ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವಾಲಯ ನೇಮಕಾತಿ ಹಗರಣದ ವೃತ್ತಾಂತ: ಪದವೀಧರರ ಕೈಗೆ ಪೊರಕೆ

Last Updated 15 ಮಾರ್ಚ್ 2018, 20:11 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆ ಸಚಿವಾಲಯದಲ್ಲಿ ’ಡಿ’ ಗ್ರೂಪ್‌ ನೌಕರಿ ಪಡೆದ ಸಂಭ್ರಮದಲ್ಲಿ ನೇಮಕಾತಿ ಆದೇಶ ಪಡೆದವರ ಕೈಗೆ ಸಿಕ್ಕಿದ್ದು ಪೊರಕೆ! ಆದೇಶ ಪ್ರತಿ ನೋಡುತ್ತಿದ್ದಂತೆ ಅನೇಕರು ಕಂಗಾಲಾಗಿದ್ದಾರೆ.

ಕಸ ಗುಡಿಸಲು 51 ಮಂದಿಯನ್ನು ನೇಮಕ ಮಾಡಲಾಗಿದೆ. ಇವರಲ್ಲಿ ಬಹುತೇಕರು ಪದವೀಧರರು!

‘ನಾವು ‘ಡಿ’ ಗ್ರೂಪ್‌ ಹುದ್ದೆಗಳೆಂದರೆ ಕಚೇರಿ ಕೆಲಸ ಎಂದು ಅರ್ಜಿ ಹಾಕಿದ್ದೆವು. ಆದರೆ, ಆದೇಶ ಕೊಟ್ಟು ಕಸಗುಡಿಸಿ, ಶೌಚಾಲಯ ಸ್ವಚ್ಛ ಮಾಡಿ ಎಂದು ಹೇಳುತ್ತಿದ್ದಾರೆ. ಅದನ್ನು ಒಪ್ಪಲು ಹೇಗೆ ಸಾಧ್ಯ? ಕಸ ಗುಡಿಸುವ ಕೆಲಸ ಎಂದರೆ ಅರ್ಜಿ ಹಾಕುತ್ತಿರಲಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಭ್ಯರ್ಥಿಯೊಬ್ಬರು ತಿಳಿಸಿದರು.

‘ನಾನು ಬಿ.ಕಾಂ ಓದಿದ್ದೇನೆ. ಶಾಸಕರ ಭವನದಲ್ಲಿ ಕಸ ಹೊಡೆಯುವ ಕೆಲಸ ಕೊಟ್ಟಿದ್ದಾರೆ. ಇಷ್ಟು ಓದಿ ಕಸ ಹೊಡೆಯುವ ಕೆಲಸಕ್ಕೆ ಮನಸ್ಸು ಒಪ್ಪುತ್ತಿಲ್ಲ. ನಮಗೆ ಅನ್ಯಾಯ ಆಗಿದೆ. ಮುಂದೇನು ಮಾಡಬೇಕು ಎನ್ನುವುದು ತೋಚುತ್ತಿಲ್ಲ’ ಎಂದು ಮತ್ತೊಬ್ಬ ಹೊಸ ಉದ್ಯೋಗಿ ಹೇಳಿದರು.

ಸುಮಾರು ಆರಕ್ಕೂ ಹೆಚ್ಚು ಪದವೀಧರರು ತಮಗೆ ಹುದ್ದೆ ಬದಲಿಸಿ ಕೊಡಬೇಕೆಂದು ಅಧಿಕಾರಿಗಳಿಗೆ ದುಂಬಾಲು ಬಿದ್ದಿದ್ದಾರೆ.

ಆದರೆ, ‘ದಲಾಯತ್‌ ಹಾಗೂ ಸಹಾಯಕರ ಹುದ್ದೆಗಳಲ್ಲಿ ಈಗಾಗಲೇ ಹೆಚ್ಚುವರಿ ಸಿಬ್ಬಂದಿ ಇರುವುದರಿಂದ ಹೊಸದಾಗಿ ನೇಮಕಗೊಂಡ ಬಹುತೇಕರಿಗೆ ಸ್ವೀಪರ್ಸ್‌ ಹುದ್ದೆಗಳಿಗೆ ಆದೇಶ ನೀಡಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.

‘ಕಸ ಗುಡಿಸುವ ಹುದ್ದೆ ಬೇಡ’ ಎಂದು ತಗಾದೆ ತೆಗೆದವರಿಗೆ ಲಿಫ್ಟ್‌ ನಿರ್ವಾಹಕರ ಕೆಲಸಕ್ಕೂ ವರ್ಗಾಯಿಸುವ ಪ್ರಯತ್ನ ನಡೆದಿದೆ. ಇದನ್ನೂ ಸಾಕಷ್ಟು ಪದವೀಧರರು ನಿರಾಕರಿಸಿದ್ದಾರೆ.

ನಿಯೋಜನೆ ಮೇಲೆ ಬೇರೆಡೆ: ಮುಖ್ಯಮಂತ್ರಿ, ಸ್ಪೀಕರ್‌ ಮತ್ತಿತರರ ಕಚೇರಿಗಳಲ್ಲಿ ಗುತ್ತಿಗೆ ಕೆಲಸ ಮಾಡುತ್ತಿದ್ದವರು ಈಗ ಸಹಾಯಕ, ದಲಾಯತ್‌ ಮತ್ತು ಕಸ ಗುಡಿಸುವ ಹುದ್ದೆಗಳ ನೇಮಕಾತಿ ಪತ್ರ ಪಡೆದು ನಿಯೋಜನೆ ಮೇಲೆ ಮೂಲ ಸ್ಥಳಗಳಿಗೆ ಮರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿಎಂ ಮನೆ ಕಸ ಗುಡಿಸುವವನಿಗೂ ನೌಕರಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೈಸೂರು ಮನೆಯಲ್ಲಿ ಕಸ ಗುಡಿಸುವ ವ್ಯಕ್ತಿಗೂ ವಿಧಾನಸೌಧ ಸಚಿವಾಲಯದಲ್ಲಿ ನೌಕರಿ ಸಿಕ್ಕಿದೆ’ ಎಂದು ಸಚಿವಾಲಯದ ಮೂಲಗಳು ಖಚಿತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT