ಮಂಗಳವಾರ, ಸೆಪ್ಟೆಂಬರ್ 17, 2019
27 °C

'ಮಕ್ಕಳ ಕಲಿಕೆಗೆ 23 ಕೌಶಲ’

Published:
Updated:
Prajavani

ಹೊಸಪೇಟೆ: ‘ಮಕ್ಕಳ ಕಲಿಕೆಯಲ್ಲಿ 23 ಕೌಶಲಗಳಿವೆ. ಅವುಗಳನ್ನು ಉಪಯೋಗಿಸಿಕೊಂಡು ಪಾಠ ಮಾಡಿದಲ್ಲಿ ಅವರಲ್ಲಿ ದೊಡ್ಡ ಬದಲಾವಣೆ ಕಾಣಬಹುದು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಪ್ರಕಾಶ್‌ ಮನ್ನಂಗಿ ತಿಳಿಸಿದರು.

ತಾಲ್ಲೂಕು ಪಂಚಾಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಗುರುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು.

‘ಒಂದೊಂದು ಮಗುವಿನಲ್ಲಿ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ. ಅದನ್ನು ಶಿಕ್ಷಕರಾದವರು ಸೂಕ್ಷ್ಮವಾಗಿ ಗಮನಿಸಿ ಅದಕ್ಕೆ ಪ್ರೋತ್ಸಾಹ ಕೊಡಬೇಕು. ಸರ್ಕಾರ ಅನೇಕ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಅನುಷ್ಠಾನಗೊಳಿಸುವ ಹೊಣಗಾರಿಕೆಯೂ ಶಿಕ್ಷಕರ ಮೇಲಿದೆ’ ಎಂದು ಹೇಳಿದರು.

‘ಇಂದಿನ ಮಕ್ಕಳು, ಯುವಕರು ಮೊಬೈಲ್‌ಗೆ ದಾಸರಾಗುತ್ತಿದ್ದಾರೆ. ಅದರಿಂದ ಅವರನ್ನು ಬಿಡಿಸಿ, ಓದಿನಲ್ಲಿ ಏಕಾಗ್ರತೆ ಬೆಳೆಸುವ ಹೊಣೆಯೂ ಶಿಕ್ಷಕರ ಮೇಲಿದೆ. ಅದನ್ನು ಶಿಕ್ಷಕರಾದವರು ತಾಳ್ಮೆ, ಸಹನೆಯಿಂದ ಬೋಧನೆಯಲ್ಲಿ ಹೊಸ ಹೊಸ ವಿಧಾನಗಳನ್ನು ಅಳವಡಿಸಿಕೊಂಡು ಪಾಠ ಮಾಡಬೇಕು’ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಕುಮಾರಿ ಈಶ್ವರ್‌, ‘ಶಿಕ್ಷಕರು ಸಮಾಜದ ದೊಡ್ಡ ಆಸ್ತಿ. ಅವರ ಮೇಲೆ ದೊಡ್ಡ ಹೊಣೆಗಾರಿಕೆ ಇದೆ. ಇಂದಿನ ಮಕ್ಕಳು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಬೇಕಾದರೆ ಅದರಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು’ ಎಂದರು.

ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾದ ಚಾರಿ ದುರುಗಪ್ಪ, ರಾಮಚಂದ್ರ ಚಿತ್ರಗಾರ, ದಸ್ತಗಿರಿ ಸಾಹೇಬ್‌ ಅವರನ್ನು ಸನ್ಮಾನಿಸಲಾಯಿತು. 

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜೋಗದ ನೀಲಮ್ಮ, ಕಾರ್ಯನಿರ್ವಾಹಕ ಅಧಿಕಾರಿ ಆರ್‌.ಕೆ. ಶ್ರೀಕುಮಾರ್‌, ಸದಸ್ಯರಾದ ಹನುಮಕ್ಕ, ರಾಜಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್‌.ಡಿ. ಜೋಷಿ, ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನಗೌಡ, ವಿವಿಧ ಶಾಲೆಗಳ ಶಿಕ್ಷಕ/ಶಿಕ್ಷಕಿಯರು ಇದ್ದರು.

Post Comments (+)