ಮಳೆಗಾಗಿ ದೇವಿಗೆ ತನುಕೊಡ ಸಮರ್ಪಣೆ

ಭಾನುವಾರ, ಜೂಲೈ 21, 2019
22 °C

ಮಳೆಗಾಗಿ ದೇವಿಗೆ ತನುಕೊಡ ಸಮರ್ಪಣೆ

Published:
Updated:
Prajavani

ಹೊಸಪೇಟೆ: ಮಳೆ, ಬೆಳೆ ಸಮೃದ್ಧವಾಗಲೆಂದು ಪ್ರಾರ್ಥಿಸಿ ನಗರದ ಏಳು ಕೇರಿ ಜನ ಮಂಗಳವಾರ ಊರಮ್ಮ ದೇವಿಗೆ ತನುಕೊಡ ಸಮರ್ಪಿಸಿದರು.

ತಾಲ್ಲೂಕಿನ ರಾಜಪುರದಿಂದ ಕೊಡಗಳಲ್ಲಿ ತೀರ್ಥ ತಂದು, ಚಿತ್ರಕೇರಿಯ ಊರಮ್ಮ ದೇವಿ ದೇವಸ್ಥಾನಕ್ಕೆ ಬಂದು ಸಮರ್ಪಿಸಿದರು. ನಂತರ ವಿಶೇಷ ಪೂಜೆ ನೆರವೇರಿಸಿ, ಎಡೆ ಅರ್ಪಿಸಿದರು. ಎಲ್ಲ ಏಳು ಕೇರಿಯ ಜನ ಬಂದು ದೇವಿಯ ದರ್ಶನ ಪಡೆದರು. ಇದರಿಂದಾಗಿ ದಿನವಿಡೀ ಚಿತ್ರಕೇರಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.

ಬಳಿಕ ಉತ್ಸವ ಮೂರ್ತಿಯೊಂದಿಗೆ ವಾಲ್ಮೀಕಿ ವೃತ್ತ, ರಾಮಾ ಟಾಕೀಸ್‌, ಮೂರಂಗಡಿ ವೃತ್ತ, ಮಹಾತ್ಮ ಗಾಂಧಿ ವೃತ್ತ, ಹಂಪಿ ರಸ್ತೆ ಮೂಲಕ ಹಾದು ಅನಂತಶಯನಗುಡಿಗೆ ಹೋದರು. ಅಲ್ಲಿ ವಿಶೇಷ ಪೂಜೆ ಮಾಡಿದ ನಂತರ ಸ್ಥಳೀಯರು ಕೊಂಡನಾಯಕನಹಳ್ಳಿಗೆ ತೆಗೆದುಕೊಂಡು ಹೋದರು. ಆ ಗ್ರಾಮಸ್ಥರು ಗಾಳೆಮ್ಮನಗುಡಿಗೆ ಹೋಗಿ ಗಾಳೆಮ್ಮದೇವಿಗೆ ತನುಕೊಡ ಅರ್ಪಿಸಿದರು. 

ತನುಕೊಡ ಮೆರವಣಿಗೆಯಲ್ಲಿ ಏಳುಕೇರಿಯ ಜನರು ಸೇರಿದಂತೆ ವಿವಿಧ ಭಾಗದ ನೂರಾರು ಜನ ಪಾಲ್ಗೊಂಡಿದ್ದರು. ಮೆರವಣಿಗೆ ಹಾದು ಹೋಗಿದ್ದರಿಂದ ಕೆಲಕಾಲ ಪ್ರಮುಖ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.

‘ಊರಲ್ಲಿ ಉತ್ತಮ ಮಳೆಯಾಗಿ ಸಮೃದ್ಧಿ ಇರಬೇಕು. ಶಾಂತಿ ನೆಲೆಸಬೇಕು. ಯಾವುದೇ ರೀತಿಯ ರೋಗ–ರುಜಿನಗಳು ಬರಬಾರದು ಎಂದು ಊರಮ್ಮ ದೇವಿಗೆ ತನುಕೊಡ ಅರ್ಪಿಸಲಾಗುತ್ತದೆ. ಹಿರಿಯರಿಂದ ಆರಂಭವಾದ ಈ ಆಚರಣೆ ಅನೇಕ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ’ ಎಂದು ಮುಖಂಡ ಗೋಸಲ ಭರಮಪ್ಪ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !