ಮಂಗಳವಾರ, ಆಗಸ್ಟ್ 16, 2022
27 °C
ಓದಿಗೆ ತೊಂದರೆ; ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳ ಅಳಲು

ಇನ್ನೂ ತೆರೆಯದ ‘ಅಕ್ಷರ’ ಗ್ರಂಥಾಲಯ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಕೊರೊನಾ ಲಾಕ್‌ಡೌನ್‌ ನಿಯಮಗಳು ಬಹುತೇಕ ಸಡಿಲಗೊಂಡರೂ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ‘ಅಕ್ಷರ’ ಗ್ರಂಥಾಲಯ ಇದುವರೆಗೆ ವಿದ್ಯಾರ್ಥಿಗಳಿಗೆ ಬಾಗಿಲು ತೆರೆದಿಲ್ಲ.

ನಿತ್ಯ ಸಿಬ್ಬಂದಿಯಷ್ಟೇ ಗ್ರಂಥಾಲಯಕ್ಕೆ ಬಂದು ಹೋಗುತ್ತಿದ್ದಾರೆ. ವಿದ್ಯಾರ್ಥಿಗಳು ಪುಸ್ತಕ ತೆಗೆದುಕೊಂಡು ಹೋಗಲು, ಓದುವುದಕ್ಕೆ ಅವಕಾಶ ಕಲ್ಪಿಸಿಲ್ಲ. ಗ್ರಂಥಾಲಯದ ಬಾಗಿಲು ತೆರೆದಿದ್ದರೂ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುತ್ತಿಲ್ಲ. ಸ್ನಾತಕೋತ್ತರ, ಎಂ.ಫಿಲ್‌, ಪಿಎಚ್‌.ಡಿ ಸೇರಿದಂತೆ ಇತರೆ ವಿದ್ಯಾರ್ಥಿಗಳ ಓದಿಗೆ ತೊಂದರೆ ಉಂಟಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಈ ವಿಷಯ ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಗೋಳು ತೋಡಿಕೊಂಡಿದ್ದಾರೆ.

‘ಮಾಸ್ಕ್‌ ಧರಿಸಿ, ಅಂತರ ಕಾಯ್ದುಕೊಂಡು, ಸ್ಯಾನಿಟೈಸರ್‌ ಬಳಸಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಲು ಸರ್ಕಾರ ಜನರಿಗೆ ಅವಕಾಶ ಕಲ್ಪಿಸಿ ತಿಂಗಳುಗಳೇ ಉರುಳಿವೆ. ಸಾರ್ವಜನಿಕ ಗ್ರಂಥಾಲಯಗಳು, ಸಿನಿಮಾ ಮಂದಿರಗಳು, ಹೋಟೆಲ್‌ಗಳು ಬಾಗಿಲು ತೆರೆದಿವೆ. ರಾಜಕೀಯ ಪಕ್ಷಗಳು ಸಾವಿರಾರು ಜನರನ್ನು ಸೇರಿಸಿ ರ್‍ಯಾಲಿಗಳು ನಡೆಸುತ್ತಿವೆ. ಪರಿಸ್ಥಿತಿ ಹೀಗಿರುವಾಗ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳ ಓದಿಗೆ ಅವಕಾಶ ಕಲ್ಪಿಸಿಕೊಡದೇ ಇರುವುದು ಸರಿಯಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಸಂಶೋಧನಾ ವಿದ್ಯಾರ್ಥಿ ‘ಪ್ರಜಾವಾಣಿ’ಗೆ ಅಳಲು ತೋಡಿಕೊಂಡಿದ್ದಾರೆ.

‘ಗ್ರಂಥಾಲಯದಲ್ಲಿ ಅಂತರ ಕಾಯ್ದುಕೊಂಡು ವಿದ್ಯಾರ್ಥಿಗಳ ಓದಿಗೆ ಅವಕಾಶ ಮಾಡಿಕೊಡಬೇಕು. ಅದೂ ಸಾಧ್ಯವಾಗದಿದ್ದರೆ ವಿದ್ಯಾರ್ಥಿಗಳು ಅವರ ಓದು, ಸಂಶೋಧನೆಗೆ ಪೂರಕವಾದ ಪುಸ್ತಕಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಬಿಡಬೇಕು. ಎರಡೂ ಮಾಡದೇ ಇರುವುದರಿಂದ ವಿದ್ಯಾರ್ಥಿಗಳು ಬಹಳ ಸಮಸ್ಯೆ ಎದುರಿಸುತ್ತಿದ್ದಾರೆ. ವಿದ್ಯಾರ್ಥಿಗಳ ಕಷ್ಟ ಅರಿತು ವಿಶ್ವವಿದ್ಯಾಲಯವೂ ಆದಷ್ಟು ಶೀಘ್ರ ಗ್ರಂಥಾಲಯದಲ್ಲಿ ನಿರ್ಬಂಧಿಸಿರುವ ನಿಯಮ ತೆಗೆದು ಹಾಕಬೇಕು’ ಎಂದು ಇನ್ನೊಬ್ಬ ವಿದ್ಯಾರ್ಥಿ ಆಗ್ರಹಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಯು ಕುಲಸಚಿವ ಪ್ರೊ.ಎ. ಸುಬ್ಬಣ್ಣ ರೈ ಅವರನ್ನು ಸಂಪರ್ಕಿಸಿದಾಗ, ‘ಸರ್ಕಾರದಿಂದ ಸೂಕ್ತ ನಿರ್ದೇಶನ ಬರುವವರೆಗೆ ಏನೂ ಮಾಡಲು ಆಗುವುದಿಲ್ಲ. ಅಂದಹಾಗೆ, ವಿದ್ಯಾರ್ಥಿಗಳಿಗೆ ಏನೇ ಮಾಹಿತಿ ಬೇಕಿದ್ದರೂ ಅಂತರ್ಜಾಲದಲ್ಲಿ ಹುಡುಕಾಡಬಹುದು. ಈಗ ಎಲ್ಲವೂ ಅದರಲ್ಲಿ ಸಿಗುತ್ತದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.