ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿಗೆ ಬಂತು ಸೂಪರ್‌ ಸ್ಪೆಷಾಲಿಟಿ ಟ್ರಾಮಾ ಸೆಂಟರ್‌

200 ಹಾಸಿಗೆಗಳ ಆಸ್ಪತ್ರೆಯಲ್ಲಿ ದಿನದ 24 ಗಂಟೆ ವೈದ್ಯರ ಸೇವೆ
Last Updated 11 ಫೆಬ್ರುವರಿ 2022, 13:20 IST
ಅಕ್ಷರ ಗಾತ್ರ

ಬಳ್ಳಾರಿ: ಕೇಂದ್ರ– ರಾಜ್ಯ ಸರ್ಕಾರದ 60:40 ಅನುದಾನದಲ್ಲಿ ಬಳ್ಳಾರಿಯಲ್ಲಿ ನಿರ್ಮಿಸಲಾಗಿರುವ 200 ಹಾಸಿಗೆಗಳ ’ಸೂಪರ್‌ ಸ್ಪೆಷಾಲಿಟಿ ಟ್ರಾಮಾ ಕೇರ್ ಸೆಂಟರ್‌‘ ಶನಿವಾರ (ಫೆ.12) ಬೆಳಿಗ್ಗೆ 11.30ಕ್ಕೆ ಉದ್ಘಾಟನೆಯಾಗಲಿದೆ.

₹ 200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಟ್ರಾಮಾ ಕೇರ್‌ ಸೆಂಟರ್‌ ಹಿಂದೆಯೇ ಉದ್ಘಾಟನೆ ಆಗಬೇಕಿತ್ತು. ಕೋವಿಡ್‌ ಆಸ್ಪತ್ರೆಯಾಗಿ ಪರಿವರ್ತಿಸಿದ್ದರಿಂದ ತಡವಾಗಿ ಆರಂಭವಾಗುತ್ತಿದೆ ಎಂದು ವಿಮ್ಸ್‌ ನಿರ್ದೇಶಕ ಡಾ.ಗಂಗಾಧರಗೌಡ ತಿಳಿಸಿದರು.

ಸಂಪೂರ್ಣ ಸೆಂಟ್ರಲ್‌ ಹವಾನಿಯಂತ್ರಿತ ಸೌಲಭ್ಯ ಹೊಂದಿರುವ ಟ್ರಾಮಾ ಕೇರ್‌ ಸೆಂಟರ್‌ನ ತೀವ್ರ ನಿಗಾ ಘಟಕದಲ್ಲಿ 145 ಮತ್ತು 55 ಸಾಮಾನ್ಯ ಹಾಸಿಗೆಗಳಿವೆ. 8 ಆಪರೇಷನ್‌ ಥಿಯೇಟರ್‌ಗಳಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾದವರ ಮೇಲೆ 48 ಗಂಟೆಗಳ ಕಾಲ ನಿಗಾ ವಹಿಸಲು ಆಪರೇಷನ್‌ ಥಿಯೇಟರ್ ಎದುರಿನಲ್ಲೇ ಪ್ರತ್ಯೇಕ ವಾರ್ಡ್‌ ಇದೆ. ಎರಡು ದಿನಗಳ ಬಳಿಕ ಅವರನ್ನು ಬೇರೆ ವಾರ್ಡ್‌ಗಳಿಗೆ ಸ್ಥಳಾಂತರಿಸಲಾಗುತ್ತದೆ.

ಟ್ರಾಮಾ ಸೆಂಟರ್‌ನಲ್ಲಿ ನ್ಯೂರೊ, ಪ್ಲ್ಯಾಸ್ಟಿಕ್‌, ಆರ್ಥೋಪೆಡಿಕ್‌, ರೇಡಿಯಾಲಜಿ ಅನೆಸ್ತೇಷಿಯಾ, ಸಿ.ಟಿ ಸ್ಕ್ಯಾನ್‌, ಲ್ಯಾಬೊರೇಟರಿ ವಿಭಾಗಗಳಿದ್ದು, ಎಂಆರ್‌ಐ ಸೌಲಭ್ಯಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ. ಎಂಆರ್‌ಐ ವಿಭಾಗಕ್ಕೂ ಸ್ಥಳ ನಿಗದಿಪಡಿಸಲಾಗಿದೆ ಎಂದು ಡಾ. ಗಂಗಾಧರಗೌಡ ವಿವರಿಸಿದರು.

ದಿನದ 24 ಗಂಟೆ ವೈದ್ಯರ ಸೇವೆ ಟ್ರಾಮಾ ಸೆಂಟರ್‌ನಲ್ಲಿ ಲಭ್ಯವಿರುತ್ತದೆ. ನಾಲ್ವರು ನರರೋಗ ತಜ್ಞರು, ಮೂವರು ಪ್ಲ್ಯಾಸ್ಟಿಕ್‌ ಸರ್ಜನ್‌ಗಳು, ತಲಾ ಐವರು ಮೂಳೆ ತಜ್ಞರನ್ನು ಒಳಗೊಂಡಿರುವ 3 ಆರ್ಥೋ ಯೂನಿಟ್‌ ಇರಲಿವೆ. 70 ಮಂದಿ ನರ್ಸ್‌ಗಳ ಸೇವೆ ಲಭ್ಯವಿರಲಿದೆ. ರಕ್ತ ಬ್ಯಾಂಕ್‌ಗೆ ಇನ್ನೂ ಅನುಮತಿ ಸಿಕ್ಕಿಲ್ಲವಾದರೂ, ತುರ್ತು ಶಸ್ತ್ರಚಿಕಿತ್ಸೆಗೆ ಅಗತ್ಯವಿರುವ ರಕ್ತವನ್ನು ಟ್ರಾಮಾ ಕೇರ್‌ ಸೆಂಟರ್‌ನಲ್ಲಿ ಸಂಗ್ರಹಿಸುವ ವ್ಯವಸ್ಥೆ ಇದೆ.

ಅಪಘಾತಕ್ಕೊಳಗಾಗಿ, ಸೂಕ್ಷ್ಮ ಶಸ್ತ್ರಚಿಕಿತ್ಸೆ ಅಗತ್ಯವಿರುವ ಈ ಭಾಗದ ಜನ ಇದುವರೆಗೆ ಬೆಂಗಳೂರು ಅಥವಾ ಹೈದರಾಬಾದ್‌ಗೆ ಹೋಗಬೇಕಿತ್ತು. ಟ್ರಾಮಾ ಕೇರ್‌ ಸೆಂಟರ್‌ ಆರಂಭದಿಂದ ಸಮೀಪದಲ್ಲೇ ಉತ್ತಮ ಚಿಕಿತ್ಸೆ ದೊರೆಯಲಿದೆ. ಬಳ್ಳಾರಿ, ಚಿತ್ರದುರ್ಗ, ರಾಯಚೂರು, ವಿಜಯನಗರ, ಕೊಪ್ಪಳ, ನೆರೆಯ ಆಂಧ್ರ ಪ್ರದೇಶದ ಅನಂತಪುರ ಮತ್ತು ಕರ್ನೂಲ್‌ ಜಿಲ್ಲೆಗಳ ರೋಗಿಗಳಿಗೆ ಇನ್ನು ಮುಂದೆ ಶಸ್ತ್ರಚಿಕಿತ್ಸೆ ಸಿಗಲಿದೆ.

ಟ್ರಾಮಾ ಕೇರ್‌ ಸೆಂಟರ್‌ ಅನ್ನು ಸಾರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಉದ್ಘಾಟಿಸಲಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್‌, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್‌ ಕುಮಾರ್‌ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT