ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: 2021ಕ್ಕೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಪೂರ್ಣ?!

ಜಿಲ್ಲಾಸ್ಪತ್ರೆ, ವಿಮ್ಸ್‌ ನಡುವೆ ಮೂಲೆಗುಂಪಾದ ಉತ್ತಮ ಚಿಕಿತ್ಸೆಯ ಆಶಯ
Last Updated 22 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಬಳ್ಳಾರಿ ನಗರದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಾರ್ಯ ಶುರುವಾಗಿ ದಶಕ ಹತ್ತಿರವಾಗುತ್ತಿದೆ. ಆದರೂ ಆಸ್ಪತ್ರೆ ಸೌಕರ್ಯ ಜನರಿಗೆ ದೊರಕುವ ದಿನಗಳು ದೂರವೇ ಉಳಿದಿದೆ. ಜನರ ನಿರೀಕ್ಷೆ ಮತ್ತು ಆಡಳಿತದ ನಿಧಾನಗತಿ ಧೋರಣೆಯ ಮೇಲೆ ಈ ಬಾರಿ ನಮ್ಮ ನಗರದ ನಮ್ಮ ಧ್ವನಿಯಲ್ಲಿ ಬೆಳಕು ಚೆಲ್ಲಲಾಗಿದೆ. ಪ್ರತಿಕ್ರಿಯಿಸಿ: 94805 66086

ಬಳ್ಳಾರಿ: ಗಣಿ ನಗರಕ್ಕೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಸೌಕರ್ಯ!

ಇದು ಒಂಭತ್ತು ವರ್ಷದ ಹಿಂದೆ ಆರಂಭವಾದ ಕನಸು. ಅಂದಿನ ನಗರಕ್ಕೆ ಅಚ್ಚರಿ. ಇಂದಿಗೂ ಅಚ್ಚರಿಯೇ. ಏಕೆಂದರೆ ಆ ಕಸನು ಇನ್ನೂ ಈಡೇರಿಲ್ಲ. ಈಡೇರುವ ದಿನಗಳೂ ಹತ್ತಿರವಿಲ್ಲ.

ಈ ಕನಸು 2021ಕ್ಕೂ ಈಡೇರುವುದೂ ಅನುಮಾನ. ಹೀಗಾಗಿಯೇ ತುರ್ತು ಚಿಕಿತ್ಸೆ ಅಗತ್ಯವುಳ್ಳವರು ಬೆಂಗಳೂರು ಹಾದಿಯಲ್ಲೇ ಕೊನೆಯುಸಿರೆಳೆಯುವುದೂ ನಿಂತಿಲ್ಲ.

2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ ಚಿಗುರೊಡೆದ ಈ ಕನಸು ಬಲಿಯಲೇ ಇಲ್ಲ. ಬಲಿಯುವ ಹೊತ್ತಿಗೆ ಮೂರು ಸರ್ಕಾರಗಳು ಬದಲಾಗಿ ಒಂದು ದಶಕ ಪೂರ್ಣಗೊಳ್ಳುತ್ತಿದೆ. ಚಕ್ರ ತಿರುಗಿ, ಯಾವ ಸರ್ಕಾರದ ಅವಧಿಯಲ್ಲಿ ಆಸ್ಪತ್ರೆ ನಿರ್ಮಾಣ ಆರಂಭವಾಗಿತ್ತೋ ಅದೇ ಸರ್ಕಾರ ಮತ್ತೆ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಅದೇ ಕಾರಣಕ್ಕೆ ಎಂಬಂತೆ ಮತ್ತೆ ಆಸ್ಪತ್ರೆ ಪೂರ್ಣಗೊಳಿಸಬೇಕೆಂಬ ಆಗ್ರಹವೂ ಮತ್ತೆ ಶುರುವಾಗಿದೆ.

‘ಟಿ.ಬಿ ಸ್ಯಾನಿಟೋರಿಯಂ ಆಸ್ಪತ್ರೆ’ ಎಂದೇ ಜನಪ್ರಿಯವಾಗಿರುವ ನಗರದ ಕೌಲ್‌ಬಜಾರ್‌ ಪ್ರದೇಶದಲ್ಲಿರುವ ಸರ್ಕಾರಿ ವೆಲ್ಲೆಸ್ಲಿ ಎದೆರೋಗಗಳ ಆಸ್ಪತ್ರೆ ಆವರಣದಲ್ಲಿ ಆಸ್ಪತ್ರೆ ನಿರ್ಮಾಣ ಕಾರ್ಯ ಭರದಿಂದ ನಡೆದಿದೆ ಎಂದು ಹೇಳುವ ಸನ್ನಿವೇಶ ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಯಾವಾಗಲೂ ಇರಲಿಲ್ಲ ಎಂಬುದು ವಿಪರ್ಯಾಸ.

‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭವಾದ ಆಸ್ಪತ್ರೆ ನಿರ್ಮಾಣ ಕಾರ್ಯ ನಂತರದ ಸರ್ಕಾರಗಳ ಅವಧಿಯಲ್ಲಿ ವೇಗದಿಂದ ನಡೆಯಲಿಲ್ಲ’ ಎಂಬುದು ಆ ಪಕ್ಷದವರ ದೂರು.

ಈ ದೂರನ್ನು ಸಾರ್ವಜನಿಕ ಸಭೆಗಳಲ್ಲಿ ಅಂದಿನ ಮತ್ತು ಇಂದಿನ ಆರೋಗ್ಯ ಸಚಿವ ಬಿ.ಶ್ರೀರಾಮುಲು, ಶಾಸಕ ಜಿ.ಸೋಮಶೇಖರ ರೆಡ್ಡಿ, ಜಿ.ಜನಾರ್ದನರೆಡ್ಡಿ ಸೇರಿದಂತೆ ಎಲ್ಲ ಪ್ರಮುಖರೂ ನಿರಂತರವಾಗಿ ಹೇಳುತ್ತಲೇ ಬಂದಿದ್ದಾರೆ. ಆದರೆ ಯಾವ ಪ್ರಯೋಜನವೂ ಆಗಲಿಲ್ಲ.

‘ವಿರೋಧ ಪಕ್ಷಗಳಲ್ಲಿ ಕುಳಿತಿದ್ದಾಗಲೂ ಈ ಮುಖಂಡರು ದೂರುವುದನ್ನು ಬಿಟ್ಟು ಗಂಭೀರ ಪ್ರಯತ್ನ ಮಾಡಿದ್ದರೆ ಆಸ್ಪತ್ರೆ ಇಷ್ಟು ಹೊತ್ತಿಗೆ ನಿರ್ಮಾಣವಾಗಿರುತ್ತಿತ್ತು’ ಎಂಬ ಅಸಮಾಧಾನವೂ ಸಾರ್ವಜನಿಕರಲ್ಲಿದೆ.

ಮೂರು ಜಿಲ್ಲೆಗೆ ಅನುಕೂಲ
ಉನ್ನತ ಮಟ್ಟದ ಚಿಕಿತ್ಸೆ ಪಡೆಯಲು ಬೆಂಗಳೂರಿಗೆ ತೆರಳಬೇಕಾದ ಸನ್ನಿವೇಶದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಬಳ್ಳಾರಿಯಷ್ಟೇ ಅಲ್ಲದೆ, ನೆರೆಯ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಜನರಿಗೂ ಅನುಕೂಲ ಕಲ್ಪಿಸಲಿದೆ. ರಾಯಚೂರಿನಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಇದ್ದರೂ, ಗಡಿಭಾಗದಲ್ಲಿರುವ ಆ ಜಿಲ್ಲೆಯ ಜನರಿಗೆ ಬಳ್ಳಾರಿಯೇ ಹತ್ತಿರ.

ಆಂಧ್ರ ಪ್ರದೇಶದ ಹಲವು ಜಿಲ್ಲೆಗಳ ನೂರಾರು ರೋಗಿಗಳು ಈಗಲೂ ವಿಮ್ಸ್‌ ಆಸ್ಪತ್ರೆಯನ್ನೇ ನೆಚ್ಚಿಕೊಂಡಿದ್ದಾರೆ. ಅವರಿಗೂ ಕೂಡ ಹೊಸ ಆಸ್ಪತ್ರೆಯಿಂದ ಹೆಚ್ಚಿನ ಅನುಕೂಲವಾಗಲಿದೆ.

ಹೆಲಿಪ್ಯಾಡ್‌ ಸೌಕರ್ಯ: ತುರ್ತು ಸಂದರ್ಭಗಳಲ್ಲಿ ವಿಶೇಷ ತಜ್ಞರು ದೂರದ ನಗರಗಳಿಂದ ಬಂದು ಹೋಗಲು ಅನುಕೂಲವಾಗಲೆಂದೇ ಆಸ್ಪತ್ರೆ ಮೇಲ್ಭಾಗದಲ್ಲಿ ಹೆಲಿಪ್ಯಾಡ್‌ ನಿರ್ಮಿಸುವ ಉದ್ದೇಶವೂ ಆಗ ಇತ್ತು. ಆದರೆ ಈಗ ಇಲ್ಲ. ಹೆಚ್ಚಿನ ಅನುದಾನ ಮತ್ತು ಸರ್ಕಾರದ ಆದೇಶ ಬಂದರೆ ಮಾತ್ರ ನಿರ್ಮಿಸಲಾಗುವುದು ಎಂದು ಆಸ್ಪತ್ರೆ ನಿರ್ಮಾಣ ಹೊಣೆ ಹೊತ್ತಿರುವ ಹಯಗ್ರೀವ ಕನ್‌ಸ್ಟ್ರಕ್ಷನ್‌ ಸಂಸ್ಥೆಯ ಮೂಲಗಳು ತಿಳಿಸಿವೆ.

ಅಪಘಾತ ಆಸ್ಪತ್ರೆ ಪೂರ್ಣ!
ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ, ಅದಕ್ಕಿಂತಲೂ ತಡವಾಗಿ ಆರಂಭವಾದ ಸುವಿಶೇಷ ಅಪಘಾತ ಆಸ್ಪತ್ರೆ– ಸೂಪರ್‌ ಸ್ಪೆಷಾಲಿಟಿ ಟ್ರೊಮಾ ಬ್ಲಾಕ್‌ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿರುವುದು ವಿಶೇಷ.

ಕೇಂದ್ರ ಸರ್ಕಾರದ ಅನುದಾನದಲ್ಲಿ ಆರಂಭವಾದ ಈ ಆಸ್ಪತ್ರೆ ನಿರ್ಮಾಣ ಕಾರ್ಯ ವೇಗದಿಂದ ನಡೆದು ಪೂರ್ಣಗೊಂಡಿದೆ. ಚಿಕಿತ್ಸಾ ಪರಿಕರಗಳೂ ಕೂಡ ಸಿದ್ಧವಿದ್ದು, ಕಟ್ಟಡದ ಒಳಗೆ ಕೆಲವು ಕೆಲಸಗಳು ಪೂರ್ಣಗೊಳ್ಳಬೇಕಾಗಿವೆ. ಪೂರ್ಣಗೊಳ್ಳಲು ಕನಿಷ್ಠ ಒಂದೂವರೆ ತಿಂಗಳು ಬೇಕಾಗಬಹುದು. ನಂತರ ವಿಮ್ಸ್‌ಗೆ ಹಸ್ತಾಂತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

*
ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ಬಿಜೆಪಿ ಸರ್ಕಾರದ ಕನಸು. ಈಗ ನಮ್ಮ ಪಕ್ಷವೇ ಅಧಿಕಾರದಲ್ಲಿದೆ. ಆಸ್ಪತ್ರೆ ನಿರ್ಮಾಣ ಕಾರ್ಯ ಚುರುಕುಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಗಿದೆ
–ಜಿ.ಸೋಮಶೇಖರ ರೆಡ್ಡಿ, ಶಾಸಕ

*
ಕೊಳೆತು ನಾರುವ ವಿಮ್ಸ್ ಆಸ್ಪತ್ರೆಯ ಅವಲಂಬನೆಯಿಂದ ಯಾವಾಗ ಬಿಡುಗಡೆ ಸಿಗುತ್ತದೊ ಎಂದು ಜಿಲ್ಲೆಯ ಜನ ಕಾಯುತ್ತಿದ್ದಾರೆ.
–ಜನಾರ್ದನ, ಕೊಳಗಲ್ಲು

*
ತೀವ್ರವಾಗಿ ಗಾಯಗೊಂಡವರು, ಗಂಭೀರ ಕಾಯಿಲೆಯುಳ್ಳವರು ಬೆಂಗಳೂರಿಗೆ ಸಾಗಿಸುವಾಗಲೇ ಸಾಯುವಂಥ ಪರಿಸ್ಥಿತಿ ಕೊನೆಯಾಗಬೇಕು
–ಕುಮಾರ್‌, ಬಂಡಿಹಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT