ಬುಧವಾರ, ಸೆಪ್ಟೆಂಬರ್ 18, 2019
25 °C
ಕಡ್ಡಾಯ ವರ್ಗಾವಣೆ ಪ್ರಕ್ರಿಯೆ ಅವೈಜ್ಞಾನಿಕ: ಶಿಕ್ಷಕರ ಆರೋಪ

ಕೌನ್ಸಿಲಿಂಗ್‌ ಸ್ಥಳದಲ್ಲಿ ಡಿಡಿಪಿಐ ಜೊತೆ ವಾಗ್ವಾದ

Published:
Updated:
Prajavani

ಬಳ್ಳಾರಿ: ‘ಹತ್ತು ವರ್ಷ ಮೇಲ್ಪಟ್ಟು ಒಂದೇ ಕಡೆ ಕರ್ತವ್ಯ ನಿರ್ವಹಿಸಿರುವವರ ಕಡ್ಡಾಯ ವರ್ಗಾವಣೆ ಪ್ರಕ್ರಿಯೆ ಅವೈಜ್ಞಾನಿಕವಾಗಿದೆ’ ಎಂದು ಆರೋಪಿಸಿ ನೂರಾರು ಶಿಕ್ಷಕರು ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಓ.ಶ್ರೀಧರನ್‌ ಅವರೊಂದಿಗೆ ವಾಗ್ವಾದ ನಡೆಸಿದರು.

‘ಸಿರುಗುಪ್ಪ ತಾಲ್ಲೂಕಿನಲ್ಲಿ ಹೆಚ್ಚು ಶಿಕ್ಷಕರ ಹುದ್ದೆ ಖಾಲಿ ಇರುವುದರಿಂದ ಅಲ್ಲಿಗೆ ಮೊದಲು ಶಿಕ್ಷಕರನ್ನು ವರ್ಗಾಯಿಸಿದ ಬಳಿಕ, ಇತರೆ ತಾಲ್ಲೂಕುಗಳ ವರ್ಗಾವಣೆ ಪ್ರಕ್ರಿಯೆಯನ್ನು ನಡೆಸುವ ನಿರ್ಧಾರವೂ ಅವೈಜ್ಞಾನಿಕವಾಗಿದೆ. ಶಿಕ್ಷಕರನ್ನು ಅವರು ಕೆಲಸ ಮಾಡುತ್ತಿರುವ ತಾಲ್ಲೂಕಿನೊಳಗೇ ವರ್ಗಾವಣೆ ಮಾಡಬೇಕು’ ಎಂದು ಶಿಕ್ಷಕರು ಆಗ್ರಹಿಸಿದರು.

‘ಕಡ್ಡಾಯ ವರ್ಗಾವಣೆಗೆ ಅರ್ಹರಿರುವ ಶಿಕ್ಷಕರನ್ನು ಪಟ್ಟಿ ಮಾಡಿದ ಬಳಿಕ, ರೈತರು, ವ್ಯಾಪರಸ್ಥರು, ಖಾಸಗಿ ಸಂಸ್ಥೆಗಳ ಉದ್ಯೋಗಿಗಳನ್ನು ಮದುವೆಯಾದವರಿಗೆ ಮಾತ್ರ ವರ್ಗಾವಣೆ ನೀತಿ ಅನ್ವಯಿಸುವುದು ಅಮಾನವೀಯ. ಸರ್ಕಾರಿ ನೌಕರ ದಂಪತಿ, ವಿಧವೆಯವರು, ಅವಿವಾಹಿತ ಮಹಿಳೆಯರು, ಗಂಭೀರ ಕಾಯಿಲೆಯುಳ್ಳವರು ಮತ್ತು ಸರ್ಕಾರಿ ಸಂಘ ಸಂಸ್ಥೆಗಳ ಮುಖಂಡರಿಗೆ ಮಾತ್ರ ವರ್ಗಾವಣೆಯಿಂದ ವಿನಾಯ್ತಿ ನೀಡಿರುವುದು ಸರಿಯಲ್ಲ’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ನಿಂಗಪ್ಪ, ಶಿಕ್ಷಕರಾದ ಬಳ್ಳಾರಿ ನಗರದ ಶ್ರೀನಿವಾಸರೆಡ್ಡಿ, ಹೊಸಪೇಟೆಯ ಈರಮ್ಮ ಹಿರೇಮಠ್‌, ಲಕ್ಷ್ಮಿ, ಮಲ್ಲೇಶ್ ಆಕ್ರೋಶ ವ್ಯಕ್ತಪಡಿಸಿದರು.

‘2007ರ ವರ್ಗಾವಣೆ ನೀತಿಯ ಅನುಸಾರವಾಗಿಯೇ ವರ್ಗಾವಣೆ ಮಾಡಬೇಕು. ಆ ನೀತಿಯಲ್ಲಿ ಎಲ್ಲಿಯೂ ತಾರತಮ್ಯವಿಲ್ಲ. ಹತ್ತು ವರ್ಷ ಪೂರೈಸಿದ ಎಲ್ಲರನ್ನೂ ವರ್ಗಾಯಿಸಬೇಕು ಎಂದು ನೀತಿಯಲ್ಲಿ ಸ್ಪಷ್ಟಪಡಿಸಿದ್ದರೂ, ಅದನ್ನು ಉಲ್ಲಂಘಿಸಿ ವರ್ಗಾವಣೆ ನಡೆಸಲಾಗುತ್ತಿದೆ’ ಎಂದು ದೂರಿದರು.

‘ಕಡ್ಡಾಯ ವರ್ಗಾವಣೆ ನೀತಿಗೆ ನಮ್ಮ ವಿರೋಧವಿಲ್ಲ. ಆದರೆ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ವರ್ಗಾವಣೆ ಮಾಡಿದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಚಕಾರ ಬರುತ್ತದೆ. ಕುಟುಂಬ ನಿರ್ವಹಣೆ ಕಷ್ಟವಾಗುತ್ತದೆ. ಶೈಕ್ಷಣಿಕ ವರ್ಷದ ಆರಂಭದಲ್ಲೇ ವರ್ಗಾವಣೆ ಮಾಡಬೇಕು’ ಎಂದು ಆಗ್ರಹಿಸಿದರು.

ಸ್ಥಳಕ್ಕೆ ಬಂದ ಡಿಡಿಪಿಐ ಓ.ಶ್ರೀಧರನ್‌, ‘ಇಲಾಖೆಯ ಆಯುಕ್ತರ ಕಚೇರಿಯಿಂದ ಬಂದಿರುವ ಸೂಚನೆಗಳಿಗೆ ಅನುಸಾರವೇ ವರ್ಗಾವಣೆ ಕೌನ್ಸಿಲಿಂಗ್‌ ಅನ್ನು ನಡೆಸಲಾಗುತ್ತಿದೆ. ಇದರಲ್ಲಿ ನಮ್ಮ ಪಾತ್ರವೇನೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ವರ್ಗಾವಣೆ ನೀತಿಯಲ್ಲಿ ಜಿಲ್ಲೆಯನ್ನು ಒಂದು ಘಟಕ ಎಂದು ಪರಿಗಣಿಸಿರುವುದರಿಂದ ಯಾವುದೇ ತಾಲ್ಲೂಕಿಗಾದರೂ ಶಿಕ್ಷಕರನ್ನು ವರ್ಗಾಯಿಸಲು ಅವಕಾಶವಿದೆ’ ಎಂದರು. ಶಿಕ್ಷಕರ ವಿರೋಧದ ಪರಿಣಾಮವಾಗಿ ಕೌನ್ಸಿಲಿಂಗ್‌ ಪ್ರಕ್ರಿಯೆ ಕೆಲ ಹೊತ್ತು ಸ್ಥಗಿತಗೊಂಡಿತ್ತು. ನಂತರ ಸಂಜೆವರೆಗೂ ನಡೆಯಿತು.

Post Comments (+)