ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನೇ ನಿನ್ನ ಅಮ್ಮ ಎಂದಿದ್ದರು: ಮಹಿಪಾಲ್‌

ಅಗಲಿದ ಸುಷ್ಮಾ: ಬಿಜೆಪಿ ಮುಖಂಡರ ಶ್ರದ್ಧಾಂಜಲಿ
Last Updated 7 ಆಗಸ್ಟ್ 2019, 13:44 IST
ಅಕ್ಷರ ಗಾತ್ರ

ಬಳ್ಳಾರಿ: ‘ನನ್ನ ತಾಯಿ ಬಸವರಾಜೇಶ್ವರಿಯವರು ನಿಧನರಾದ ಕೆಲ ದಿನಗಳ ಬಳಿಕ ಬಳ್ಳಾರಿಗೆ ಬಂದಿದ್ದ ಸುಷ್ಮಾ ಸ್ವರಾಜ್‌ ಅವರ ಬಳಿ, ನಾನು ನನ್ನ ತಾಯಿಯನ್ನು ಕಳೆದುಕೊಂಡೆ ಎಂದು ದುಃಖಿಸಿದ್ದೆ. ಆಗ ಸಾಂತ್ವನ ಹೇಳಿದ್ದ ಅವರು, ಹಾಗೆಂದುಕೊಳ್ಳಬೇಡಿ. ಅಮ್ಮನಾಗಿ ನಾನಿದ್ದೀನಲ್ಲಾ ಎಂದಿದ್ದರು. ಆ ತಾಯಿ ಗುಣವೇ ನನ್ನನ್ನು ಬಿಜೆಪಿ ಸೇರುವಂತೆ ಪ್ರೇರೇಪಿಸಿತ್ತು’ ಎಂದು ಬಿಐಟಿಎಂ ಮುಖ್ಯಸ್ಥರಾದ ಎಸ್‌ಜೆವಿ ಮಹಿಪಾಲ್‌ ಸ್ಮರಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ‘1996 ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರುವಂತೆ ಕೇಳಿದ್ದರು. ಅಂದಿನ ಪ್ರಧಾನಿ ವಾಜಪೇಯಿ ಅವರ ಮನೆಗೆ ಹೋಗಿ ಅನುಮತಿ ಪಡೆದರು. ಪ್ರಧಾನಿಯೊಬ್ಬರು ಕರೆ ಮಾಡಿ ಪಕ್ಷಕ್ಕೆ ಸೇರಿಕೊಳ್ಳಿ ಎಂದು ಹೇಳಿದರೆ ಅದಕ್ಕಿಂತ ಹೆಮ್ಮೆಯ ವಿಷಯವುಂಟೆ? ಹಾಗಾಗಿಯೇ ಪಕ್ಷ ಸೇರಿದೆ’ ಎಂದು ಅವರು ನೆನಪಿಸಿಕೊಂಡರು.

ಪವಾಡ:‘1999ರ ಲೋಕಸಭೆ ಚುನಾವಣೆಯಲ್ಲಿ ಸುಷ್ಮಾ ಅವರು ಬಳ್ಳಾರಿಯಿಂದ ಸ್ಪರ್ಧಿಸಿದ್ದು ಒಂದು ದೊಡ್ಡ ಪವಾಡ’ ಎಂದು ಮುಖಂಡ ಇಂದುಶೇಖರ್‌ ಬಣ್ಣಿಸಿದರು. ‘ಎರಡು ದಶಕಗಳ ಕಾಲ ಅವರೊಂದಿಗಿನ ಒಡನಾಟ ಹೆಮ್ಮೆ ತಂದಿದೆ. ಎಂದಿಗೂ ಅವರು ನಮ್ಮೊಂದಿಗೆ ರಾಜಕೀಯ ಮಾತನಾಡುತ್ತಿರಲಿಲ್ಲ. ಕುಟುಂಬದ ಕ್ಷೇಮ ಸಮಾಚಾರ ವಿನಿಮಯವಾಗುತ್ತಿತ್ತು. ಪತ್ನಿ ಪಾರ್ವತಿ ಕೂಡ ಅವರಿಂದ ಪ್ರಭಾವಿತರಾಗಿದ್ದರು’ ಎಂದರು.

ಸರಳ ಜೀವನಶೈಲಿ: ನಂತರ ಮಾತನಾಡಿದ ವೈದ್ಯ ಡಾ.ಬಿ.ಕೆ.ಸುಂದರ್‌, ‘ನಮ್ಮ ಅವರ ಒಡನಾಟ ವೈಯಕ್ತಿಕವಾದದ್ದು, ಪ್ರತಿ ವರ್ಷ ಅವರು ನಮ್ಮ ಮನೆಗೆ ವರಮಹಾಲಕ್ಷ್ಮಿ ಹಬ್ಬಕ್ಕೆ ಬರ್ತಿದ್ದರು. ಅವರಿಂದ ನಾವೂ ಪ್ರಸಿದ್ಧಿಗೆ ಬಂದೆವು. ಮಹಾ ರಾಜಕೀಯ ಮುತ್ಸದ್ದಿಯಾಗಿದ್ದ ಅವರು ಸರಳ ಜೀವಿಯಾಗಿದ್ದರು’ ಎಂದು ಸ್ಮರಿಸಿದರು.

‘ಲೋಕಸಭೆ ಚುನಾವಣೆಯಲ್ಲಿ ಅದ್ಭುತವಾಗಿ ಕನ್ನಡದಲ್ಲಿ ಭಾಷಣ ಮಾಡಿದ್ದರು. ಮೂತ್ರಪಿಂಡ ಕಸಿ ಬಳಿಕ ಅವರಿಗೆ ಸೋಂಕು ಉಂಟಾಗಿತ್ತು. ಮೂರು ತಿಂಗಳ ಹಿಂದೆ ಭೇಟಿಯಾಗಿದ್ದಾಗ ಅನಾರೋಗ್ಯ ದ ಬಗ್ಗೆ ಹೇಳಿಕೊಂಡಿದ್ದರು. ಹಬ್ಬ ಮೂರು ದಿನವಿರುವಂತೆ ಅವರು ನಿಧನರಾಗಿರುವುದು ತೀವ್ರ ವಿಷಾದ ತಂದಿದೆ’ ಎಂದರು.

‘ಸುಷ್ಮಾ ಅವರು ವಿದೇಶಾಂಗ ಸಚಿವರಾದಾಗ ಬಳ್ಳಾರಿಗೆ ಎಫ್ ಎಂ ರೇಡಿಯೋ ಕೇಂದ್ರಕ್ಕೆ ಅನುಮೋದನೆ ಕೊಟ್ಟರು. ಆರೋಗ್ಯ ಸಚಿವರಗಿದ್ದಾಗ ದೊಡ್ಡ ಪ್ರಮಾಣದ ಆರೋಗ್ಯ ಶಿಬಿರವನ್ನು ಮೂರು ದಿನಗಳ ಕಾಲ ಏರ್ಪಡಿಸಿದ್ದರು’ ಎಂದು ಗುರುಲಿಂಗನಗೌಡ ಸ್ಮರಿಸಿದರು.
‘ಸುಷ್ಮಾ ಅವರು ದೇಶ ಕಂಡ ಅತ್ಯಂತ ಪ್ರಭಾವಿಯಾದ ಎರಡನೇ ನಾಯಕಿ. ಇಂದಿರಾಗಾಂಧಿ ಬಳಿಕ ವಿದೇಶಾಂಗ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿದ್ದರು’ ಎಂದು ಎಚ್.ಹನುಮಂತಪ್ಪ ಅಭಿಪ್ರಾಯಪಟ್ಟರು.

‘ಜಿಲ್ಲೆಯಲ್ಲಿ ಸಮುದಾಯ ಆರೋಗ್ಯ ಘಟಕಗಳು ಹೆಚ್ಚಾಗಲು ಸುಷ್ಮಾ ಅವರೇ ಕಾರಣ’ ಎಂದು ವಿರೂಪಾಕ್ಷಗೌಡ ಕೃತಜ್ಞತೆ ವ್ಯಕ್ತಪಡಿಸಿದರು.

‘ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಸುಷ್ಮಾ ಅವರ ಭಾಷಣವನ್ನು ಅರ್ಥಮಾಡಿಕೊಳ್ಳುವ ಸಲುವಾಗಿಯೇ ಹಿಂದಿ ಕಲಿತೆ’ ಎಂದು ಶಶಿಕಲಾ ಕಣ್ಣೀರಿಟ್ಟರು.

ತಿಮ್ಮಾರೆಡ್ಡಿ, ಎಸ್.ಪಕ್ಕೀರಪ್ಪ ಮಾತನಾಡಿದರು. ಶ್ರೀನಿವಾಸ ಮೋತ್ಕರ್, ಮುರಾರಿಗೌಡ, ವೀರಶೇಖರ ರೆಡ್ಡಿ, ಪಾರ್ವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT