಿರೀಕ್ಷೆಯಲ್ಲಿ ಗುಳೆ ಹೋದರೆ ತಪ್ಪಿಲ್ಲ, ಆದರೆ, ಬರದಿಂದ ಕಂಗೆಟ್ಟು ಹೋದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಲೆತಗ್ಗಿಸುವ ವಿಚಾರ. ಇದಕ್ಕೆ ಅಸ್ಪದ ನೀಡಬಾರದು ಎಂದು ಎಚ್ಚರಿಸಿದರು. 

ಜಿಲ್ಲಾ ಪಂಚಾಯ್ತಿಯಲ್ಲಿ 44 ಲಕ್ಷ ಮಾನವ ದಿನಗಳ ಸೃಜನೆ ಗುರಿ ಇದ್ದರೂ ಕೂಡ 10 ಕೋಟಿ ಮಾನವ ದಿನಗಳ ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದರು.

ಪ್ಲಾಸ್ಟಿಕ್ ನಿರ್ಮೂಲನೆ ದಿನ: ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಪ್ಲಾಸ್ಟಿಕ್‌ ನಿರ್ಮೂಲನೆಗೊಳಿಸಲು ಒಂದು ದಿನ ‘ಶ್ರಮಶಕ್ತಿ ದಿವಸ’ ಏರ್ಪಡಿಸಿ ಗ್ರಾಮಗಳಲ್ಲಿನ ಪ್ಲಾಸ್ಟಿಕ್‍ ತೆಗೆದು ಒಂದೆಡೆ ಹಾಕಿ ಎಂದು ಜನಪ್ರತಿನಿಧಿಗಳಿಗೆ ಸಲಹೆ ನೀಡಿದರು.

ದುಡಿಯುವ ಕೈಗಳಿಗೆ ಕೂಲಿ ಖಾತರಿಯ ನರೇಗಾ ಯೋಜನೆಯಡಿ ಕೂಲಿ ಕೆಲಸಕ್ಕೆ ಆಹ್ವಾನ ಪತ್ರ ಎಂಬ ಕರಪತ್ರಗಳನ್ನು ಬಿಡುಗಡೆಗೊಳಿಸಿದರು.

ಜಿಲ್ಲಾ ಪಂಚಾಯ್ತಿ ಅಭಿವೃದ್ಧಿ ವಿಭಾಗದ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್, ಸದಸ್ಯರಾದ ಎ.ಮಾನಯ್ಯ, ಅಲ್ಲಂ ಪ್ರಶಾಂತ, ಬನಶಂಕರಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ರಮೀಜಾ ಬಿ., ಉಪಾಧ್ಯಕ್ಷೆ ಪುಷ್ಪಾವತಿ, ಕಾರ್ಯನಿರ್ವಾಹಕ ಅಧಿಕಾರಿ ಜಾನಕಿರಾಂ ಇದ್ದರು.

* ಪ್ಲಾಸ್ಟಿಕ್ ನಿರ್ಮೂಲನೆಗೊಳಿಸಲು ಜನಪ್ರತಿನಿಧಿಗಳು ಶ್ರಮಶಕ್ತಿ ದಿನ ಆಚರಿಸಿ ಗ್ರಾಮದಲ್ಲಿನ ಪ್ಲಾಸ್ಟಿಕ್ ಆರಿಸಿ ಒಂದೆಡೆ ಸಾಗಿಸಬೇಕು.‌

-ಡಾ.ಕೆ.ವಿ.ರಾಜೇಂದ್ರ, ಜಿಪಂ ಸಿಇಒ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು