ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ನಂತರ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಭರವಸೆ
Last Updated 20 ಅಕ್ಟೋಬರ್ 2020, 15:48 IST
ಅಕ್ಷರ ಗಾತ್ರ

ಹೊಸಪೇಟೆ: ವಿಧಾನ ಪರಿಷತ್‌ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶೀಲ್‌ ಜಿ. ನಮೋಶಿ ಪರ ಮತಯಾಚಿಸಲು ಆ ಪಕ್ಷದ ಮುಖಂಡರು, ಜನಪ್ರತಿನಿಧಿಗಳ ದಂಡೇ ಮಂಗಳವಾರ ಸಂಜೆ ನಗರಕ್ಕೆ ಬಂದಿತ್ತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮಾತನಾಡಿ, ‘ಈ ಹಿಂದೆ ರಾಜ್ಯ, ಕೇಂದ್ರದಲ್ಲಿ ನಮ್ಮ ಸರ್ಕಾರ ಇರದಿದ್ದಾಗ ಈ ಕ್ಷೇತ್ರದ ಜನ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಈಗ ಎರಡೂ ಕಡೆ ನಮ್ಮದೇ ಸರ್ಕಾರ ಇದೆ. ನಮ್ಮ ಪಕ್ಷದ ಅಭ್ಯರ್ಥಿ ಗೆದ್ದರೆ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ಸಹಕಾರಿಯಾಗುತ್ತದೆ’ ಎಂದರು.

‘ಬೆಳಿಗ್ಗೆಯಿಂದ ಸಂಜೆಯವರೆಗೆ ವಿಧಾನಸಭೆಯಲ್ಲಿ ಕೂತು, ಏನೇ ಸಮಸ್ಯೆಗಳಿದ್ದರೂ ವಿಧಾನ ಪರಿಷತ್ತಿನಲ್ಲಿ ಚರ್ಚಿಸಿ, ಅವುಗಳಿಗೆ ನ್ಯಾಯ ಒದಗಿಸಿಕೊಡುವ ಕೆಲಸ ಶಶೀಲ್‌ ನಮೋಶಿ ಮಾಡುತ್ತ ಬಂದಿದ್ದಾರೆ. ಸಮಸ್ಯೆಗಳಿಗೆ ಸ್ಪಂದಿಸುವವರಿಗೆ ಮತ ಕೊಟ್ಟು ಗೆಲ್ಲಿಸಬೇಕು. ಖಂಡಿತವಾಗಿ ಶಿಕ್ಷಕರು ಆ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ನನಗಿದೆ’ ಎಂದು ಹೇಳಿದರು.

‘ಅನುದಾನ, ಅನುದಾನ ರಹಿತ ಶಾಲೆಗಳ ಸಮಸ್ಯೆಗಳು, ದೈಹಿಕ ಶಿಕ್ಷಕರ ಕಷ್ಟಗಳಿಗೆ ಸಂಬಂಧಿಸಿದಂತೆ ಚುನಾವಣೆ ನಂತರ ಸಭೆ ಸೇರಿ ವಿಸ್ತೃತವಾಗಿ ಚರ್ಚಿಸಲಾಗುವುದು. ಬಳಿಕ ಅವುಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ತಿಳಿಸಿದರು.

ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಮಾತನಾಡಿ, ‘ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಬೇಕಿದೆ. ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿ ತರಲು ಹೊರಟಿದೆ’ ಎಂದರು.

ಅರಣ್ಯ ಸಚಿವ ಆನಂದ್ ಸಿಂಗ್, ‘ಪ್ರಜಾಪ್ರಭುತ್ವದಲ್ಲಿ ಗುಂಪುಗಾರಿಕೆ ಸಹಜ. ಆ ಗುಂಪುಗಾರಿಕೆ ಬಿಟ್ಟು ಬಿಜೆಪಿ ಅಭ್ಯರ್ಥಿ ನಮೋಶಿ ಅವರನ್ನು ಗೆಲ್ಲಿಸಬೇಕು’ ಎಂದು ಹೇಳಿದರು.

ಶಶೀಲ್‌ ಜಿ. ನಮೋಶಿ ಮಾತನಾಡಿ, ‘ಕಾಂಗ್ರೆಸ್‌ ಎಂದೂ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಶ್ರಮಿಸಿಲ್ಲ. ಮೆಕಾಲೆ ಶಿಕ್ಷಣ ಪದ್ದತಿಯನ್ನು ಮುಂದುವರಿಸಿದ್ದರು. ನಮ್ಮ ಮಕ್ಕಳಿಗೆ ಎಂತಹ ಶಿಕ್ಷಣ ಕೊಡಬೇಕು ಎನ್ನುವುದರ ಬಗ್ಗೆ ಯೋಚಿಸಿರಲಿಲ್ಲ. ಆದರೆ, ಮೋದಿಯವರು ಅದರ ಬಗ್ಗೆ ಗಂಭಿರವಾಗಿ ಆಲೋಚಿಸಿ, ಹೊಸ ಶಿಕ್ಷಣ ನೀತಿ ಜಾರಿಗೆ ತಂದಿದ್ದಾರೆ’ ಎಂದರು.

ಶಾಸಕರಾದ ಜಿ. ಕರುಣಾಕರ ರೆಡ್ಡಿ, ಸೋಮಶೇಖರ್‌ ರೆಡ್ಡಿ, ಮುಖಂಡರಾದ ಅಶ್ವತ್ಥನಾರಾಯಣ, ಸಿದ್ದೇಶ್‌, ಚಿದಾನಂದಮೂರ್ತಿ, ನೇಮಿರಾಜ ನಾಯ್ಕ, ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ, ಮಂಡಲ ಅಧ್ಯಕ್ಷ ಬಸವರಾಜ ನಾಲತ್ವಾಡ, ಹುಡಾ ಅಧ್ಯಕ್ಷ ಅಶೋಕ್‌ ಜೀರೆ, ಬುಡಾ ಅಧ್ಯಕ್ಷ ದಮ್ಮೂರು ಶೇಖರ್‌, ಮಣಿಪಾಲ್, ರಾಮಲಿಂಗಪ್ಪ, ಗುರುಲಿಂಗನಗೌಡ, ಮೋತ್ಕರ್ ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT