ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ದಿನಕ್ಕೆ ವಿದ್ಯಾರ್ಥಿಗಳ ಧರಣಿ

ಅಹೋರಾತ್ರಿ ಹಂಪಿ ಕನ್ನಡ ವಿ.ವಿ. ಕುಲಪತಿ ಕಚೇರಿ ಎದುರು ಮೊಕ್ಕಾಂ; ಸ್ಥಳದಲ್ಲೇ ಊಟ, ಉಪಾಹಾರ
Last Updated 31 ಜುಲೈ 2019, 13:57 IST
ಅಕ್ಷರ ಗಾತ್ರ

ಹೊಸಪೇಟೆ: ಫೆಲೋಶಿಪ್‌ ನೀಡುವಂತೆ ಒತ್ತಾಯಿಸಿ ಎಸ್ಸಿ/ಎಸ್ಟಿ ಸಂಶೋಧನಾ ವಿದ್ಯಾರ್ಥಿಗಳು ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಬುಧವಾರ ಎರಡನೇ ದಿನಕ್ಕೆ ಕಾಲಿರಿಸಿದೆ.

ಮಂಗಳವಾರ ಬೆಳಿಗ್ಗೆ ಆರಂಭಿಸಿದ ಧರಣಿ, ಅಹೋರಾತ್ರಿ ಕೂಡ ಮುಂದುವರೆಯಿತು. ಬೇಡಿಕೆಯನ್ನು ಈಡೇರಿಸುವ ಕುರಿತು ಖಚಿತ ಭರವಸೆ ಸಿಗದ ಕಾರಣ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬುಧವಾರ ಕೂಡ ಧರಣಿ ಮುಂದುವರೆಸಿದರು.

ತುಂತುರು ಮಳೆ, ಮೈನಡುಗುವ ಚಳಿಯನ್ನೂ ಲೆಕ್ಕಿಸದೇ ವಿದ್ಯಾರ್ಥಿಗಳು ರಾತ್ರಿಯಿಡೀ ಕ್ರಿಯಾಶಕ್ತಿ ಭವನದ ಎದುರು ಧರಣಿ ನಡೆಸಿದರು. ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಊಟ ಸ್ಥಳಕ್ಕೆ ತರಿಸಿಕೊಂಡು ಅಲ್ಲೇ ಮುಗಿಸಿದರು. ಕ್ರಾಂತಿ ಗೀತೆಗಳನ್ನು ಹಾಡುತ್ತ ಕಾಲ ಕಳೆದರು.

‘ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ₹10 ಸಾವಿರ ಫೆಲೋಶಿಪ್‌ ನೀಡಲಾಗುತ್ತದೆ. ಆದರೆ, ಎರಡು ವರ್ಷಗಳಿಂದ ಫೆಲೋಶಿಪ್‌ ಕೊಡುತ್ತಿಲ್ಲ. ಇದರಿಂದ ಸಂಶೋಧನಾ ಕ್ಷೇತ್ರ ಕಾರ್ಯಕ್ಕೆ ಸಮಸ್ಯೆಯಾಗುತ್ತಿದೆ. ಸುಮಾರು 500 ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಬಹುತೇಕರು ಗ್ರಾಮೀಣ ಬಡ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಹೀಗಿದ್ದರೂ ಕುಲಪತಿಯಾಗಲಿ, ಕುಲಸಚಿವರಾಗಲಿ ಸ್ಪಂದಿಸಿಲ್ಲ’ ಎಂದು ವಿದ್ಯಾರ್ಥಿಗಳು ಗೋಳು ತೋಡಿಕೊಂಡಿದ್ದಾರೆ.

’ಈ ಸಂಬಂಧ ಅನೇಕ ಬಾರಿ ವಿಶ್ವವಿದ್ಯಾಲಯದ ಕುಲಪತಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಫೆಲೋಶಿಪ್‌ ಕೇಳಿದರೆ ಸಮಾಜ ಕಲ್ಯಾಣ ಇಲಾಖೆಯಿಂದ ಅನುದಾನ ಬಂದಿಲ್ಲ ಎಂದು ಹೇಳುತ್ತಾರೆ. ಈ ಸಲ ನಮ್ಮ ಬೇಡಿಕೆ ಈಡೇರುವವರೆಗೆ ಧರಣಿ ಕೈಬಿಡುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

‘ರಾಜ್ಯದ ಇತರೆ ವಿಶ್ವವಿದ್ಯಾಲಯಗಳಲ್ಲಿ ಪ್ರತಿ ತಿಂಗಳು ಕಾಲಕಾಲಕ್ಕೆ ಫೆಲೋಶಿಪ್‌ ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಜಮೆ ಮಾಡಲಾಗುತ್ತದೆ. ಆದರೆ, ರಾಜ್ಯದ ಏಕೈಕ ಸಂಶೋಧನಾ ವಿಶ್ವವಿದ್ಯಾಲಯದಲ್ಲಿ ಸಮಸ್ಯೆಯಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ವಿದ್ಯಾರ್ಥಿಗಳ ಸಮಸ್ಯೆಯನ್ನು ಆದ್ಯತೆ ಮೇರೆಗೆ ಬಗೆಹರಿಸಬೇಕು’ ಎಂದು ಹಕ್ಕೊತ್ತಾಯ ಮಾಡಿದ್ದಾರೆ.

‘ಸರ್ಕಾರದಿಂದ ಅನುದಾನವೇ ಬಿಡುಗಡೆಯಾಗಿಲ್ಲ. ಹೀಗಿರುವಾಗ ಫೆಲೋಶಿಪ್‌ ಕೊಡುವುದು ಹೇಗೆ. ಈ ವಿಷಯವನ್ನು ವಿದ್ಯಾರ್ಥಿಗಳ ತಿಳಿಸಲಾಗಿದೆ. ಆದರೆ, ಅವರು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ’ ಎಂದು ವಿಶ್ವವಿದ್ಯಾಲಯದ ಕುಲಸಚಿವ ಎ. ಸುಬ್ಬಣ್ಣ ರೈ ‘ಪ್ರಜಾವಾಣಿ’ಗೆ ತಿಳಿಸಿದರು.

ಧರಣಿ ನಡೆಸುತ್ತಿರುವ ಸ್ಥಳದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್‌ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT