ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿತೀಯ ಪಿಯುಸಿಯಲ್ಲಿ ದರ್ಜಿಯ ಮಗಳು ತಾಲ್ಲೂಕಿಗೆ ಮೊದಲು

ಇಟ್ಟಿಗಿ ವಿದ್ಯಾರ್ಥಿನಿ ಚೈತ್ರಾಗೆ ಶೇ 97.66 ಅಂಕ
Last Updated 26 ಏಪ್ರಿಲ್ 2019, 13:18 IST
ಅಕ್ಷರ ಗಾತ್ರ

ಹೂವಿನಹಡಗಲಿ: ಬಟ್ಟೆ ಹೊಲಿದು ಬದುಕಿನ ಬಂಡಿ ಸಾಗಿಸುವ ಬಡ ದರ್ಜಿಯ ಮಗಳು ದ್ವಿತೀಯ ಪಿ.ಯು.ಸಿ.ಯ ಕಲಾ ವಿಭಾಗದಲ್ಲಿ ತಾಲ್ಲೂಕಿಗೆ ಮೊದಲಿಗಳಾಗಿದ್ದಾಳೆ.

ತಾಲ್ಲೂಕಿನ ಇಟ್ಟಿಗಿ ಗ್ರಾಮದ ಕುರಿಯವರ ಚೈತ್ರಾ 586 (ಶೇ 97.66) ಅಂಕ ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಇಟ್ಟಿಗಿ ಗ್ರಾಮದಲ್ಲಿ ಟೈಲರ್ ವೃತ್ತಿ ನಡೆಸುವ ಕುರಿಯವರ ನಿಂಗಪ್ಪ, ಲತಾ ದಂಪತಿಯ ಪುತ್ರಿ ಚೈತ್ರಾ ಗರಿಷ್ಠ ಅಂಕ ಪಡೆಯುವ ಮೂಲಕ ಶೈಕ್ಷಣಿಕ ಸಾಧನೆಗೆ ಬಡತನ ಅಡ್ಡಿಯಲ್ಲ ಎಂಬುದನ್ನು ನಿರೂಪಿಸಿದ್ದಾರೆ.

ಇಟ್ಟಿಗಿಯ ಶ್ರೀ ಸಿದ್ದೇಶ್ವರ ಜಗದ್ಗುರು ಪದವಿಪೂರ್ವ ಕಾಲೇಜಿನಲ್ಲಿ ಅಭ್ಯಾಸ ಮಾಡಿರುವ ಚೈತ್ರಾ ಕನ್ನಡದಲ್ಲಿ 94, ಸಂಸ್ಕೃತ 98, ಐಚ್ಛಿಕ ಕನ್ನಡ 99, ಇತಿಹಾಸ 99, ರಾಜ್ಯಶಾಸ್ತ್ರ 97, ಶಿಕ್ಷಣದಲ್ಲಿ 99 ಅಂಕ ಗಳಿಸಿದ್ದಾರೆ. ಬರೀ ಒಂದು ಅಂಕದಿಂದ ಅವರು 10ನೇ ರ್‍ಯಾಂಕ್‌ನಿಂದ ವಂಚಿತವಾಗಿದ್ದಾರೆ.

ನಿಂಗಪ್ಪನವರು ಬಟ್ಟೆ ಹೊಲಿಯುವ ಕಾಯಕದಿಂದ ಕುಟುಂಬ ನಿರ್ವಹಣೆಯ ಜತೆಗೆ ತನ್ನ ಮೂವರು ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ಸ್ಥಳೀಯ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಲ್ಲಿ ಸಾಲ ಮಾಡಿಯೂ ಮಕ್ಕಳ ಶಾಲಾ ಕಾಲೇಜು ಶುಲ್ಕ, ಪುಸ್ತಕಗಳಿಗೆ ಹಣ ಹೊಂದಿಸಿಕೊಟ್ಟಿದ್ದಾರೆ. ಹಿರಿಯ ಪುತ್ರಿ ಚೈತ್ರಾ ತಂದೆ–ತಾಯಿಯ ನಿರೀಕ್ಷೆ ಹುಸಿಗೊಳಿಸದಂತೆ ಶೈಕ್ಷಣಿಕ ಸಾಧನೆ ಮಾಡಿ ಹೆತ್ತವರಿಗೆ ಕೀರ್ತಿ ತಂದಿದ್ದಾರೆ.

ಪ್ರೌಢಶಾಲೆಯವರೆಗೆ ಸರ್ಕಾರಿ ಕನ್ನಡ ಶಾಲೆಯಲ್ಲೇ ಓದಿರುವ ವಿದ್ಯಾರ್ಥಿನಿ ಟ್ಯೂಷನ್‌ಗೆ ಹೋಗದೇ ಆಧುನಿಕ ಸೌಕರ್ಯಗಳ ನೆರವಿಲ್ಲದೇ ಈ ಸಾಧನೆ ಮಾಡಿದ್ದಾರೆ.

‘ಪದವಿ ಮುಗಿಸಿ ಯಾವುದಾದರೂ ಸರ್ಕಾರಿ ಕೆಲಸಕ್ಕೆ ಸೇರಲು ಬಯಸಿದ್ದೇನೆ. ನಮ್ಮೂರಿನ ಸಿದ್ದೇಶ್ವರ ಎಂಬುವರು ಕಳೆದ ವರ್ಷ ಕೆ.ಎ.ಎಸ್‌.ನಲ್ಲಿ ಉತ್ತೀರ್ಣರಾಗಿ ತಹಶೀಲ್ದಾರರಾಗಿದ್ದಾರೆ. ಅವರಂತೆ ನಾನೂ ಓದಿ ತಹಶೀಲ್ದಾರ್ ಆಗಬೇಕೆಂಬ ಗುರಿ ಹೊಂದಿದ್ದೇನೆ. ಮುಂದೆ ಕೆಲಸ ಸಿಕ್ಕಲ್ಲಿ ತಂಗಿಯರಿಗೂ ಉತ್ತಮ ಶಿಕ್ಷಣ ಕೊಡಿಸಿ, ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವುದು ನನ್ನ ಮೊದಲ ಆದ್ಯತೆ’ ಎಂದು ಚೈತ್ರಾ ತಿಳಿಸಿದರು.

‘ಮಗಳ ಸಾಧನೆ ಕಂಡು ಸಂತೋಷವಾಗಿದೆ. ಜಾಣೆಯಿರುವ ಮಗಳು ಚೆನ್ನಾಗಿ ಓದಲಿ ಅಂತಾ ನಮ್ಮ ಕಷ್ಟಗಳನ್ನು ನುಂಗಿಕೊಂಡು ಅವಳ ಓದಿಗೆ ನೆರವಾಗಿದ್ದೇವೆ. ಸಾಲ ಮಾಡಿಯಾದರೂ ಆಕೆಯನ್ನು ಓದಿಸಲು ನಿರ್ಧರಿಸಿದ್ದೇವೆ’ ಎಂದು ಪೋಷಕರಾದ ನಿಂಗಪ್ಪ, ಲತಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT