ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲಮನ್ನಾ ನಾಳೆ ಮಾರ್ಗಸೂಚಿ: ಮುಖ್ಯಮಂತ್ರಿ ಕುಮಾರಸ್ವಾಮಿ

Last Updated 28 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ರೈತರ ಸಾಲವನ್ನು ಮನ್ನಾ ಮಾಡುವುದಾಗಿ ನೀಡಿರುವ ಭರವಸೆ ಈಡೇರಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಬೆಂಗಳೂರಿನಲ್ಲಿ ಬುಧವಾರ ಸೂಕ್ತ ಮಾರ್ಗಸೂಚಿ ಪ್ರಕಟಿಸುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಘೋಷಿಸಿದರು.

ಸೋಮವಾರ ಸಂಜೆ ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಾಲ ಮನ್ನಾ ಕುರಿತು ಬಿಜೆಪಿ ಇಲ್ಲಸಲ್ಲದ ಆರೋಪ ಮಾಡುತ್ತ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಬಿಜೆಪಿ ಮುಖಂಡರು ನಮಗೆ ಉಸಿರಾಡುವುದಕ್ಕೂ ಸಮಯಾವಕಾಶ ನೀಡದೆ ಈ ರೀತಿ ಅವಸರ ತೋರುತ್ತಿರುವುದು ಸರಿಯಲ್ಲ’ ಎಂದು ದೂರಿದರು.

‘ಚುನಾವಣೆ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆಯೇ ನಾನು ರೈತರ ಸಾಲವನ್ನು ಮನ್ನಾ ಮಾಡುವ ಕುರಿತು ಚಿಂತನೆ ನಡೆಸುತ್ತಿದ್ದೇನೆ. ಯಾವುದೇ ಕಾರಣಕ್ಕೂ ಈ ವಿಷಯದಲ್ಲಿ ಹಿಂದಿರುಗಿ ನೋಡುವ ಪ್ರಶ್ನೆಯೇ ಇಲ್ಲ. ಒಂದೊಮ್ಮೆ ರೈತರ ಸಾಲ ಮನ್ನಾ ಮಾಡಲು ಆಗದಿದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಈಗಾಗಲೇ ತಿಳಿಸಿದ್ದೇನೆ. ಸಾಧಕ– ಬಾಧಕಗಳ ಕುರಿತು ಅಧಿಕಾರಿಗಳೊಂದಿಗೆ ಸಮಗ್ರವಾಗಿ ಚರ್ಚಿಸಿ ಬುಧವಾರ ಈ ಕುರಿತ ಮಾರ್ಗಸೂಚಿ ಪ್ರಕಟಿಸುತ್ತೇನೆ’ ಎಂದು ಅವರು ಸ್ಪಷ್ಟಪಡಿಸಿದರು.

‘ರೈತರ ಬಗ್ಗೆ ತೀವ್ರ ಕಾಳಜಿ ವ್ಯಕ್ತಪಡಿಸುತ್ತಿರುವ ಬಿ.ಎಸ್‌. ಯಡಿಯೂರಪ್ಪ, ತಮ್ಮ ಆಡಳಿತದ ಅವಧಿಯಲ್ಲಿ ರೈತರ ಸಮಸ್ಯೆ ನಿವಾರಣೆಗೆ ಯಾವ ಕ್ರಮ ಕೈಗೊಂಡಿದ್ದಾರೆ, ಹೇಗೆ ಸ್ಪಂದಿಸಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಮೈತ್ರಿಕೂಟ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್‌ ಪಕ್ಷದ ಸಲಹೆ– ಸೂಚನೆ ಪಡೆದು ಮುಂದುವರಿಯುವ ಅನಿವಾರ್ಯತೆ ಇರುವುದರಿಂದ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಿದೆ’ ಎಂದರು.

‘ರೈತರು ಮಾತ್ರವಲ್ಲ. ನಾಡಿನ ಜನಸಾಮಾನ್ಯರ ಸಮಸ್ಯೆಗಳ ಕುರಿತು ವೈಯಕ್ತಿಕವಾಗಿ ಅಹವಾಲು ಸ್ವೀಕರಿಸಿರುವ ಮೊದಲ ಮುಖ್ಯಮಂತ್ರಿ ನಾನೇ. ಜನರು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆ ವಿಷಯದಲ್ಲಿ, ಬಿಜೆಪಿ ಮುಖಂಡರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಾನು ಇಂತಹ ವಿಷಯಗಳಲ್ಲಿ
ಸುಮ್ಮನೆ ಕೂರುವುದಿಲ್ಲ. ಸುಮ್ಮನೆ ಕೂರುವುದಕ್ಕೆ ನಾನು ಯಡಿಯೂರಪ್ಪ ಅಲ್ಲ’ ಎಂದು ಅವರು ಟೀಕಿಸಿದರು.

‘ಜನರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿರುವ ನಾನು ಯಡಿಯೂರಪ್ಪ ಅವರಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ’ ಎಂದ ಕುಮಾರಸ್ವಾಮಿ, ‘ರಾಜ್ಯದ ಆರೂವರೆ ಕೋಟಿ ಜನರ ಜವಾಬ್ದಾರಿ ನಿರ್ವಹಣೆಯ ಮುಖ್ಯಮಂತ್ರಿಗೆ ಯಾವ ರೀತಿ ಆಡಳಿತ ನೀಡಬೇಕು ಎಂಬುದು ಗೊತ್ತಿದೆ’ ಎಂದು ಹೇಳಿದರು.

‘ಸಚಿವ ಸಂಪುಟ ರಚನೆಯ ಬಿಕ್ಕಟ್ಟು ಮುಂದುವರಿದಿರುವ ಬಗ್ಗೆ ಸ್ಪಷ್ಟನೆ ನೀಡುವ ಸಂದರ್ಭ ಕಾಂಗ್ರೆಸ್‌ನ ಮುಲಾಜಿಗೆ ಬಿದ್ದಿದ್ದೇನೆ ಎಂದು ನೀಡಿರುವ ಹೇಳಿಕೆ ಕುರಿತು ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಮೈತ್ರಿಕೂಟ ಸರ್ಕಾರದಲ್ಲಿ ಖಾತೆ ಹಂಚಿಕೆ ಕುರಿತು ಎರಡೂ ಪಕ್ಷಗಳು ಸೌಹಾರ್ದವಾಗಿ ವರ್ತಿಸುವ ಅಗತ್ಯವಿದೆ. ಒಂದೆರಡು ದಿನಗಳಲ್ಲಿ ಎಲ್ಲವೂ ಸರಿಹೋಗಲಿದ್ದು, ನಾಡಿನ ಜನತೆ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ’ ಎಂದು ಅವರು ಮನವಿ ಮಾಡಿದರು.

ಕಲ್ಲಿದ್ದಲಿಗೆ ಮನವಿ: ಪ್ರಧಾನಿನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ರಾಜ್ಯದ ಅಭಿವೃದ್ಧಿಗೆ ಪೂರಕವಾದ ವಿಷಯಗಳ ಕುರಿತು ಸಂಕ್ಷಿಪ್ರವಾಗಿ ಚರ್ಚಿಸಲಾಗಿದೆ. ರಾಯಚೂರು ಮತ್ತು ಬಳ್ಳಾರಿ ಶಾಖೋತ್ಪನ್ನ ಘಟಕಗಳು ಕಲ್ಲಿದ್ದಲು ಕೊರತೆ ಎದುರಿಸುತ್ತಿದ್ದು, ಶೀಘ್ರದಲ್ಲೇ ರಾಜ್ಯಕ್ಕೆ ಕಲ್ಲಿದ್ದಲನ್ನು ಮಂಜೂರು ಮಾಡುವಂತೆ ಮನವಿ ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ವಾರದ ಗಡುವು: ಯಡಿಯೂರಪ್ಪ

ಬೆಂಗಳೂರು: ಒಂದು ವಾರದೊಳಗೆ ರೈತರ ಸಾಲ ಮನ್ನಾ ಮಾಡದಿದ್ದರೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ಸಾಲ ಮನ್ನಾ ಮಾಡಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡುವುದಾಗಿ ಕುಮಾರಸ್ವಾಮಿಯವರೇ ಹೇಳಿಕೊಂಡಿದ್ದಾರೆ. ಆದ್ದರಿಂದ, ಒಂದು ವಾರದವರೆಗೆ ಕಾದು ನೋಡುತ್ತೇವೆ. ಒಂದು ವಾರದ ಬಳಿಕ ರೈತರ ಪರ ಹೋರಾಟ ಮುಂದುವರಿಸಲು ರೂಪುರೇಷೆಸಿದ್ಧಪಡಿಸುವುದಾಗಿ ಅವರು ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಚುನಾವಣೆ ಮುಗಿದ ಬಳಿಕವೂ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಮುಂದುವರಿದಿದೆ. ಒಟ್ಟು ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕುಮಾರಸ್ವಾಮಿ ಸರ್ಕಾರ ಸಾಲ ಮನ್ನಾ ಮಾಡಿದ್ದರೆ, ಈ ರೈತರ ಆತ್ಮಹತ್ಯೆ ತಡೆಯಬಹುದಾಗಿತ್ತು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT