ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸುಡುತ್ತಿದೆ ನಿಗಿನಿಗಿ ಕೆಂಡದ ಬಿಸಿಲು

ಬೇಸಿಗೆ ಆರಂಭದಲ್ಲೇ 37 ಡಿಗ್ರಿ ಸೆಲ್ಸಿಯಸ್‌ ಬಿಸಿಲು; ಸುಡುವ ಬಿಸಿಲಿಗೆ ಕಂಗೆಟ್ಟ ಜನ
Last Updated 20 ಫೆಬ್ರುವರಿ 2019, 12:51 IST
ಅಕ್ಷರ ಗಾತ್ರ

ಹೊಸಪೇಟೆ: ಬೇಸಿಗೆ ಆರಂಭದಲ್ಲೇ ಜಿಲ್ಲೆಯಲ್ಲಿ ಸೂರ್ಯ ಪ್ರತಾಪ ತೋರಿಸುತ್ತಿದ್ದು, ಸುಡುವ ಬಿಸಿಲಿಗೆ ಜನ ಕಂಗೆಟ್ಟಿ ಹೋಗಿದ್ದಾರೆ.

ಫೆಬ್ರುವರಿ ಎರಡನೇ ವಾರದ ವರೆಗೆ ತಾಪಮಾನ 30ರ ಆಸುಪಾಸಿನಲ್ಲಿತ್ತು. ಆದರೆ, ಕಳೆದ ಕೆಲವು ದಿನಗಳಿಂದ ಉಷ್ಣಾಂಶದಲ್ಲಿ ಭಾರಿ ಏರಿಕೆ ಉಂಟಾಗಿದೆ. ಬುಧವಾರ 37 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ತಿಂಗಳಾಂತ್ಯದ ವರೆಗೆ 40 ಡಿಗ್ರಿ ಸೆಲ್ಸಿಯಸ್‌ ಗಡಿ ತಲುಪಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಬಳ್ಳಾರಿ ಜಿಲ್ಲೆಯಲ್ಲೇ ಅತ್ಯಧಿಕ ಉಷ್ಣಾಂಶ ದಾಖಲಾಗಿದೆ.ಬೆಳಿಗ್ಗೆ ಏಳರಿಂದಲೇ ಬಿಸಿಲು ಮೈಸುಡುತ್ತಿದೆ. ಸಂಜೆ ಆರರ ವರೆಗೆ ಸೂರ್ಯ ಕೆಂಡ ಕಾರುತ್ತಿದ್ದಾನೆ. ಬಿಸಿಲಿನ ಝಳಕ್ಕೆ ಜನ ಸೋತು ಸುಣ್ಣವಾಗುತ್ತಿದ್ದಾರೆ.

ಇಷ್ಟು ದಿನ ಚಳಿಗಾಲವಿದ್ದ ಕಾರಣ ಜನ ವಾಯುವಿಹಾರಕ್ಕೆ ಬೆಳಿಗ್ಗೆ ಆರು ಗಂಟೆಯ ನಂತರ ಹೋಗುತ್ತಿದ್ದರು. ಈಗ ಬಿಸಿಲು ಹೆಚ್ಚಾಗುತ್ತಿದ್ದಂತೆ 5.30ಕ್ಕೆಲ್ಲ ವಾಯುವಿಹಾರಕ್ಕೆ ಬಂದು ಏಳು ಗಂಟೆಗೆ ಹಿಂತಿರುಗುತ್ತಿದ್ದಾರೆ. ಸಂಜೆ ಆರು ಗಂಟೆಯ ನಂತರ ಮತ್ತೆ ಹೊರ ಬರುತ್ತಿದ್ದಾರೆ. ಇದರಿಂದ ಇಲ್ಲಿನ ಮುನ್ಸಿಪಲ್‌ ಮೈದಾನ ಸೇರಿದಂತೆ ಇತರೆ ಉದ್ಯಾನಗಳು ಬೆಳಿಗ್ಗೆಯಿಂದ ಸಂಜೆಯ ವರೆಗೆ ಜನರಿಲ್ಲದೆ ಬಿಕೋ ಎನ್ನುತ್ತಿವೆ.

ಅಷ್ಟೇ ಅಲ್ಲ, ಮಧ್ಯಾಹ್ನ 12 ಗಂಟೆಯಿಂದ ಸಂಜೆ ಐದು ಗಂಟೆಯ ವರೆಗೆ ಪ್ರಮುಖ ರಸ್ತೆಗಳಲ್ಲಿ ಜನಸಂಚಾರವಿಲ್ಲದೆ ಬಿಕೋ ಎನ್ನುತ್ತಿವೆ. ಬಂದ್‌ ವಾತಾವರಣ ಸೃಷ್ಟಿಯಾಗುತ್ತಿದೆ. ಮಾರುಕಟ್ಟೆಗಳಲ್ಲೂ ಜನ ಕಂಡು ಬರುತ್ತಿಲ್ಲ. ಕೆಲವರು ಅನಿವಾರ್ಯವಾಗಿ ಮಧ್ಯಾಹ್ನ ಅಂಗಡಿ ಮುಗ್ಗಟ್ಟುಗಳಿಗೆ ಬೀಗ ಜಡಿದು, ಸಂಜೆ ತೆರೆಯುತ್ತಿದ್ದಾರೆ. ಜನ ದೈನಂದಿನ ಕೆಲಸವನ್ನು ಮಧ್ಯಾಹ್ನ 12 ಗಂಟೆಯ ಒಳಗೆ ಮುಗಿಸಿಕೊಳ್ಳುತ್ತಿದ್ದಾರೆ. ಪುನಃ ಸಂಜೆ ಆರು ಗಂಟೆಯ ಬಳಿಕವಷ್ಟೇ ಹೊರಗೆ ಕಾಣಿಸಿಕೊಳ್ಳುತ್ತಿದ್ದಾರೆ.

ಹಗಲು ರಾತ್ರಿ ಫ್ಯಾನ್‌, ಎ.ಸಿ:ಉಷ್ಣಾಂಶದಲ್ಲಿ ಏಕಾಏಕಿ ಹೆಚ್ಚಳವಾದ ನಂತರ ಮನೆ, ಅಂಗಡಿ ಮುಗ್ಗಟ್ಟುಗಳಲ್ಲಿ ಹಗಲು– ರಾತ್ರಿ ಫ್ಯಾನ್‌, ಕೂಲರ್‌, ಎ.ಸಿ. ಹಾಕಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಬಿಸಿಲಿನ ಝಳಕ್ಕೆ ಕೂತಲ್ಲಿ, ನಿಂತಲ್ಲಿ ಜನ ಬೆವರುತ್ತಿದ್ದಾರೆ.

‘ರಾತ್ರಿಯಿಡೀ ಫ್ಯಾನ್‌ ಹಾಕಿದರೂ ನಿದ್ರೆ ಬರುತ್ತಿಲ್ಲ. ಬಿಸಿಲಿನ ಝಳದಿಂದ ಬಿಸಿ ಗಾಳಿ ಬರುತ್ತಿದೆ. ಕಟ್ಟಡ ಕಾದು ಕಾವಲಿಯಂತಾಗಿದ್ದು, ಫ್ಯಾನ್‌ ಎಷ್ಟೇ ವೇಗವಾಗಿ ಇಟ್ಟರೂ ಪ್ರಯೋಜನವಾಗುತ್ತಿಲ್ಲ. ಮನೆಯಲ್ಲಿ ಕೊತ..ಕೊತ.. ಕುದಿಯುವಂತಾಗಿದೆ. ಬೇಸಿಗೆ ಆರಂಭದಲ್ಲಿ ಇಷ್ಟೊಂದು ಬಿಸಿಲು ಹಿಂದೆಂದೂ ಕಂಡಿರಲಿಲ್ಲ’ ಎನ್ನುತ್ತಾರೆ ಪ್ರಾಧ್ಯಾಪಕ ಸುರೇಂದ್ರ.

‘ಬಿಸಿಲು ಹೆಚ್ಚಾಗಿರುವುದರಿಂದ ಅನಿವಾರ್ಯವಾಗಿ ಕೆಲವು ಬದಲಾವಣೆ ಮಾಡಿಕೊಳ್ಳಬೇಕಾಯಿತು. ನಿತ್ಯ ಹತ್ತಿ ಬಟ್ಟೆ ಧರಿಸುತ್ತಿದ್ದೇನೆ. ದ್ವಿಚಕ್ರ ವಾಹನದ ಬದಲು ಕಾರಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದೇನೆ. ಆಹಾರದ ಜತೆ ನಿತ್ಯ ಮಜ್ಜಿಗೆ ಸೇವಿಸುತ್ತಿದ್ದೇನೆ. ತಣ್ಣೀರಿನ ಸ್ನಾನ ಮಾಡುತ್ತಿದ್ದೇನೆ’ ಎಂದು ಗೃಹಿಣಿ ಶೋಭಾ ಹೇಳಿದರು.

ಇದೇ ವೇಳೆ ಕಬ್ಬಿನ ರಸ, ಹಣ್ಣಿನ ರಸಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಮಾರುಕಟ್ಟೆಯ ತುಂಬೆಲ್ಲ ಕಲ್ಲಂಗಡಿ ಆವರಿಸಿಕೊಂಡಿದ್ದು, ಉತ್ತಮ ವ್ಯಾಪಾರ ನಡೆಯುತ್ತಿದೆ. ಪ್ರತಿ ಕೆ.ಜಿ. ಕಲ್ಲಂಗಡಿ ₹12ರಿಂದ ₹15ಕ್ಕೆ ಮಾರಾಟ ಮಾಡಲಾಗುತ್ತಿದೆ. ಬರುವ ದಿನಗಳಲ್ಲಿ ಬೇಡಿಕೆ ಹೆಚ್ಚಾಗಿ, ದರ ಕೂಡ ಏರಿಕೆಯಾಗಬಹುದು ಎನ್ನುತ್ತಾರೆ ವ್ಯಾಪಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT