ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿನಿ ಸಾವು: ನಿಷ್ಪಕ್ಷಪಾತ ತನಿಖೆಗೆ ಆಗ್ರಹ

Last Updated 30 ಏಪ್ರಿಲ್ 2019, 9:20 IST
ಅಕ್ಷರ ಗಾತ್ರ

ಹೊಸಪೇಟೆ: ರಾಯಚೂರಿನ ವಿದ್ಯಾರ್ಥಿನಿ ಸಾವಿಗೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ಮಾಡುವಂತೆ ಆಗ್ರಹಿಸಿ ತಾಲ್ಲೂಕು ವಿಶ್ವಕರ್ಮ ಸಮಾಜದಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಬಳ್ಳಾರಿ ರಸ್ತೆಯ ಕಾಳಿಕಾದೇವಿ ದೇವಸ್ಥಾನದ ಎದುರು ಸೇರಿದ ಸಮಾಜದವರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.

‘ವಿದ್ಯಾರ್ಥಿನಿ ಸಾವಿನ ಹಿಂದೆ ವ್ಯವಸ್ಥಿತ ಕೊಲೆ ಸಂಚು ಇದ್ದಂತಿದೆ. ಅರೆಬರೆ ಸುಟ್ಟ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಸಿಕ್ಕಿರುವುದು ಕ್ರೌರ್ಯದ ಕರಾಳ ಮುಖ ತೋರಿಸುತ್ತದೆ. ಮೇಲ್ನೋಟಕ್ಕೆ ಕೊಲೆ ಎಂಬುದು ಇದರಿಂದ ಗೊತ್ತಾಗುತ್ತದೆ. ಯಾವ ರಾಜಕೀಯ ಒತ್ತಡಕ್ಕೂ ಒಳಗಾಗದೆ ಪ್ರಕರಣದ ಕುರಿತು ಸಮಗ್ರವಾಗಿ ತನಿಖೆ ನಡೆಸಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

‘ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ರಾಜ್ಯದಲ್ಲಿ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿವೆ. ನ್ಯಾಯಮೂರ್ತಿ ವರ್ಮಾ ಸಮಿತಿಯ ಶಿಫಾರಸು ಜಾರಿಗೆ ತರಲು ಕನಿಷ್ಠ ಪ್ರಯತ್ನಗಳು ನಡೆದಿಲ್ಲ. ಹೆಣ್ಣು ಮಕ್ಕಳು ದುಡಿಯುವ ಸ್ಥಳಗಳಲ್ಲಿ ದೌರ್ಜನ್ಯ ತಡೆ ಸಮಿತಿ ರಚಿಸಿ, ಕ್ರಿಯಾಶೀಲಗೊಳಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಯುವಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಆರೋಗ್ಯಕರ ರೀತಿಯಲ್ಲಿ ಸ್ಪಂದಿಸಿ, ಬಗೆಹರಿಸಲು ಶಾಲಾ–ಕಾಲೇಜುಗಳಲ್ಲಿ ಆಪ್ತ ಸಮಾಲೋಚನೆ ನಡೆಸಬೇಕು. ಸರ್ಕಾರ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಜಂಟಿ ಸಭೆ ಕರೆದು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ಸಮಾಜದ ಅಧ್ಯಕ್ಷ ಬಿ. ದ್ಯಾಮಣ್ಣ, ಮುಖಂಡರಾದ ಬ್ರಹ್ಮಚಾರಿ, ಯಶವಂತಪ್ಪ, ಕೆ. ಸೂರ್ಯನಾರಾಯಣ, ಎ. ಶ್ರೀನಿವಾಸ್‌, ಶೋಭಾ, ಉಮಾದೇವಿ, ಜಿ. ಶ್ರೀದೇವಿ, ಬಿ. ಹೇಮಾವತಿ, ಬಿ. ಐಶ್ವರ್ಯ, ಪಿ.ಸಿ. ಶಾಂತಾ, ವೈ. ಗಾಯತ್ರಿ, ಎಸ್‌. ಪ್ರತಿಭಾ ಭಾರತಿ, ಪಿ. ಮಂಜುಳಾ, ರತ್ನಾ, ಬಿ. ಕಸ್ತೂರಮ್ಮ, ಕಾಳಮ್ಮ, ಜಯಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT