ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯಜೀವಿಗಳ ಸಂರಕ್ಷಣೆಗೆ ಸಮರ್ಪಣೆ

Last Updated 14 ಮಾರ್ಚ್ 2022, 8:34 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಬಾಚಿಗೊಂಡನಹಳ್ಳಿಯ ಯುವಕ ಮಹೇಶ್ವರ ಹುರುಕಡ್ಲಿ ಅವರು ವನ್ಯಜೀವಿಗಳ ಸಂರಕ್ಷಣೆಗೆ ಸಂಪೂರ್ಣ ಸಮರ್ಪಿಸಿಕೊಂಡಿದ್ದಾರೆ.

ಎಲ್ಲೇ ಪಕ್ಷಿ, ಪ್ರಾಣಿಗಳು ಗಾಯಗೊಂಡರೆ, ನೀರಿಲ್ಲದೇ ಪರಿತಪಿಸುತ್ತಿದ್ದರೆ ತಕ್ಷಣವೇ ಅವುಗಳ ನೆರವಿಗೆ ಧಾವಿಸುತ್ತಾರೆ. ತುಂಗಭದ್ರಾ ಹಿನ್ನೀರಿನ ಗ್ರಾಮಗಳಿಗೆ ವಲಸೆ ಬರುವ ದೇಶ ವಿದೇಶಗಳ ಅಪರೂಪದ ಪಕ್ಷಿಗಳನ್ನು ಬೇಟೆಗಾರರಿಂದ ರಕ್ಷಿಸುತ್ತಾರೆ. ಉಡ, ನರಿ, ಮೊಲ, ಕಬ್ಬೆಕ್ಕು ಮುಂತಾದವುಗಳ ಬೇಟೆ ತಡೆಯುತ್ತಾರೆ.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಬಿ.ಎಸ್ಸಿ, ಬಿ.ಇಡಿ ಪದವೀಧರರು. ಶಾಲಾ ಹಂತದಲ್ಲೇ ಪರಿಸರ, ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ತಂದೆಯಿಂದ ತಿಳಿದುಕೊಂಡಿದ್ದರು. ಅಂದಿನಿಂದ ಅವುಗಳ ಸಂರಕ್ಷಣೆಗೆ ಅವರ ಮಟ್ಟದಲ್ಲಾದ ಕೆಲಸ ಸದ್ದಿಲ್ಲದೇ ಮಾಡುತ್ತಿದ್ದಾರೆ.

ಸ್ನೇಹಿತರು, ಬಂಧುಗಳ ಜನ್ಮದಿನಾಚರಣೆ, ಶುಭ ಸಮಾರಂಭಗಳಲ್ಲಿ ಸಸಿಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಪ್ರತಿ ವರ್ಷ ಮಳೆಗಾಲದ ಆರಂಭದಲ್ಲಿ ಶಾಲಾ ಮಕ್ಕಳಿಂದ ಬೀಜದುಂಡೆಗಳನ್ನು ತಯಾರಿಸಿ, ಬಯಲಲ್ಲಿ ಹಾಕಿಸುತ್ತಾರೆ. ಕಥೆ, ಕವನಗಳ ಮೂಲಕ ಮಕ್ಕಳಲ್ಲಿ ಪರಿಸರ ಪ್ರೀತಿ ಬೆಳೆಸುತ್ತಿದ್ದಾರೆ.

ಗಣೇಶ ಚತುರ್ಥಿ ಸಂದರ್ಭದಲ್ಲಿ ಬೀಜದುಂಡೆಯಲ್ಲಿಯೇ ಗಣಪನ ಸಣ್ಣ ಮೂರ್ತಿಗಳನ್ನು ಮಾಡುತ್ತಾರೆ. ಪಟಾಕಿ ಸಿಡಿಸದಂತೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಬೇಸಿಗೆಯಲ್ಲಿ ಪಕ್ಷಿಗಳ ದಾಹ ಇಂಗಿಸಲು ಮಣ್ಣಿನ ಸಣ್ಣ ತೊಟ್ಟಿ, ಬಟ್ಟಲು ನಿರ್ಮಿಸಿ ಮರ, ಗಿಡಗಳಲ್ಲಿ ಇರಿಸುತ್ತಾರೆ. ಸಂತಾನೋತ್ಪತ್ತಿಗೆ ಕೃತಕ ಗೂಡು ನಿರ್ಮಿಸುತ್ತಾರೆ.

ಪ್ರತಿ ವರ್ಷ ಒಂದೊಂದು ವನ್ಯಜೀವಿಯನ್ನು ಅಭ್ಯಾಸ ಮಾಡುವುದು ಅದರ ಸಂಪೂರ್ಣ ಜೀವನಚಕ್ರವನ್ನು ತಿಳಿದುಕೊಂಡು ಅವುಗಳನ್ನು ರಕ್ಷಿಸುತ್ತಾರೆ. ‘ಪ್ರತಿಯೊಂದು ಜೀವಿಗೂ ಮನುಷ್ಯರಂತೆ ಬದುಕುವ ಹಕ್ಕಿದೆ. ವನ್ಯಜೀವಿಗಳು, ಪ್ರಕೃತಿ ಇದ್ದರೆ ಮನುಷ್ಯ ಸಂಕುಲ ಉಳಿಯಲು ಸಾಧ್ಯ. ಪ್ರತಿಯೊಬ್ಬರೂ ಈ ಕೆಲಸ ಮಾಡಬೇಕು’ ಎನ್ನುತ್ತಾರೆ ಮಹೇಶ್ವರ ಹುರಕಡ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT